20 ವಾಹನಕ್ಕೆ ಗುದ್ದಿಸಿದ ಟ್ರಕ್‌ನ್ನು 12 ಕಿ.ಮೀ. ಚೇಸ್‌ ಮಾಡಿದ ಪೊಲೀಸರು

KannadaprabhaNewsNetwork |  
Published : Dec 22, 2025, 03:15 AM IST
ಸರಣಿ ಅಪಘಾತ ಸರಣಿ ಅಪಘಾತ | Kannada Prabha

ಸಾರಾಂಶ

ಪಾನಮತ್ತ ಚಾಲಕನೊಬ್ಬ ಓಡಿಸುತ್ತಿದ್ದ ಕಂಟೈನರ್‌ ವಾಹನ ರಸ್ತೆಯಲ್ಲಿ ಸಂಚರಿಸುತ್ತಿದ್ದ ಹಾಗೂ ರಸ್ತೆಬದಿ ನಿಂತಿದ್ದ 20 ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ ಹೊಡೆದ ಭೀಕರ ಘಟನೆ ಆನೇಕಲ್ ಮತ್ತು ಸೂರ್ಯ ನಗರ ಠಾಣೆಗಳ ನಡುವೆ ಭಾನುವಾರ ಬೆಳಿಗ್ಗೆ 12 ಗಂಟೆ ಸುಮಾರಿಗೆ ನಡೆದಿದೆ.

ಕನ್ನಡಪ್ರಭ ವಾರ್ತೆ ಆನೇಕಲ್

ಪಾನಮತ್ತ ಚಾಲಕನೊಬ್ಬ ಓಡಿಸುತ್ತಿದ್ದ ಕಂಟೈನರ್‌ ವಾಹನ ರಸ್ತೆಯಲ್ಲಿ ಸಂಚರಿಸುತ್ತಿದ್ದ ಹಾಗೂ ರಸ್ತೆಬದಿ ನಿಂತಿದ್ದ 20 ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ ಹೊಡೆದ ಭೀಕರ ಘಟನೆ ಆನೇಕಲ್ ಮತ್ತು ಸೂರ್ಯ ನಗರ ಠಾಣೆಗಳ ನಡುವೆ ಭಾನುವಾರ ಬೆಳಿಗ್ಗೆ 12 ಗಂಟೆ ಸುಮಾರಿಗೆ ನಡೆದಿದೆ.

ಈ ಭೀಕರ ಸರಣಿ ಅಪಘಾತದಲ್ಲಿ ನಾಲ್ಕಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿವೆ. ಸರಣಿ ಅಪಘಾತದ ಬಳಿಕವೂ ವಾಹನವನ್ನು ನಿಲ್ಲಿಸದೆ ಎರ್ರಾಬಿರ್ರಿಯಾಗಿ ಓಡಿಸುತ್ತಿದ್ದ ಕಂಟೈನರ್‌ ವಾಹನವನ್ನು ಸಾರ್ವಜನಿಕರು ತಡೆದು ಚಾಲಕನನ್ನು ಕೆಳಗೆಳೆದು ಥಳಿಸಿದ್ದು ಗಂಭೀರ ಗಾಯಗೊಂಡಿರುವ ಆತನನ್ನು ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ. ಚಾಲಕನನ್ನು ಉತ್ತರಪ್ರದೇಶ ಮೂಲದ ಪ್ರೇಮ್‌ ಎಂದು ಗುರುತಿಸಲಾಗಿದೆ.

ಬೆಳಿಗ್ಗೆ ಸ್ಪಿಡೆಕ್ಸ್ ಕಾರ್ಗೋಗೆ ಸೇರಿದ ಕಂಟೈನರ್ ಕೋಲ್ಕತಾದಿಂದ ಅತ್ತಿಬೆಲೆಗೆ ಸಾಮಗ್ರಿಯನ್ನು ಅನ್ ಲೋಡ್ ಮಾಡಲು ಬಂದಿತ್ತು. ಅನ್‌ಲೋಡ್‌ ಆದ ಮೇಲೆ ಸಮೀಪದ ಬೆಸ್ತಮಾನಹಳ್ಳಿಯಿಂದ ಚಂದಾಪುರ ಕಡೆಗೆ ತೆರಳುತ್ತಿತ್ತು. ಆಗ ಪಾನಮತ್ತ ಚಾಲಕ ಕಂಟೈನರ್‌ನ್ನು ವೇಗವಾಗಿ ಚಲಾಯಿಸಿದ್ದು 20 ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ ಹೊಡೆದಿದ್ದಾನೆ. ಆನೇಕಲ್ ಬಳಿ ಆಟೋಗೆ ಡಿಕ್ಕಿ ಹೊಡೆದ ಪರಿಣಾಮ ಅದರಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರಿಗೆ ಕೈ ಕಾಲು, ಸೊಂಟಕ್ಕೆ ತೀವ್ರ ಪೆಟ್ಟಾಗಿ ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆಟೋ ಚಾಲಕನಿಗೂ ಗಾಯಗಳಾಗಿವೆ. ನಂತರ ಕಾರಿಗೆ ಡಿಕ್ಕಿಯಾಗಿದ್ದು ಇಬ್ಬರಿಗೆ ಗಾಯಗಳಾಗಿವೆ. ಅಲ್ಲದೆ ಸೂರ್ಯನಗರ ಸಮೀಪ ಪಾದಚಾರಿಯೊಬ್ಬರು ಗಾಯಗೊಂಡಿದ್ದಾರೆ.

ನತದೃಷ್ಟ ಕಂಟೈನರ್‌ನಲ್ಲಿ ಚಾಲಕನ ಜೊತೆ ಕ್ಲೀನರ್‌ ಪಟೇಲ್‌ ಇದ್ದು ಆತ ಚಾಲಕನಿಗೆ ತಿಳಿಹೇಳಿದರೂ ಕೇಳದೆ ವೇಗವಾಗಿ ವಾಹನ ಚಲಾಯಿಸಿದ್ದಾನೆ ಎನ್ನಲಾಗಿದ್ದು ಕ್ಲೀನರ್‌ ಆನೇಕಲ್‌ ಬಳಿಯೇ ಜಿಗಿದು ತಪ್ಪಿಸಿಕೊಂಡಿದ್ದಾನೆ.

ಈ ಘಟನೆಯ ಬಳಿಕ ವೇಗವಾಗಿ ಚಲಿಸುತ್ತಿದ್ದ ಕಂಟೈನರ್‌ ಅನ್ನು ನಿಲ್ಲಿಸಲು ಆನೇಕಲ್ ಪೊಲೀಸರು ಮಾಡಿದ ಪ್ರಯತ್ನಗಳು ವ್ಯರ್ಥವಾಗಿವೆ. ಸಿಕ್ಕ ಸಿಕ್ಕ ವಾಹನಗಳಿಗೆ ಡಿಕ್ಕಿ ಹೊಡೆದು ಹೋಗುವಾಗ ಕೆಲ ಯುವಕರು ಸಾರ್ವಜನಿಕರು ಮತ್ತು ವಾಹನಗಳನ್ನು ಎಚ್ಚರಿಸಿ ರಸ್ತೆಗಳ ಪಕ್ಕಕ್ಕೆ ಕಳಿಸಲು ನೆರವಾಗಿದ್ದಾರೆ. ಆನೇಕಲ್‌ ಪೊಲೀಸರು 12 ಕಿಲೋ ಮೀಟರ್‌ಗೂ ಹೆಚ್ಚು ದೂರದವರೆಗೂ ವಾಹನವನ್ನು ಹಿಂಬಾಲಿಸಿದರೂ ಚಾಲಕ ವಾಹನವನ್ನು ನಿಲ್ಲಿಸಿಲ್ಲ. ಬಳಿಕ ಸೂರ್ಯ ನಗರ ಪೊಲೀಸರಿಗೆ ಆನೇಕಲ್ ಪೊಲೀಸರು ಮಾಹಿತಿ ನೀಡಿ ಕಂಟೈನರ್‌ ನಿಲ್ಲಿಸಲು ಕೋರಿದ್ದಾರೆ. ಆಗ ಪೊಲೀಸರನ್ನು ಕಂಡ ಚಾಲಕ ವೇಗ ಹೆಚ್ಚಿಸಿ ಮುನ್ನಡೆದಿದ್ದಾನೆ. ಕೊನೆಗೆ ಸಾರ್ವಜನಿಕರು ಕಲ್ಲುಗಳನ್ನು ಚಾಲಕನತ್ತ ಎಸೆದು ವಾಹನದ ಮುಂದಿನ ಗಾಜನ್ನು ಪುಡಿಗಟ್ಟಿದ್ದಾರೆ. ಆದರೂ ಚಾಲಕ ಸೂರ್ಯನಗರದಿಂದ ಎರಡು ಕಿ.ಮೀ. ದೂರದವರೆಗೆ ಕ್ರಮಿಸಿ ಚಂದಾಪುರ ಮುಖ್ಯ ರಸ್ತೆಯಲ್ಲಿ ನಿಲ್ಲಿಸಿದ್ದಾನೆ. ಆಗ ಆಕ್ರೋಶಭರಿತ ಸಾರ್ವಜನಿಕರು ಚಾಲಕನನ್ನು ಕಂಟೈನರ್ ನಿಂದ ಹೊರಗೆಳೆದು ಥಳಿಸಿದ್ದಾರೆ. ಮಧ್ಯೆ ಪ್ರವೇಶಿಸಿದ ಸೂರ್ಯಸಿಟಿ ಪೊಲೀಸರು ಚಾಲಕನನ್ನು ವಶಕ್ಕೆ ಪಡೆದು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಘಟನೆಯಲ್ಲಿ ಇಬ್ಬರು ಮೃತಪಟ್ಟಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಎಷ್ಟು ಜನರಿಗೆ ಗಾಯಗಳಾಗಿವೆ, ಎಷ್ಟು ವಾಹನಗಳು ಜಖಂಗೊಂಡಿವೆ ಹಾಗೂ ಘಟನೆಗೆ ಸ್ಪಷ್ಟ ಕಾರಣ ಏನೆಂಬುದು ವಿಚಾರಣೆ ನಂತರ ತಿಳಿಯುವುದೆಂದು ಪೊಲೀಸರು ತಿಳಿಸಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ನಿಯಂತ್ರಣ ತಪ್ಪಿ ಬೈಕ್ ಸವಾರ ದುರ್ಮರಣ
ತಡೆಗೋಡೆಗೆ ಕಾರು ಡಿಕ್ಕಿ: ನವ ವಿವಾಹಿತೆ ಸಾವು