ಬೆಂಗಳೂರು : ಕೌಟುಂಬಿಕ ವಿಚಾರಕ್ಕೆ ಸಂಬಂಧಿಕರು ಗಲಾಟೆ ಮಾಡಿಕೊಳ್ಳುವಾಗ ಬಿಡಿಸಲು ಮುಂದಾದ ಗಸ್ತು ಪೊಲೀಸ್ ಸಿಬ್ಬಂದಿಗೆ ಡ್ರ್ಯಾಗರ್‌ನಿಂದ ಹಲ್ಲೆ ನಡೆಸಿದ ಘಟನೆ ನಡೆದಿದ್ದು ಈ ಸಂಬಂಧ ಅಪ್ರಾಪ್ತ ಸೇರಿ ನಾಲ್ವರು ಆರೋಪಿಗಳನ್ನು ಚಾಮರಾಜಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಚಾಮರಾಜಪೇಟೆ ವಾಲ್ಮೀಕಿ ನಗರದಲ್ಲಿ ಶನಿವಾರ ರಾತ್ರಿ ಸುಮಾರು 9.30ಕ್ಕೆ ಈ ಘಟನೆ ನಡೆದಿದೆ. ಚಾಮರಾಜಪೇಟೆ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಸಂತೋಷ್ ಮತ್ತು ಕೆಂಗೇರಿ ಅಂಚೆಪಾಳ್ಯ ನಿವಾಸಿ ಮೊಹಮ್ಮದ್ ಶಫೀವುಲ್ಲಾ ಗಾಯಗೊಂಡಿದ್ದಾರೆ. ಈ ಸಂಬಂಧ ನೀಡಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಚಾಮರಾಜಪೇಟೆ ವಾಲ್ಮೀಕಿನಗರದ ತಬ್ರೇಜ್ ಅಲಿಯಾಸ್ ಚೋರ್ ತಬ್ರೇಜ್, ಆತನ ಸಹಚರರಾದ ಅಬ್ರೇಜ್, ಸಲ್ಮಾನ್ ಷಾಷಾ ಹಾಗೂ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ಏನಿದು ಘಟನೆ?
ಗಾಯಾಳು ಮೊಹಮ್ಮದ್ ಶಫೀವುಲ್ಲಾ ಸಹೋದರಿಯ ಪುತ್ರಿಯನ್ನು ಆರೋಪಿ ತಬ್ರೇಜ್ ಮದುವೆಯಾಗಿದ್ದ. ಕೌಟುಂಬಿಕ ಕಾರಣಕ್ಕೆ ವಿಚ್ಛೇದನ ನೀಡಿದ್ದ. ಹೀಗಾಗಿ ಶಫೀವುಲ್ಲಾ ತನ್ನ ಸಹೋದರಿ ಪುತ್ರಿಯನ್ನು ಬೇರೆ ಯುವಕನ ಜತೆಗೆ ಮದುವೆ ಮಾಡಿಸಿದ್ದರು. ಶನಿವಾರ ರಾತ್ರಿ ಶಫೀವುಲ್ಲಾ ಅವರು ವಾಲ್ಮೀಕಿ ನಗರಕ್ಕೆ ಬಂದಿದ್ದರು. ಈ ವೇಳೆ ಆರೋಪಿ ತಬ್ರೇಜ್ ತನ್ನ ನಾಲ್ವರು ಸಹಚರರೊಂದಿಗೆ ಶಫೀವುಲ್ಲಾ ಅವರನ್ನು ಅಡ್ಡಗಟ್ಟಿ ಹಲ್ಲೆ ಮಾಡಿದ್ದಾನೆ.
ಜಗಳ ಬಿಡಿಸಲು ಮುಂದಾದಾಗ ಹಲ್ಲೆ:
ಇದೇ ಸಮಯಕ್ಕೆ ಗಸ್ತು ಕರ್ತವ್ಯದಲ್ಲಿದ್ದ ಹೆಡ್ ಕಾನ್ಸ್‌ಟೇಬಲ್ ಸಂತೋಷ್ ಅವರು ಅದೇ ಮಾರ್ಗದಲ್ಲಿ ಬಂದಿದ್ದು, ಗಲಾಟೆ ನೋಡಿ ಜಗಳ ಬಿಡಿಸಲು ಮುಂದಾಗಿದ್ದಾರೆ. ಈ ವೇಳೆ ಆರೋಪಿಗಳು ಡ್ರ್ಯಾಗರ್‌ನಿಂದ ಸಂತೋಷ್ ಮೇಲೆ ಹಲ್ಲೆ ಮಾಡಿದ್ದಾರೆ. ಹೀಗಾಗಿ ಸಂತೋಷ್ ಅವರ ಎಡಗೈಗೆ ಗಂಭೀರ ಗಾಯವಾಗಿದೆ. ಘಟನೆ ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು. ಬಳಿಕ ಗಾಯಾಳುಗಳಾದ ಸಂತೋಷ್ ಮತ್ತು ಶಫೀವುಲ್ಲಾ ಅವರನ್ನು ಸ್ಥಳೀಯರು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದರು. ಸದ್ಯ ಇಬ್ಬರು ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ಸಂಬಂಧ ಮಾಹಿತಿ ಪಡೆದ ಪೊಲೀಸರು ಪ್ರಕರಣ ದಾಖಲಿಸಿ ಕ್ಷಿಪ್ರ ಕಾರ್ಯಾಚರಣೆ ಕೈಗೊಂಡು ಪ್ರಮುಖ ಆರೋಪಿ ತಬ್ರೇಜ್ ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಸಂಬಂಧ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ