ಬೆಂಗಳೂರು : ವ್ಯಕ್ತಿಯೊಬ್ಬರಿಗೆ ಗಂಟೆ ₹700 ವೇತನ ನೀಡುವುದಾಗಿ ನಂಬಿಸಿ ಕಂಪನಿ ಸಲಹೆಗಾರನಾಗಿ ನೇಮಿಸಿಕೊಂಡು ಕೆಲಸ ಮಾಡಿಸಿ ಬರೋಬ್ಬರಿ ₹1 ಕೋಟಿ ವೇತನ ನೀಡದೆ ವಂಚಿಸಿದ ಆರೋಪದಡಿ ಖಾಸಗಿ ಕಂಪನಿ ಸೇರಿ ನಾಲ್ವರ ವಿರುದ್ಧ ಸಿಸಿಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಮಿಳುನಾಡು ಮೂಲದ ಎ.ಸರವಣನ್ ವಂಚನೆಗೆ ಒಳಗಾದವರು. ಇವರು ನೀಡಿದ ದೂರಿನ ಮೇರೆಗೆ ಎಚ್‌ಎಸ್‌ಆರ್ ಲೇಔಟ್‌ನ ‘ಬೀಟಾಫ್ಲಕ್ಸ್ ಕನ್ಸೆಲ್‌ಟಿಂಗ್ ಪ್ರೈವೇಟ್ ಲಿಮಿಟೆಡ್ ಕಂಪನಿ’, ಆ ಕಂಪನಿ ಸಿಇಓಗಳಾದ ಅನಿಮೇಶ್ ಕುಮಾರ್, ಉತ್ಕರ್ಷ್ ಸಿನ್ಹಾ ಹಾಗೂ ಕಂಪನಿ ಲೆಕ್ಕಪರಿಶೋಧಕ ಪವನ್ ಎಂಬುವವರ ವಿರುದ್ಧ ವಂಚನೆ, ನಂಬಿಕೆ ದ್ರೋಹ, ಜೀವ ಬೆದರಿಕೆ ಆರೋಪದಡಿ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏನಿದು ಪ್ರಕರಣ?:
ದೂರುದಾರ ಎ.ಸರವಣನ್ ಕ್ಲೌಡ್ ಕಂಪ್ಯೂಟಿಂಗ್, ಆರ್ಟಿಫೀಶಿಯಲ್ ಇಂಟೆಲಿಜೆನ್ಸ್, ಡೇವಾಪ್ಸ್ ಮತ್ತು ಮಾಹಿತಿ ಭದ್ರತೆಯಲ್ಲಿ 15 ವರ್ಷಗಳ ಅನುಭವ ಹೊಂದಿದ್ದಾರೆ. ತಂತ್ರಜ್ಞಾನ ವೃತ್ತಿಪರರಾಗಿರುವ ಸರವಣನ್ ಪ್ರತಿಷ್ಠಿತ ಸಾಫ್ಟ್‌ವೇರ್ ಕಂಪನಿಗಳಲ್ಲಿ ಕೆಲಸ ಮಾಡಿದ ಅನುಭವವುಳ್ಳವರಾಗಿದ್ದಾರೆ. 2023ನೇ ಸಾಲಿನಲ್ಲಿ ಸರವಣನ್ ಫುಡ್ ಹಬ್ ಎಂಬ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.
ಈ ವೇಳೆ ಬೀಟಾಫ್ಲಕ್ಸ್ ಕನ್ಸೆಲ್‌ಟಿಂಗ್ ಕಂಪನಿಯ ಸಿಇಓಗಳಾದ ಅನಿಮೇಶ್ ಕುಮಾರ್ ಮತ್ತು ಉತ್ಕರ್ಷ್ ಸಿನ್ಹಾ ಅವರು ಸರವಣನ್ ಅವರನ್ನು ಸಂಪರ್ಕಿಸಿ, ತಮ್ಮ ಕಂಪನಿಗೆ ಸಲಹೆಗಾರನಾಗಿ ಕೆಲಸ ಮಾಡುವಂತೆ ಕೇಳಿಕೊಂಡಿದ್ದಾರೆ. ಪ್ರತಿ ಗಂಟೆಗೆ ₹700 ವೇತನ ನೀಡುವುದಾಗಿ ಮತ್ತು ಡೇವಾಪ್ಸ್ ಮತ್ತು ಕ್ಲೌಡ್ ವರ್ಟಿಕಲ್ ನಿರ್ವಹಿಸಲು ಕಂಪನಿಯ ನಿರ್ದೇಶಕನ್ನಾಗಿ ಮಾಡಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ವಾರ್ಷಿಕ ₹90 ಲಕ್ಷ ವೇತನದ ಒಪ್ಪಂದ:
ಅದರಂತೆ ಸರವಣನ್ 2023ರ ಏಪ್ರಿಲ್‌ನಲ್ಲಿ ಬೀಟಾಫ್ಲಕ್ಸ್ ಕನ್ಸೆಲ್‌ಟಿಂಗ್ ಕಂಪನಿಗೆ ಕೆಲಸಕ್ಕೆ ಸೇರಿದ್ದಾರೆ. ಇವರು ಕೆಲಸಕ್ಕೆ ಸೇರಿದ ಬಳಿಕ ಕಂಪನಿ ಜತೆಗೆ ಸುಮಾರು 20 ಕೋಟಿ ರು. ವ್ಯವಹಾರದ ಒಪ್ಪಂದ ಮಾಡಿಸಿದ್ದಾರೆ. ಕಂಪನಿ ಸಿಇಓಗಳು ಸರವಣನ್ ಕೆಲಸಕ್ಕೆ ಸೇರುವ ಆರಂಭದಲ್ಲಿ ವಾರ್ಷಿಕ 90 ಲಕ್ಷ ರು. ವೇತನ ನೀಡುವ ಭರವಸೆ ನೀಡಿದ್ದರು. 2023ರ ಡಿ.13ರಂದು ನೋಡಿದಾಗ ವಾರ್ಷಿಕ ವೇತನವನ್ನು 80 ಲಕ್ಷ ರು.ಗೆ ಕಡಿತಗೊಳಿಸಿರುವುದು ಕಂಡು ಬಂದಿದೆ. ಈ ಬಗ್ಗೆ ಕಂಪನಿ ಸಿಇಓಗಳನ್ನು ಪ್ರಶ್ನಿಸಿದಾಗ 10 ಲಕ್ಷ ರು. ಬೋನಸ್ ರೂಪದಲ್ಲಿ ನೀಡುವುದಾಗಿ ಹೇಳಿದ್ದಾರೆ.
ದಿನಕ್ಕೆ 12-14 ತಾಸು ಕೆಲಸ:
ವೇತನ ರಶೀದಿ ಪರಿಶೀಲನೆ ವೇಳೆ 31 ದಿನ ಕೆಲಸ ಮಾಡಿದ್ದರೂ 28 ದಿನ ಎಂದು ನಮೂದಿಸಿದ್ದಾರೆ. ಈ ಬಗ್ಗೆ ಪ್ರಶ್ನೆ ಮಾಡಿದಾಗ ತಪ್ಪಾಗಿದ್ದು, ಸರಿಪಡಿಸುವುದಾಗಿ ಹೇಳಿದ್ದಾರೆ. ಇವರ ಮಾತು ನಂಬಿದ ಸರವಣನ್ ತಮ್ಮ ಕೆಲಸ ಮುಂದುವರೆಸಿದ್ದಾರೆ. ಬಳಿಕ 2025ರ ಮಾರ್ಚ್ ವರೆಗೆ 5 ತಿಂಗಳ ವೇತನ ಪಾವತಿ ಮಾಡಿಲ್ಲ. ಈ ಬಗ್ಗೆ ಕೇಳಿದಾಗ, ಇನ್ನೂ ಹೆಚ್ಚಿನ ಕೆಲಸ ಮಾಡಿದರಷ್ಟೇ ಬಾಕಿ ವೇತನ ನೀಡುವುದಾಗಿ ಹೇಳಿದ್ದಾರೆ. ಇದನ್ನು ನಂಬಿದ ಸರವಣನ್ ದಿನದ 12-14 ತಾಸು ಕಂಪನಿ ಕೆಲಸ ಮಾಡಿದ್ದಾರೆ.
ನಕಲಿ ದಾಖಲೆ ಸೃಷ್ಟಿಸಿ ವಂಚನೆ:
ಕಂಪನಿ ಸಿಇಓಗಳು ಹಾಗೂ ಲೆಕ್ಕಪರಿಶೋಧಕರು ನೌಕರರ ವೇತನ ಸಂಬಂಧ ನಕಲಿ ದಾಖಲೆ ಸೃಷ್ಟಿಸಿ ನೌಕರರ ವೇತನದಲ್ಲಿ ಟಿಡಿಎಸ್ ಕಡಿತ ಮಾಡಿದ್ದು, ಆ ಹಣವನ್ನು ಆದಾಯ ತೆರಿಗೆ ಇಲಾಖೆ ಪಾವತಿಸದೆ ವಂಚಿಸಿದ್ದಾರೆ. ಸರವಣನ್‌ಗೆ ಸುಮಾರು 1 ಕೋಟಿ ರು. ವೇತನ ನೀಡದೆ ವಂಚಿಸಿದ್ದಾರೆ. ಈ ಬಗ್ಗೆ ಪ್ರಶ್ನೆ ಮಾಡಿದಾಗ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ತಮಗೆ ವೇತನ ನೀಡದೆ ವಂಚಿಸಿದ ಕಂಪನಿ ಸಿಇಓಗಳು ಹಾಗೂ ಲೆಕ್ಕಪರಿಶೋಧಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸರವಣನ್ ದೂರಿನಲ್ಲಿ ಮನವಿ ಮಾಡಿದ್ದಾರೆ.