ಬಲ್ಬ್‌ ಚೂರು ನುಂಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದ ಕೈದಿ ಎಸ್ಕೇಪ್‌ : ಖಾಕಿ ಶೋಧ

KannadaprabhaNewsNetwork |  
Published : May 05, 2025, 01:33 AM ISTUpdated : May 05, 2025, 04:25 AM IST
KSRP

ಸಾರಾಂಶ

ಅನಾರೋಗ್ಯದ ಹಿನ್ನೆಲೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದ್ದ ವಿಚಾರಣಾಧೀನ ಕೈದಿ ಶನಿವಾರ ರಾತ್ರಿ ಆಸ್ಪತ್ರೆ ಸಿಬ್ಬಂದಿ ಹಾಗೂ ಜೈಲು ಸಿಬ್ಬಂದಿಯ ಕಣ್ಣು ತಪ್ಪಿಸಿ ಪರಾರಿಯಾಗಿರುವ ಘಟನೆ ನಡೆದಿದೆ.

 ಬೆಂಗಳೂರು : ಅನಾರೋಗ್ಯದ ಹಿನ್ನೆಲೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದ್ದ ವಿಚಾರಣಾಧೀನ ಕೈದಿ ಶನಿವಾರ ರಾತ್ರಿ ಆಸ್ಪತ್ರೆ ಸಿಬ್ಬಂದಿ ಹಾಗೂ ಜೈಲು ಸಿಬ್ಬಂದಿಯ ಕಣ್ಣು ತಪ್ಪಿಸಿ ಪರಾರಿಯಾಗಿರುವ ಘಟನೆ ನಡೆದಿದೆ.

ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಚಂದ್ರಶೇಖರ್ ಅಲಿಯಾಸ್ ಚಂದ್ರು (32) ಪರಾರಿಯಾದ ಕೈದಿ. ಶನಿವಾರ ರಾತ್ರಿ ಸುಮಾರು 11.30ಕ್ಕೆ ಚಂದ್ರು ವಿಕ್ಟೋರಿಯಾ ಆಸ್ಪತ್ರೆಯಿಂದ ಪರಾರಿಯಾಗಿದ್ದಾನೆ.

ಘಟನೆ ವಿವರ:

ಆರೋಪಿ ಚಂದ್ರು 2023ನೇ ಸಾಲಿನಲ್ಲಿ ಸುಬ್ರಮಣ್ಯನಗರ ಠಾಣಾ ವ್ಯಾಪ್ತಿಯಲ್ಲಿ ಡಕಾಯಿತಿ ನಡೆಸಿ ಬಂಧನಕ್ಕೆ ಒಳಗಾಗಿದ್ದ. ಬಳಿಕ ನ್ಯಾಯಾಲಯದ ಸೂಚನೆ ಮೇರೆಗೆ ಪೊಲೀಸರು ಆತನನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಬಿಟ್ಟಿದ್ದರು. ಚಂದ್ರುಗೆ ಮೇ 2ರಂದು ಎದೆ ನೋವು ಕಾಣಿಸಿಕೊಂಡು ವಾಂತಿ ಮಾಡಿಕೊಂಡಿದ್ದ. ಜೈಲು ಅಧಿಕಾರಿಗಳು ಆತನಿಗೆ ಜೈಲು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು. ವೈದ್ಯರ ಸೂಚನೆ ಮೇರೆಗೆ ತುರ್ತು ನಿಗಾ ಘಟಕದ 3ನೇ ಮಹಡಿಯಲ್ಲಿ ಒಳರೋಗಿಯಾಗಿ ದಾಖಲಿಸಿದ್ದರು. ಈ ವೇಳೆ ಕೇಂದ್ರ ಕಾರಾಗೃಹದ ವಾಚರ್‌ ಸಂತೋಷ್‌ ರಾಥೋಡ್‌ ಅವರನ್ನು ಶನಿವಾರ ರಾತ್ರಿ 9 ಗಂಟೆಯಿಂದ 12 ಗಂಟೆವರೆಗೆ ಆರೋಪಿಯ ಪಹರೆ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಆಗ ಚಂದ್ರು ರಾತ್ರಿ 11 ಗಂಟೆಯಿಂದ 11.55ರ ನಡುವೆ ಎಲ್ಲರ ಕಣ್ಣು ತಪ್ಪಿಸಿ ಪರಾರಿಯಾಗಿದ್ದಾನೆ.

ಪ್ರಕರಣ ದಾಖಲು:

ಚಂದ್ರು ನಾಪತ್ತೆಯಾದ ಹಿನ್ನೆಲೆಯಲ್ಲಿ ವಾಚರ್‌ ಸಂತೋಷ್‌ ರಾಥೋಡ್‌ ಆಸ್ಪತ್ರೆ ಪೂರ್ತಿ ಹುಡುಕಾಟ ನಡೆಸಿದ್ದಾರೆ. ಆದರೆ, ಎಲ್ಲಿಯೂ ಪತ್ತೆಯಾಗದ ಹಿನ್ನೆಲೆ ಕಾರಾಗೃಹದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅದರಂತೆ ಭಾನುವಾರ ಬೆಳಗ್ಗೆ ಕೇಂದ್ರ ಕಾರಾಗೃಹದ ಜೈಲರ್‌ ಡಿ.ಗೋಪಿನಾಥ್‌ ಆಸ್ಪತ್ರೆಗೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದ್ದು, ವಿಶ್ವೇಶಪುರ ಪೊಲೀಸ್‌ ಠಾಣೆಗೆ ದೂರು ನೀಡಲಾಗಿದೆ. ಪೊಲೀಸರು ಆರೋಪಿಯ ಬಂಧನಕ್ಕೆ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ.

ಬಲ್ಬ್‌ ಚೂರು ನುಂಗಿದ್ದ?

ವಿಚಾರಣಾಧೀನ ಕೈದಿ ಚಂದ್ರು ಎಸ್ಕೇಪ್‌ ಆಗುವ ಉದ್ದೇಶದಿಂದಲೇ ಕೇಂದ್ರ ಕಾರಾಗೃಹದಲ್ಲಿ ಬಲ್ಬ್‌ನ ಚೂರುಗಳನ್ನು ನುಂಗಿದ್ದ. ಹೀಗಾಗಿ ಆತನಿಗೆ ಎದೆ ನೋವು ಹಾಗೂ ವಾಂತಿ ಕಾಣಿಸಿಕೊಂಡಿತ್ತು ಎನ್ನಲಾಗಿದೆ. ಜೈಲು ಅಧಿಕಾರಿಗಳು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ ಬಳಿಕ ಆಸ್ಪತ್ರೆ ಸಿಬ್ಬಂದಿ ಹಾಗೂ ವಾಚರ್‌ನ ಕಣ್ಣು ತಪ್ಪಿಸಿ ಚಂದ್ರು ಪರಾರಿಯಾಗಿದ್ದಾನೆ. ಆರೋಪಿಯ ಪಹರೆ ಕರ್ತವ್ಯಕ್ಕೆ ನಿಯೋಜಿಸಿದ್ದ ವಾಚರ್‌ ಸಂತೋಷ್‌ ರಾಥೋಡ್‌ ಹಾಗೂ ಆಸ್ಪತ್ರೆ ಸಿಬ್ಬಂದಿ ವಿರುದ್ಧ ಕರ್ತವ್ಯ ನಿರ್ಲಕ್ಷ್ಯದ ಆರೋಪ ಕೇಳಿ ಬಂದಿದೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಅಕ್ರಮ ಕೃತ್ಯಗಳಿಗೆ ‘ದಂಡ’ ವಿಧಿಸಿ ಮುಚ್ಚು ಹಾಕುತ್ತಿದ್ದ ಅಪಾರ್ಟ್ಮೆಂಟ್ ವಿರುದ್ಧ ಕೇಸು
ವಿವಾಹ ಪವಿತ್ರವಾದ ಶಾಶ್ವತ ಸಮ್ಮಿಲನ : ಹೈಕೋರ್ಟ್‌