ಬೆಂಗಳೂರು : ‘ನಾನು ಕನ್ನಡ ಚಲನಚಿತ್ರ ನಟಿ ಮಾತ್ರವಲ್ಲ, ವನ್ಯಜೀವಿ ಛಾಯಾಗ್ರಾಹಕಿ ಹಾಗೂ ದುಬೈನಲ್ಲಿ ಹವ್ಯಾಸಿ (ಫ್ರಿಲಾನ್ಸ್) ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದೇನೆ’ ಎಂದು ಕಂದಾಯ ಗುಪ್ತಚರ ಜಾರಿನಿರ್ದೇಶನಾಲಯದ (ಡಿಆರ್‌ಐ) ಅಧಿಕಾರಿಗಳ ವಿಚಾರಣೆ ವೇಳೆ ನಟಿ ರನ್ಯಾ ರಾವ್ ಹೇಳಿಕೆ ನೀಡಿದ್ದಾರೆ.
ಹೀಗಾಗಿ ಚಿನ್ನ ಕಳ್ಳ ಸಾಗಣೆ ಜಾಲದ ಹಿಂದೆ ರಿಯಲ್ ಎಸ್ಟೇಟ್ ಅಥವಾ ಬೇರೆ ಉದ್ಯಮದ ಮೂಲಕ ಹಣ ವರ್ಗಾವಣೆ ಬಗ್ಗೆ ಶಂಕೆಗಳು ವ್ಯಕ್ತವಾಗಿದ್ದು, ರನ್ಯಾ ಅವರನ್ನು ಡಿಆರ್‌ಐ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸಿದ್ದಾರೆ.ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಬಂಧನ ಬಳಿಕ ಡಿಆರ್‌ಐ ಅಧಿಕಾರಿಗಳ ಪ್ರಾಥಮಿಕ ವಿಚಾರಣೆ ವೇಳೆ ತಮ್ಮ ಪರಿಚಯವನ್ನು ರಾಜ್ಯ ಪೊಲೀಸ್ ಗೃಹ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಮತ್ತು ಡಿಜಿಪಿ ರಾಮಚಂದ್ರರಾವ್ ಅವರ ಮಲ ಮಗಳೂ ಆಗಿರುವ ನಟಿ ರನ್ಯಾ ವಿವರಿಸಿದ್ದಾರೆ.
ನಾನು ಬೆಂಗಳೂರಿನಲ್ಲೇ ಹುಟ್ಟಿ ಬೆಳೆದಿದ್ದು. ನನ್ನ ತಂದೆ ಹೆಗ್ದೇಶ್ ಅವರು ಉದ್ಯಮಿಯಾಗಿದ್ದಾರೆ. ಪಿಯುಸಿ ವರಗೆ ವಿದ್ಯಾಭ್ಯಾಸ ಮಾಡಿದ ನಂತರ ಕನ್ನಡ ಚಿತ್ರ ನಟಿಯಾಗಿ ಗುರುತಿಸಿಕೊಂಡಿದ್ದೇನೆ ಎಂದು ಹೇಳಿದ್ದಾರೆ.ಕೆಲ ತಿಂಗಳ ಹಿಂದೆ ವಾಸ್ತು ಶಿಲ್ಪಿ ಜತಿನ್ ಹುಕ್ಕೇರಿ ಅವರನ್ನು ವಿವಾಹವಾದೆ. ಮದುವೆ ನಂತರ ಲ್ಯಾವೆಲ್ಲೆ ರಸ್ತೆಯಲ್ಲಿರುವ ನಂದವಾಣಿ ಮ್ಯಾನ್ಷನ್ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿದ್ದೇನೆ. ನಿಮ್ಮ (ಡಿಆರ್‌ಐ) ತನಿಖೆಗೆ ಸಹಕರಿಸುತ್ತೇನೆ. ಹಾಗೆ ನನ್ನ ಬಳಿ ನೀವು 17 ಚಿನ್ನದ ಬಿಸ್ಕತ್ತುಗಳನ್ನು ವಶಕ್ಕೆ ಪಡೆದಿರುವ ಮಹಜರ್ ಪ್ರತಿ ಓದಿ ಸಹಿ ಮಾಡುತ್ತೇನೆ. ಆದರೆ ಈ ಮಾಹಿತಿಯನ್ನು ತಾವು ಗೌಪ್ಯವಾಗಿಟ್ಟುಕೊಳ್ಳಬೇಕು ಎಂದು ರನ್ಯಾ ಮನವಿ ಮಾಡಿರುವುದು ಉಲ್ಲೇಖವಾಗಿದೆ.
ಯುಕೆ ರಿರ್ಟನ್ ವೀಸಾ:
ಕಳೆದ ತಿಂಗಳು ಐದು ಬಾರಿ ದುಬೈಗೆ ಹೋಗಿದ್ದು, ಜನವರಿಯಲ್ಲಿ ನಾಲ್ಕು ದಿನಗಳು ಅಮೆರಿಕಕ್ಕೆ ಭೇಟಿ ನೀಡಿದ್ದರು. ಅಲ್ಲದೆ ಬ್ರಿಟನ್ ರಿಟರ್ನ್ ವೀಸಾ ನಟಿ ರನ್ಯಾ ಹೊಂದಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಲಸೆ ವಿಭಾಗದಲ್ಲಿ ರನ್ಯಾ ಅವರನ್ನು ಫ್ರೀಕ್ವೆಂಟ್ ಟ್ರಾವೆಲರ್ (ನಿರಂತರವಾಗಿ ವಿದೇಶಕ್ಕೆ ಪಯಣಿಸುವವರು) ಎಂದೇ ಉಲ್ಲೇಖವಾಗಿದೆ. ಕಳೆದೊಂದು ವರ್ಷದಿಂದ ಪ್ರತಿ ಹದಿನೈದು ದಿನಗಳಿಗೊಮ್ಮೆ ಅವರು ವಿದೇಶಕ್ಕೆ ಪಯಣಿಸಿದ್ದಾರೆ ಎಂದು ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.