ಲೈಂಗಿಕ ಕಿರುಕುಳ ಹಾಗೂ ಅತ್ಯಾಚಾರದ ಪ್ರಕರಣ : ಪ್ರಜ್ವಲ್ ಜಾಮೀನು ವಿಚಾರಣೆ ಪೂರ್ಣ: ತೀರ್ಪು ಬಾಕಿ

Published : Sep 20, 2024, 06:43 AM IST
Prajwal Revanna.jpg

ಸಾರಾಂಶ

ಲೈಂಗಿಕ ಕಿರುಕುಳ ಹಾಗೂ ಅತ್ಯಾಚಾರದ ಪ್ರಕರಣದಲ್ಲಿ ಜೈಲು ಸೇರಿರುವ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಜಾಮೀನು ಕೋರಿ ಸಲ್ಲಿಸಿರುವ ಜಾಮೀನು ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್‌ ತೀರ್ಪು ಕಾಯ್ದಿರಿಸಿದೆ.

ಬೆಂಗಳೂರ: ಲೈಂಗಿಕ ಕಿರುಕುಳ ಹಾಗೂ ಅತ್ಯಾಚಾರದ ಪ್ರಕರಣದಲ್ಲಿ ಜೈಲು ಸೇರಿರುವ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಜಾಮೀನು ಕೋರಿ ಸಲ್ಲಿಸಿರುವ ಜಾಮೀನು ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್‌ ತೀರ್ಪು ಕಾಯ್ದಿರಿಸಿದೆ. ಮನೆಕೆಲಸದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿರುವ ಪ್ರಕರಣದಲ್ಲಿ ಪ್ರಜ್ವಲ್‌ ಜಾಮೀನು ಕೋರಿದ್ದಾರೆ. ಉಳಿದಂತೆ ಹಾಸನ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆಯ ಮೇಲೆ ಅತ್ಯಾಚಾರ ಆರೋಪ ಮತ್ತು ಅಶ್ಲೀಲ ವಿಡಿಯೋ ಹಂಚಿಕೆಯ ಸಂಬಂಧ ದಾಖಲಾಗಿರುವ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನು ಕೋರಿ ಪ್ರಜ್ವಲ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಕುರಿತು ಗುರುವಾರ ಪ್ರಜ್ವಲ್‌ ಮತ್ತು ಸರ್ಕಾರದ ವಿಶೇಷ ಸರ್ಕಾರಿ ಅಭೀಯೋಜಕರ ವಾದ-ಪ್ರತಿವಾದ ಆಲಿಸಿ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ ತೀರ್ಪು ಕಾಯ್ದಿರಿಸಿದೆ.

ವಿಚಾರಣೆ ವೇಳೆ ಪ್ರಜ್ವಲ್‌ ಪರ ವಕೀಲರು, ವಿಡಿಯೋದಲ್ಲಿ ಆರೋಪಿ ಮತ್ತು ಸಂತ್ರಸ್ತೆ ಇರುವುದರ ಕುರಿತು ವಿಧಿ ವಿಜ್ಞಾನ ಪ್ರಯೋಗಾಲಯ ಸ್ಪಷ್ಟತೆ ನೀಡಿಲ್ಲ. ಸಂತ್ರಸ್ತೆಯು ನೀಡಿರುವ ದೂರು ವಿಶ್ವಾಸಾರ್ಹತೆಯಿಂದ ಕೂಡಿಲ್ಲ. ಐದು ವರ್ಷ ತಡವಾಗಿ ದೂರು ನೀಡಿದ್ದು, ಅದಕ್ಕೆ ಸೂಕ್ತ ವಿವರಣೆ ನೀಡಿಲ್ಲ. ಲೋಕಸಭಾ ಚುನಾವಣೆಯ ಮತದಾನಕ್ಕೂ ಕೆಲವು ದಿನಗಳ ಮುಂದೆ ವಿದ್ಯುನ್ಮಾನ ಮಾಧ್ಯಮವೊಂದಕ್ಕೆ ಸಂತ್ರಸ್ತೆ ಸಂದರ್ಶನ ನೀಡಿದ್ದಾರೆ. ಈ ವೇಳೆ ಅತ್ಯಾಚಾರದ ಆರೋಪ ಮಾಡಿಲ್ಲ. ವಿಶೇಷ ನ್ಯಾಯಾಲಯದ ಮುಂದೆ ದಾಖಲಿಸಿದ ಪ್ರಮಾಣೀಕೃತ ಹೇಳಿಕೆಯಲ್ಲೂ ಅತ್ಯಾಚಾರ ಆರೋಪ ಮಾಡಿಲ್ಲ ಎಂದು ವಾದಿಸಿದರು.

ಅಲ್ಲದೆ, ಸಂತ್ರಸ್ತೆಯ ಪುತ್ರಿಯ ಹೇಳಿಕೆಯನ್ನು ಸಾಕ್ಷ್ಯವಾಗಿ ಪರಿಗಣಿಸಲಾಗಿದೆ. ಆದರೆ, ಆಕೆಯ ಹೇಳಿಕೆಯಲ್ಲಿ ವ್ಯತ್ಯಾಸಗಳಿವೆ. ಒಂದೊಮ್ಮೆ ಲೈಂಗಿಕ ಕೃತ್ಯ ನಡೆದಿದ್ದರೂ ಇದು ಒಪ್ಪಿಗೆಯಿಂದ ನಡೆದ ಕೃತ್ಯವಾಗಿರುತ್ತದೆ. ಹಾಸನ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆಯೂ ಅರ್ಜಿದಾರರ ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದಾರೆ. ಆದರೆ, ದೂರು ನೀಡುವುದಕ್ಕೂ ಕೆಲದಿನಗಳ ಮುಂಚೆ ಆಕೆಯು ಲೋಕಸಭಾ ಚುನಾವಣಾ ಸಮಾವೇಶದಲ್ಲಿ ಅರ್ಜಿದಾರರ ಜೊತೆ ಭಾಗಿಯಾಗಿದ್ದಾರೆ. ಇನ್ನೊಂದು ಪ್ರಕರಣ ಅಶ್ಲೀಲ ವಿಡಿಯೊಗಳ ಹಂಚಿಕೆ ಪ್ರಕರಣವಾಗಿದೆ. ಇದರಲ್ಲಿ ಅರ್ಜಿದಾರರ ಯಾವುದೇ ಪಾತ್ರವಿಲ್ಲ. ಹೀಗಾಗಿ, 2024ರ ಮೇ 30ರಿಂದ ಅರ್ಜಿದಾರರು ಕಸ್ಟಡಿಯಲ್ಲಿದ್ದು, ಜಾಮೀನು ಮಂಜೂರು ಮಾಡಬೇಕು ಎಂದು ಕೋರಿದರು.

ಈ ವಾದ ಆಕ್ಷೇಪಿಸಿದ ಸರ್ಕಾರದ ವಿಶೇಷ ಅಭಿಯೋಜಕರು, ಅರ್ಜಿದಾರರು ಸಂಸದನಾಗಿದ್ದರು. ಅತ್ಯಾಚಾರದ ವಿವರ ಬಹಿರಂಗಪಡಿಸಿದರೆ ಪತಿಯನ್ನು ಕೊಲೆ ಮಾಡಿಸುವುದಾಗಿ ಹಾಗೂ ಅಶ್ಲೀಲ ವಿಡಿಯೋಗಳನ್ನು ಬಿಡುಗಡೆ ಮಾಡುವುದಾಗಿಯೂ ಮನೆಕೆಲಸದಾಕೆಗೆ ಬೆದರಿಕೆ ಹಾಕಿದ್ದಾರೆ. ಇದರಿಂದ ಸಂತ್ರಸ್ತೆ ತಡವಾಗಿ ದೂರು ದಾಖಲಿಸಿದ್ದಾರೆ. ದೂರು ದಾಖಲಾಗುತ್ತಿದ್ದಂತೆ ಪ್ರಜ್ವಲ್‌ ದೇಶ ತೊರೆದಿದ್ದರು.

ಈವರೆಗೂ ಆರೋಪಿಯು ತನ್ನ ಫೋನ್‌ ಅನ್ನು ತನಿಖಾಧಿಕಾರಿಗಳಿಗೆ ಒಪ್ಪಿಸಿಲ್ಲ. ಸಂತ್ರಸ್ತೆಯ ಪುತ್ರಿಯ ಹೇಳಿಕೆ ಹಾಗೂ ಎಫ್‌ಎಸ್‌ಎಲ್‌ ವರದಿ ಕೃತ್ಯವನ್ನು ಖಾತರಿಪಡಿಸಿದೆ. ಪ್ರಜ್ವಲ್‌ ಶೌಚಾಲಯದಲ್ಲಿ ತೆಗೆದಿರುವ ಚಿತ್ರಗಳು, ಸ್ಥಳದ ಪಂಚನಾಮೆ, ಎಫ್‌ಎಸ್‌ಎಲ್‌ ವರದಿ ಎಲ್ಲವೂ ಹೊಂದಾಣಿಕೆಯಾಗಿವೆ. ಹಾಗಾಗಿ, ಅರ್ಜಿಗಳನ್ನು ವಜಾಗೊಳಿಸಬೇಕು ಎಂದು ಕೋರಿದರು.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಬಿಜೆಪಿ ಶಾಸಕ ಬೈರತಿ ವಿರುದ್ಧ ಲುಕ್‌ ಔಟ್‌ ನೋಟಿಸ್‌ ಜಾರಿ?
ಆನ್‌ಲೈನ್‌ನಲ್ಲಿ ಪರಿಚಯವಾದ ಯುವಕನಿಂದ ಗೃಹಿಣಿಗೆ ಕಿರುಕುಳ