ರನ್ಯಾ ಕೇಸ್‌ : ಲೆಡ್ಚರ್‌ನಲ್ಲಿ ಪ್ರೋಟೊಕಾಲ್ ಮಾಹಿತಿ ಬಹಿರಂಗ - ಡಿಜಿಪಿ ರಾಮಚಂದ್ರರಾವ್‌ಗೆ ಸಂಕಷ್ಟ

ಸಾರಾಂಶ

ತಮ್ಮ ಮಲ ತಂದೆ ಹಾಗೂ ಡಿಜಿಪಿ ರಾಮಚಂದ್ರರಾವ್‌ ಹೆಸರು ಬಳಸಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ನಟಿ ರನ್ಯಾರಾವ್‌ ಶಿಷ್ಟಾಚಾರ ಸೌಲಭ್ಯ ಪಡೆದ ವಿಚಾರ ಪೊಲೀಸರ ಲೆಡ್ಜರ್‌ನಲ್ಲಿ ಬಹಿರಂಗವಾಗಿದೆ ಎಂದು ತಿಳಿದು ಬಂದಿದೆ.

ಬೆಂಗಳೂರು : ತಮ್ಮ ಮಲ ತಂದೆ ಹಾಗೂ ಡಿಜಿಪಿ ರಾಮಚಂದ್ರರಾವ್‌ ಹೆಸರು ಬಳಸಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ನಟಿ ರನ್ಯಾರಾವ್‌ ಶಿಷ್ಟಾಚಾರ ಸೌಲಭ್ಯ ಪಡೆದ ವಿಚಾರ ಪೊಲೀಸರ ಲೆಡ್ಜರ್‌ನಲ್ಲಿ ಬಹಿರಂಗವಾಗಿದೆ ಎಂದು ತಿಳಿದು ಬಂದಿದೆ.

ಈ ಲೆಡ್ಜರ್‌ ಅನ್ನು ಶಿಷ್ಟಾಚಾರ ದುರ್ಬಳಕೆ ಪ್ರಕರಣದ ಕುರಿತು ತನಿಖೆ ನಡೆಸುತ್ತಿರುವ ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ತಂಡ ವಶಕ್ಕೆ ಪಡೆದು ಪರಿಶೀಲಿಸಿದೆ. ಈ ಪುಸಕ್ತ ಡಿಜಿಪಿ ರಾಮಚಂದ್ರರಾವ್‌ಗೆ ಸಂಕಷ್ಟ ತಂದೊಡ್ಡಿದೆ ಎಂದು ಉನ್ನತ ಮೂಲಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿವೆ.

ವಿಮಾನ ನಿಲ್ದಾಣದಲ್ಲಿ ಶಿಷ್ಟಾಚಾರ ನಿರ್ವಹಣೆ ಸಂಬಂಧ ಪ್ರತ್ಯೇಕವಾದ ಪೊಲೀಸ್‌ ವಿಭಾಗವಿಲ್ಲ. ಶಿಷ್ಟಾಚಾರ ವಿಭಾಗ ಸಂಪೂರ್ಣವಾಗಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ (ಡಿಎಪಿಆರ್‌) ಇಲಾಖೆ ವ್ಯಾಪ್ತಿಗೆ ಬರುತ್ತಿದೆ. ಆದರೆ ವಿಮಾನ ನಿಲ್ದಾಣಕ್ಕೆ ಬರುವ ಹಿರಿಯ ಐಪಿಎಸ್‌ ಪೊಲೀಸ್ ಅಧಿಕಾರಿಗಳ (ಎಸ್‌ಪಿ-ಡಿಸಿಪಿ ಮೇಲ್ಮಟ್ಟದ) ನೆರವಿಗೆ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ‘ಸಹಾಯಕ ವಿಭಾಗ (ಅಸಿಸ್ಟೆನ್ಸ್‌)’ ಇದೆ. ಈ ಅಸಿಸ್ಟೆನ್ಸ್‌ಗಳನ್ನು ವಾಕಿಗಳು ಎಂದು ಕರೆಯುತ್ತಾರೆ. ಪ್ರಸ್ತುತ ಅಸಿಸ್ಟೆನ್ಸ್‌ ವಿಭಾಗದಲ್ಲಿ ಹೆಡ್‌ ಕಾನ್‌ಸ್ಟೇಬಲ್‌ಗಳಾದ ಬಸವರಾಜು, ಮಹಾಂತೇಶ್ ಹಾಗೂ ವೆಂಕಟರಾಜು ಕಾರ್ಯನಿರ್ವಹಿಸುತ್ತಾರೆ. ವಿಮಾನ ನಿಲ್ದಾಣಕ್ಕೆ ಆಗಮಿಸುವ ಹಿರಿಯ ಅಧಿಕಾರಿಗಳನ್ನು ಬರಮಾಡಿಕೊಂಡು ಅವರಿಗೆ ವಿಮಾನ ನಿಲ್ದಾಣದೊಳಗೆ ಚೆಕ್‌ ಇನ್‌ ಮಾಡಿಸಿ ಲಾಂಜ್‌ನಲ್ಲಿ ವಿಶ್ರಾಂತಿಗೆ ವ್ಯವಸ್ಥೆ ಕಲ್ಪಿಸುತ್ತಾರೆ. ಈ ಸೌಲಭ್ಯ ಅಧಿಕಾರಿಗಳಿಗೆ ಸೀಮಿತವೇ ಹೊರತು ಅವರ ಕುಟುಂಬದವರಿಗೆ ಇರುವುದಿಲ್ಲ. ಆದರೆ ಕೆಲ ಬಾರಿ ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಅವರ ಕುಟುಂಬದವರಿಗೂ ಪೊಲೀಸರು ನೆರವು ನೀಡುತ್ತಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಲೆಡ್ಜರ್‌ನಲ್ಲಿ ಮಾಹಿತಿ?:

ವಿಮಾನ ನಿಲ್ದಾಣದಲ್ಲಿ ‘ಪೊಲೀಸ್ ಸೇವೆ’ ದುರ್ಬಳಕೆ ತಡೆಯಲು 2022ರಲ್ಲಿ ಆಗಿನ ಈಶಾನ್ಯ ವಿಭಾಗದ ಡಿಸಿಪಿ ಅನೂಪ್ ಶೆಟ್ಟಿ ಲೆಡ್ಜರ್ ನಿರ್ವಹಣಾ ವ್ಯವಸ್ಥೆ ಜಾರಿಗೊಳಿಸಿದ್ದು, ಬಳಿಕ ಬಂದ ಡಿಸಿಪಿ ಲಕ್ಷ್ಮೀ ಪ್ರಸಾದ್ ಅವರು ಮತ್ತಷ್ಟು ಸುಧಾರಿಸಿದ್ದರು ಎನ್ನಲಾಗಿದೆ. ಈ ಲೆಡ್ಜರ್‌ನಲ್ಲಿ ಪೊಲೀಸ್ ಸೇವೆ ಪಡೆದ ಪ್ರಯಾಣಿಕರ ಹೆಸರು, ಪ್ರಯಾಣಿಸಿದ ದಿನ ಹಾಗೂ ಅವರಿಗೆ ನರವಾದ ಸಿಬ್ಬಂದಿ ಹೆಸರು ಬರೆಯಬೇಕಿದೆ. ಇದನ್ನು ಪ್ರತಿವಾರ ಇನ್‌ಸ್ಪೆಕ್ಟರ್ ಹಾಗೂ ದೇವನಹಳ್ಳಿ ಉಪ ವಿಭಾಗದ ಎಸಿಪಿ ಪರಿಶೀಲಿಸಿ ಡಿಸಿಪಿ ಅ‍ವರಿಗೆ ವರದಿ ನೀಡಬೇಕು. ಇನ್ನು ಮುಖ್ಯವಾಗಿ ಈ ಲೆಡ್ಜರ್‌ನಲ್ಲಿ ಪೊಲೀಸ್ ಸೇವೆಗೆ ಶಿಫಾರಸು ಮಾಡಿದವರ ಹೆಸರನ್ನು ಸಹ ಉಲ್ಲೇಖಿಸಲಾಗುತ್ತಿತ್ತು. ಹೀಗಾಗಿ ನಟಿ ರನ್ಯಾ ಪೊಲೀಸರ ಸಹಾಯ ಪಡೆದಿದ್ದರೆ ಆಕೆಗೆ ಶಿಫಾರಸು ಮಾಡಿದವರು ಹೆಸರು ಕೂಡ ಲೆಡ್ಜರ್‌ನಲ್ಲಿ ನಮೂದಾಗಿರುತ್ತದೆ. ಹೀಗಾಗಿ ನಟಿಯ ಮಲ ತಂದೆ ಹಾಗೂ ಡಿಜಿಪಿ ರಾಮಚಂದ್ರರಾವ್‌ರವರಿಗೆ ಲೆಡ್ಜರ್ ಸಂಕಷ್ಟ ತರಲಿದೆ ಎನ್ನಲಾಗಿದೆ.

ಲೆಡ್ಜೆರ್-ಸಿಡಿಆರ್‌ ವಿಶ್ಲೇಷಣೆ?

ಲೆಡ್ಜೆರ್‌ನಲ್ಲಿ ರನ್ಯಾ ಪೊಲೀಸ್ ಸೇವೆ ಪಡೆದ ಮಾಹಿತಿ ಸಂಗ್ರಹಿಸಿದ ತನಿಖಾ ತಂಡ, ಆಕೆಯ ಮೊಬೈಲ್ ಕರೆಗಳ ವಿವರ (ಸಿಡಿಆರ್‌) ಹಾಗೂ ಲೆಡ್ಜರ್‌ ಮಾಹಿತಿ ವಿಶ್ಲೇಷಿಸಿದಾಗ ಪೊಲೀಸರ ಸೇವೆ ದುರ್ಬಳಕೆ ಬಗ್ಗೆ ಖಚಿತವಾಗಿದೆ ಎನ್ನಲಾಗಿದೆ.

ನಾಳೆ ವರದಿ ಸಲ್ಲಿಕೆ ಸಾಧ್ಯತೆ?

ವಿಮಾನ ನಿಲ್ದಾಣದಲ್ಲಿ ಶಿಷ್ಟಾಚಾರ ದುರ್ಬಳಕೆ ಪ್ರಕರಣ ಕುರಿತು ರಾಜ್ಯ ಸರ್ಕಾರಕ್ಕೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಗೌರವ್ ಗುಪ್ತ ನೇತೃತ್ವದ ತಂಡ ಶುಕ್ರವಾರ ವರದಿ ಸಲ್ಲಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ವಿಧಾನಸಭಾ ಅಧಿವೇಶನ ಮುಕ್ತಾಯಕ್ಕೂ ಮುನ್ನ ವರದಿ ಪಡೆದು ಆ ವರದಿ ಆಧರಿಸಿ ರನ್ಯಾ ರಾವ್ ಚಿನ್ನ ಕಳ್ಳ ಸಾಗಣೆ ಕುರಿತು ಸಿಎಂ ಅಥವಾ ಗೃಹ ಸಚಿವರು ಹೇಳಿಕೆ ನೀಡಬಹುದು. ಶುಕ್ರವಾರ ಸಲ್ಲಿಕೆಯಾಗದೆ ಹೋದರೆ ಸೋಮವಾರ ವರದಿ ಸಲ್ಲಿಕೆಯಾಗಲಿದೆ ಎಂದು ಮೂಲಗಳು ಹೇಳಿವೆ. ಇನ್ನು ಶಿಷ್ಟಾಚಾರ ಪ್ರಕರಣ ಕುರಿತು ತನಿಖೆಗೆ ಸರ್ಕಾರ ಒಂದು ವಾರ ಮಾತ್ರ ಗಡುವು ನೀಡಿದೆ.

ರಾಜಕಾರಣಿಗಳಿಗೆ ಅನುಮತಿ ಅಗತ್ಯ:

ವಿಮಾನ ನಿಲ್ದಾಣದಲ್ಲಿ ಶಾಸಕರು ಹಾಗೂ ಸಂಸದರು ಸೇರಿ ರಾಜಕಾರಣಿಗಳಿಗೆ ಪೊಲೀಸ್ ಸೇವೆ ಕಲ್ಪಿಸುವ ಮುನ್ನ ನಗರ ಪೊಲೀಸ್ ಆಯುಕ್ತರು ಅಥವಾ ಈಶಾನ್ಯ ವಿಭಾಗದ ಡಿಸಿಪಿ ಅವರಿಂದ ವಿಮಾನ ನಿಲ್ದಾಣ ಠಾಣೆ ಪೊಲೀಸರು ಪೂರ್ವಾನುಮತಿ ಪಡೆಯುವ ನಿಯಮವನ್ನು ಅಧಿಕಾರಿಗಳು ಜಾರಿಗೊಳಿಸಿದ್ದರು ಎಂದು ಮೂಲಗಳು ಹೇಳಿವೆ.

Share this article