ಆಭರಣ ಅಂಗಡಿ ಮಾಲೀಕನಿಂದ 950 ಗ್ರಾಂ ಚಿನ್ನದ ಗಟ್ಟಿ ಪಡೆದು ವಂಚಿಸಿದ ಪಿಎಸ್‌ಐ ಸಸ್ಪೆಂಡ್‌

KannadaprabhaNewsNetwork | Updated : Mar 24 2025, 04:23 AM IST

ಸಾರಾಂಶ

ಆಭರಣ ಅಂಗಡಿ ಮಾಲೀಕನಿಂದ 950 ಗ್ರಾಂ ತೂಕದ ಚಿನ್ನದ ಗಟ್ಟಿ ಪಡೆದು ಬಳಿಕ ವಾಪಾಸ್‌ ನೀಡದೆ ಬೆದರಿಕೆ ಹಾಕಿದ ಆರೋಪದಡಿ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌(ಪಿಎಸ್‌ಐ) ವಿರುದ್ಧ ಹಲಸೂರು ಗೇಟ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 ಬೆಂಗಳೂರು :  ಆಭರಣ ಅಂಗಡಿ ಮಾಲೀಕನಿಂದ 950 ಗ್ರಾಂ ತೂಕದ ಚಿನ್ನದ ಗಟ್ಟಿ ಪಡೆದು ಬಳಿಕ ವಾಪಾಸ್‌ ನೀಡದೆ ಬೆದರಿಕೆ ಹಾಕಿದ ಆರೋಪದಡಿ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌(ಪಿಎಸ್‌ಐ) ವಿರುದ್ಧ ಹಲಸೂರು ಗೇಟ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಿ.ಟಿ.ಸ್ಟ್ರೀಟ್‌ನ ಆಭರಣ ಅಂಗಡಿ ಮಾಲೀಕ ಧನಂಜಯ್‌ ನೀಡಿದ ದೂರಿನ ಮೇರೆಗೆ ಕಾಟನ್‌ಪೇಟೆ ಪೊಲೀಸ್ ಠಾಣೆಯ ಪಿಎಸ್ಐ ಪಿ.ಜಿ.ಸಂತೋಷ್‌ (38) ವಿರುದ್ಧ ಎಫ್‌ಐಆರ್‌ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. ಇದರ ಬೆನ್ನಲ್ಲೇ ಪಿಎಸ್‌ಐ ಸಂತೋಷ್‌ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ ಆದೇಶಿಸಿದ್ದಾರೆ.

ಪ್ರಕರಣದ ವಿವರ:

ಆರೋಪಿ ಪಿಎಸ್‌ಐ ಸಂತೋಷ್‌ 2020ನೇ ಸಾಲಿನಲ್ಲಿ ಹಲಸೂರು ಗೇಟ್‌ ಪೊಲೀಸ್‌ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಸಿಟಿ ಸ್ಟ್ರೀಟ್‌ನ ಜುವೆಲ್ಲರಿ ಅಂಗಡಿ ಮಾಲೀಕ ಧನಂಜಯ್‌ ಪರಿಚಯವಾಗಿದೆ. ಪ್ರಕರಣವೊಂದರಲ್ಲಿ ಜಪ್ತಿಯಾದ 950 ಗ್ರಾಂ ತೂಕದ ಚಿನ್ನದ ಗಟ್ಟಿ ನಾಪತ್ತೆಯಾಗಿದೆ. ಹಿರಿಯ ಅಧಿಕಾರಿಗಳು ಠಾಣೆಗೆ ಭೇಟಿ ನೀಡುತ್ತಿರುವುದರಿಂದ ಅವರಿಗೆ ಚಿನ್ನಗಟ್ಟಿ ತೋರಿಸಬೇಕು. ನೀವು ಚಿನ್ನದ ಗಟ್ಟಿ ನೀಡಿದರೆ, ಹಿರಿಯ ಅಧಿಕಾರಿಗಳಿಗೆ ತೋರಿಸಿ ಬಳಿಕ ವಾಪಾಸ್‌ ನೀಡುವುದಾಗಿ ಧನಂಜಯ್‌ನಿಂದ 950 ಗ್ರಾಂ ತೂಕದ ಚಿನ್ನ ಗಟ್ಟಿ ಪಡೆದಿದ್ದಾರೆ. ಬಳಿಕ ಆ ಚಿನ್ನದ ಗಟ್ಟಿಯನ್ನು ವಾಪಾಸ್‌ ನೀಡಿಲ್ಲ.

ಪಿಎಸ್‌ಐ ನೀಡಿದ್ದ ಚೆಕ್‌ ಬೌನ್ಸ್‌:

ಧನಂಜಯ್‌ ಚಿನ್ನದ ಗಟ್ಟಿ ನೀಡುವಂತೆ ಹಲವು ಬಾರಿ ಕೇಳಿದಾಗ, 2021ನೇ ಸಾಲಿನಲ್ಲಿ ಸದ್ಯಕ್ಕೆ ಚಿನ್ನ ಇಲ್ಲ. ಚಿನ್ನದ ಬದಲು ಹಣ ನೀಡುವುದಾಗಿ ಸಂತೋಷ್‌ ಹೇಳಿದ್ದಾರೆ. ಇದಕ್ಕೆ ಭದ್ರತೆಗಾಗಿ ಹನುಮಂತನಗರದಲ್ಲಿ ತಮ್ಮ ಪತ್ನಿ ಹೆಸರಿನಲ್ಲಿರುವ ನಿವೇಶನದ ಮಾರಾಟದ ಕರಾರು ಮಾಡಿಕೊಟ್ಟಿದ್ದಾರೆ. ಬಳಿಕ ಸಂತೋಷ್‌ ಹಣ ಅಥವಾ ನಿವೇಶನ ನೀಡಿಲ್ಲ. ಈ ನಡುವೆ ಸಂತೋಷ್‌ ನಿವೇಶನವನ್ನು ಬೇರೆಯವರಿಗೆ ಮಾರಾಟ ಮಾಡಿದ್ದಾರೆ. ಬಳಿಕ ಚಿನ್ನದ ಬದಲಾಗಿ ₹64 ಲಕ್ಷ ನೀಡುವುದಾಗಿ 2024ರ ಮೇನಲ್ಲಿ ಚೆಕ್‌ ನೀಡಿದ್ದಾರೆ. ಬಳಿಕ ಧನಂಜಯ್‌ ಆ ಚೆಕ್‌ ಅನ್ನು ಬ್ಯಾಂಕ್‌ಗೆ ಹಾಕಿದ ಬೌನ್ಸ್‌ ಆಗಿದೆ. ಈ ಬಗ್ಗೆ ಪ್ರಶ್ನೆ ಮಾಡಿದಾಗ, ನಿನಗೆ ಯಾವುದೇ ಚಿನ್ನ ಅಥವಾ ಹಣ ನೀಡಬೇಕಿಲ್ಲ. ಜಾಸ್ತಿ ಮಾತನಾಡಿದರೆ, ಸುಳ್ಳು ಕೇಸ್‌ ಹಾಕಿ ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಾರೆ. 

ವಂಚನೆ ಸಾಬೀತು:

ಈ ಸಂಬಂಧ ಪಶ್ಚಿಮ ವಿಭಾಗದ ಡಿಸಿಪಿಗೆ ಧನಂಜಯ್‌ ಪಿಎಸ್‌ಐ ಸಂತೋಷ್‌ ವಿರುದ್ಧ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ವಿಚಾರಣೆ ನಡೆಸಿ ವರದಿ ನೀಡುವಂತೆ ಎಸಿಪಿ ಚಂದನ್‌ಕುಮಾರ್‌ಗೆ ಸೂಚಿಸಿದ್ದಾರೆ. ಎಸಿಪಿ ವಿಚಾರಣಾ ವರದಿ ಅನ್ವಯ ಪಿಎಸ್‌ಐ ಸಂತೋಷ್‌ ಚಿನ್ನ ಪಡೆದು ವಂಚಿಸಿರುವುದು, ಅಧಿಕಾರ ದುರ್ಬಳಕೆ ಮಾಡಿರುವುದು ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಪಿಎಸ್‌ಐ ಸಂತೋಷ್‌ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Share this article