ಪೊಲೀಸ್ ಮುಖ್ಯಪೇದೆ ಆತ್ಮಹತ್ಯೆ<bha>;</bha> ಅಧಿಕಾರಿಗಳ ಕಿರುಕುಳ ಆರೋಪ

KannadaprabhaNewsNetwork |  
Published : Oct 11, 2023, 12:45 AM IST
ಪ್ರಕಾಶ್ ನಾಯ್ಕ  | Kannada Prabha

ಸಾರಾಂಶ

ನಗರದ ಡಿಎಆರ್ ಪೊಲೀಸ್ ಮುಖ್ಯಪೇದೆ ಪ್ರಕಾಶ್ ನಾಯ್ಕ (25) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಿರಿಯ ಅಧಿಕಾರಿಗಳ ಕಿರುಕುಳವೇ ಪ್ರಕಾಶ್ ನಾಯ್ಕ ಸಾವಿಗೆ ಕಾರಣ ಎಂದು ಪೋಷಕರು ದೂರು ದಾಖಲಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬಳ್ಳಾರಿ ನಗರದ ಡಿಎಆರ್ ಪೊಲೀಸ್ ಮುಖ್ಯಪೇದೆ ಪ್ರಕಾಶ್ ನಾಯ್ಕ (25) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಿರಿಯ ಅಧಿಕಾರಿಗಳ ಕಿರುಕುಳವೇ ಪ್ರಕಾಶ್ ನಾಯ್ಕ ಸಾವಿಗೆ ಕಾರಣ ಎಂದು ಪೋಷಕರು ದೂರು ದಾಖಲಿಸಿದ್ದಾರೆ. ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಆನೇಕಲ್ ತಾಂಡದ ನಿವಾಸಿಯಾಗಿರುವ 2021ರ ಬ್ಯಾಚ್‌ನ ಮುಖ್ಯಪೇದೆಯಾಗಿದ್ದ ಪ್ರಕಾಶ್ ನಾಯ್ಕ ಅವರು ಕಳೆದ ಎರಡು ವರ್ಷದ ಹಿಂದೆಯಷ್ಟೇ ಕೆಲಸಕ್ಕೆ ಸೇರಿದ್ದರು. ಸಿಸಿಟಿ ತರಬೇತಿಗೆ ಬೆಂಗಳೂರಿಗೆ ತೆರಳುವಂತೆ ಈತನಿಗೆ ಅಧಿಕಾರಿಗಳು ಸೂಚಿಸಿದ್ದರು. ನಗರದ ಡಿಎಆರ್ ಕ್ವಾಟ್ರರ್ಸ್‌ನಲ್ಲಿದ್ದ ಪ್ರಕಾಶ್ ನಾಯ್ಕ ಅವರು ಮಂಗಳವಾರ ಬೆಳಗಿನ ಜಾವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗಾಂಧಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಧಿಕಾರಿಗಳ ಕಿರುಕುಳ: ಪ್ರಕಾಶ್ ನಾಯ್ಕ ಸಾವಿಗೆ ಡಿಎಆರ್ ಪೊಲೀಸ್ ಹಿರಿಯ ಅಧಿಕಾರಿಗಳ ಕಿರುಕುಳವೇ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ. ಪ್ರಕರಣ ಕುರಿತ ಎಫ್‌ಐಆರ್‌ನಲ್ಲಿ ಅಧಿಕಾರಿಗಳ ಮಾನಸಿಕ ಕಿರುಕುಳವೇ ಸಾವಿಗೆ ಕಾರಣ ಎಂದು ದೂರಿದ್ದಾರೆ. ಡಿಎಆರ್ ಡಿವೈಎಸ್ಪಿ ತಿಪ್ಪೇಸ್ವಾಮಿ, ಆರ್‌ಪಿಐ ಅಮೋಘ, ಗೋವಿಂದ, ಬರಹಗಾರರಾದ ಖಾದರ್ ಬಾಷಾ, ಕರ್ತವ್ಯ ನಿರತ ಅಧಿಕಾರಿಯಾದ ದಿವಾಕರ ಅವರು ಕಿರುಕುಳ ನೀಡುತ್ತಿದ್ದರು. ಹೆಚ್ಚುವರಿ ಕೆಲಸ ಮಾಡುವಂತೆ ಪೀಡಿಸುತ್ತಿದ್ದರು. ಮನೆಯ ಕೆಲಸ ಮಾಡುವಂತೆ ಒತ್ತಾಯಿಸುತ್ತಿದ್ದರು. ವಿನಾಕಾರಣ ಒತ್ತಡ ಹಾಕುತ್ತಿದ್ದಾರೆ ಎಂದು ಪ್ರಕಾಶ್ ನಾಯ್ಕ ತನ್ನ ಸಹೋದರ ಕುಮಾರ ನಾಯ್ಕ ಅವರಿಗೆ ಫೋನ್ ಮಾಡಿ ತಿಳಿಸುತ್ತಿದ್ದ. ಈ ಕುರಿತು ಮೇಲಧಿಕಾರಿಗಳ ಗಮನಕ್ಕೆ ತರುವಂತೆ ಸೂಚಿಸಿದಾಗ, ಮೇಲಧಿಕಾರಿಗಳ ಗಮನಕ್ಕೆ ತಂದರೆ ಮತ್ತಷ್ಟೂ ಕಿರುಕುಳ ನೀಡುತ್ತಾರೆ ಎಂದು ಹೇಳುತ್ತಿದ್ದ. ಎರಡು ತಿಂಗಳು ಟ್ರೈನಿಂಗ್ ಹಾಕಿದ್ದಾರೆ. ನನ್ನ ಆರೋಗ್ಯ ಸರಿಯಿಲ್ಲ. ಹೀಗಾಗಿ ನನಗೆ ಹೋಗಲು ಇಷ್ಟವಿಲ್ಲ. ತರಬೇತಿಗೆ ಹೋಗಲ್ಲ ಎಂದರೆ ತರಬೇತಿಗೆ ತೆರಳುವಂತೆ ಬಲವಂತ ಮಾಡುತ್ತಿದ್ದಾರೆ. ತರಬೇತಿಗೆ ಹೋಗದಿದ್ದರೆ ಹಣ ನೀಡಬೇಕು ಎನ್ನುತ್ತಿದ್ದಾರೆ. ತರಬೇತಿಗೆ ಹೋಗದಿದ್ದರೂ ಮನೆಕೆಲಸಕ್ಕೆ ಇರಬೇಕು ಎನ್ನುತ್ತಿದ್ದಾರೆ. ಈ ಎಲ್ಲ ಬೆಳವಣಿಗೆಯಿಂದ ತೀವ್ರ ಬೇಸರವಾಗಿದೆ ಎಂದು ಫೋನ್‌ನಲ್ಲಿ ಪ್ರಕಾಶ್ ನಾಯ್ಕ ತಿಳಿಸಿದ್ದ ಎಂದು ಪೋಷಕರು ನೀಡಿರುವ ಎಫ್‌ಐಆರ್‌ನಲ್ಲಿ ದಾಖಲಾಗಿದೆ.

PREV

Recommended Stories

ರೈತನ ಬ್ಯಾಂಕ್ ಖಾತೆಯಲ್ಲಿದ್ದ ಕೋಟ್ಯಂತರ ರು.ಗೆ ಕದೀಮರಿಂದ ಕನ್ನ..!
ಗ್ರಾಮ ಲೆಕ್ಕಿಗರ ಹುದ್ದೆಗೆ ನಕಲಿ ಅಂಗವಿಕಲ ಪ್ರಮಾಣಪತ್ರ ಸಲ್ಲಿಕೆ...!