ಮದ್ದೂರಿನಲ್ಲಿ ಗಲಭೆ ಅನಿರೀಕ್ಷಿತ, ಪೂರ್ವಯೋಜಿತವಲ್ಲ: ಪೊಲೀಸ್ ಮೂಲಗಳು

KannadaprabhaNewsNetwork |  
Published : Oct 05, 2025, 01:00 AM IST
4ಕೆಎಂಎನ್ ಡಿ19 | Kannada Prabha

ಸಾರಾಂಶ

ಮದ್ದೂರು ಪಟ್ಟಣದಲ್ಲಿ ಇತ್ತೀಚೆಗೆ ಗಣೇಶಮೂರ್ತಿ ವಿಸರ್ಜನೆ ವೇಳೆ ಉಂಟಾದ ಗಲಭೆ ಅನಿರೀಕ್ಷಿತವಾದದ್ದು. ಇದು ಪೂರ್ವಯೋಜಿತ ಕೃತ್ಯವಲ್ಲ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

ಕನ್ನಡಪ್ರಭ ವಾರ್ತೆ ಮದ್ದೂರು

ಪಟ್ಟಣದಲ್ಲಿ ಇತ್ತೀಚೆಗೆ ಗಣೇಶಮೂರ್ತಿ ವಿಸರ್ಜನೆ ವೇಳೆ ಉಂಟಾದ ಗಲಭೆ ಅನಿರೀಕ್ಷಿತವಾದದ್ದು. ಇದು ಪೂರ್ವಯೋಜಿತ ಕೃತ್ಯವಲ್ಲ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

ಪಟ್ಟಣದಲ್ಲಿ ಈ ಹಿಂದೆ ಇಂತಹ ಯಾವುದೇ ಘಟನೆಗಳು ನಡೆದಿರಲಿಲ್ಲ. ಈ ಬಾರಿ ಗಲಭೆ ನಡೆಯುತ್ತದೆ ಎಂದು ಯಾರು ನಿರೀಕ್ಷೆ ಮಾಡಿರಲಿಲ್ಲ. ಇದು ಅನಿರೀಕ್ಷಿತವಾಗಿ ಸಂಭವಿಸಿದ ಘಟನೆ ಎಂದು ತನಿಖೆಯಿಂದ ತಿಳಿದು ಬಂದಿದೆ ಎಂದು ಹೇಳಿರುವ ಪೊಲೀಸ್ ಮೂಲಗಳು ಗಲಭೆಗೆ ಯಾರ ಅಥವಾ ಯಾವುದೇ ಕೈವಾಡ ಇಲ್ಲ ಎಂದು ಸ್ಪಷ್ಟಪಡಿಸಿವೆ.

ಪ್ರಕರಣ ಮುಚ್ಚಿ ಹಾಕುವ ಯತ್ನವೇ:

ಗಣೇಶನ ವಿಸರ್ಜನೆ ವೇಳೆ ರಾಮ್ ರಹೀಮ್ ನಗರ ಹಾಗೂ ಚನ್ನೇಗೌಡ ಬಡಾವಣೆಯಲ್ಲಿ ನಡೆದ ಗಲಭೆ ಸಂಬಂಧ 29 ಮಂದಿ ಆರೋಪಿಗಳ ಪೈಕಿ 27 ಮಂದಿಯನ್ನು ಬಂಧಿಸಿ ವಿಚಾರಣೆ ನಡಿಸಿದ ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಇನ್ನೂ ಇಬ್ಬರು ಪ್ರಮುಖ ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ.

ಪ್ರಮುಖ ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ವಿಫಲರಾಗಿದ್ದಾರೆ. ಪ್ರಮುಖ ಆರೋಪಿಗಳ ಬಂಧನವಾಗದಿದ್ದರೂ ಸಹ ಗಲಭೆ ನಡೆದಿರುವುದು ಅನಿರೀಕ್ಷಿತ ಘಟನೆಯಾಗಿದೆ ಎಂದು ಹೇಳುವ ಮೂಲಕ ಪೊಲೀಸರು ಪ್ರಕರಣ ಮುಚ್ಚುಹಾಕುವ ಹುನ್ನಾರ ಅಡಗಿರಬಹುದು ಎಂಬ ಸಂಶಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

ಪೊಲೀಸರು ಗಲಭೆ ಕುರಿತು ತನಿಖೆ ನಡೆಸುತ್ತಿದ್ದರೂ ಇನ್ನೂ ಇಬ್ಬರು ಪ್ರಮುಖ ಆರೋಪಿಗಳ ಬಂಧನವಾಗಬೇಕಾಗಿದೆ. ಅವರನ್ನು ಬಂಧಿಸಿ ವಿಚಾರಣೆ ನಡೆಸಿದ್ದರೂ ಸಹ ಗಲಭೆ ಅನಿರೀಕ್ಷಿತವಾಗಿ ನಡೆದ ಘಟನೆಯಾಗಿದೆ ಎಂದು ಹೇಳುತ್ತಿರುವುದನ್ನು ಗಮನಿಸಿದರೆ ಪೊಲೀಸರು ಯಾವುದೋ ರಾಜಕೀಯ ಪ್ರಭಾವಕ್ಕೆ ಒಳಗಾದಂತೆ ಕಂಡುಬರುತ್ತಿದೆ.

ಒತ್ತಡಗಳಿಂದಾಗಿ ಪೊಲೀಸರು ಗಲಭೆ ಪ್ರಕರಣವನ್ನು ಮುಚ್ಚಿ ಹಾಕಿ ನಿಜವಾದ ಆರೋಪಿಗಳನ್ನು ರಕ್ಷಣೆ ಮಾಡುವ ಪ್ರಯತ್ನ ಇರಬಹುದೆಂದು ಸಾರ್ವಜನಿಕ ವಲಯಗಳಲ್ಲಿ ಇಂತಹ ಮಾತುಗಳು ಕೇಳಿ ಬರುತ್ತಿವೆ.

ಅಕ್ರಮ ಗಾಂಜಾ ಮತ್ತು ಮದ್ಯ ಮಾರಾಟ: 10 ಮಂದಿ ವಿರುದ್ಧ ಪ್ರಕರಣ ದಾಖಲು

ಮದ್ದೂರು:

ಪಟ್ಟಣದ ಚನ್ನೇಗೌಡ ಬಡಾವಣೆ, ರಾಮ್ ರಹೀಮ್ ನಗರ ಹಾಗೂ ಕಾವೇರಿ ನಗರದಲ್ಲಿ ಅಕ್ರಮ ಗಾಂಜಾ ಮತ್ತು ಮದ್ಯ ಮಾರಾಟ ಅಂಗಡಿಗಳ ಮೇಲೆ ದಾಳಿ ನಡೆಸಿದ ಪೊಲೀಸರು 10 ಮಂದಿ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಪ್ರಕರಣದಲ್ಲಿ ಎರಡು ಗಾಂಜಾ ಮಾರಾಟ ಕೇಂದ್ರ ಹಾಗೂ ಅಕ್ರಮ ಮದ್ಯ ಮಾರಾಟ ಅಂಗಡಿಗಳ ಮೇಲೆ ದಿಢೀರ್ ದಾಳಿ ನಡೆಸಿದ ಪೊಲೀಸರು ಆರೋಪಿಗಳ ವಿರುದ್ಧ ಅಬಕಾರಿ ಕಾಯ್ದೆ ಅನ್ವಯ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಪಟ್ಟಣದ ಚನ್ನೇಗೌಡ ಬಡಾವಣೆ ಹಾಗೂ ರಾಮ್ ರಹೀಮ್ ನಗರದಲ್ಲಿ ಇತ್ತೀಚೆಗೆ ಗಣೇಶ ಮೂರ್ತಿ ಮೆರವಣಿಗೆ ವೇಳೆ ನಡೆದ ಗಲಭೆ ಪ್ರಕರಣದಲ್ಲಿ ಪೊಲೀಸರು 27 ಮಂದಿಯನ್ನು ಬಂಧಿಸಿ ನ್ಯಾಯಾಂಗ ಒಪ್ಪಿಸಿದ್ದಾರೆ.

ಗಲಭೆ ನಂತರ ಪೊಲೀಸರು ಎರಡು ಬಡಾವಣೆಗಳ ಹಿಂದೂ ಮತ್ತು ಮುಸ್ಲಿಂ ಜನಾಂಗದ ಮುಖಂಡರು ಮತ್ತು ನಾಗರಿಕರ ಪ್ರತ್ಯೇಕವಾಗಿ ನಡೆದ ಶಾಂತಿ ಸಮಿತಿ ಸಭೆಯಲ್ಲಿ ಬಡಾವಣೆಗಳಲ್ಲಿ ನಡೆಯುತ್ತಿರುವ ಗಾಂಜಾ ಮತ್ತು ಅಕ್ರಮ ಮದ್ಯ ಮಾರಾಟ ಮತ್ತಿತರ ಕಾನೂನು ಭಂಗ ಚಟುವಟಿಕೆಗಳ ವಿರುದ್ಧ ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಎದುರೇ ನೇರವಾಗಿ ದೂರು ನೀಡಿದ್ದರಲ್ಲದೆ, ಅಕ್ರಮ ದಂಧೆಗಳಿಗೆ ಪೊಲೀಸ್ ಠಾಣೆ ಕೆಲವು ಸಿಬ್ಬಂದಿಗಳು ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಆರೋಪಿಸಿದ್ದರು.

ಅಕ್ರಮಗಳಿಗೆ ಕುಮ್ಮಕ್ಕು ನೀಡುತ್ತಿರುವ ಪೊಲೀಸ್ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಜರುಗಿಸುವ ಜೊತೆಗೆ ದಂಧೆಗೆ ಕಡಿವಾಣ ಹಾಕುವಂತೆ ನೇರವಾಗಿ ದೂರು ನೀಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಅವರ ಸೂಚನೆ ಮೇರೆಗೆ ಪೊಲೀಸರು ದಾಳಿ ನಡೆಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

PREV

Recommended Stories

ಬೆಡ್‌ರೂಮಲ್ಲಿ ರಹಸ್ಯ ಕ್ಯಾಮೆರಾ: ಲೈಂಗಿಕಕ್ರಿಯೆ ಚಿತ್ರೀಕರಿಸಿ ದೌರ್ಜನ್ಯ
ಶಾರ್ಟ್ ಸರ್ಕ್ಯೂಟ್‌: 19 ಎಲೆಕ್ಟ್ರಿಕ್‌ ಸ್ಕೂಟರ್‌ಗಳು ಬೆಂಕಿಗೆ ಆಹುತಿ