ಸುರಕ್ಷಿತವೆಂದು ಭಾವಿಸುವ ಬ್ಯಾಂಕ್‌ ಲಾಕರ್‌ನಲ್ಲಿಯೂ ಕಳ್ಳಾಟ: ಇರಿಸಿದ್ದ ಚಿನ್ನ ನಾಪತ್ತೆ !

KannadaprabhaNewsNetwork |  
Published : Mar 04, 2025, 01:46 AM ISTUpdated : Mar 04, 2025, 04:30 AM IST
ಚಿನ್ನಾಭರಣ | Kannada Prabha

ಸಾರಾಂಶ

ಕೆಲವರು ತಮ್ಮ ಮಹತ್ವದ ದಾಖಲೆಗಳು ಹಾಗೂ ಚಿನ್ನಾಭರಣಗಳ ಸುರಕ್ಷತೆ ದೃಷ್ಟಿಯಿಂದ ಬ್ಯಾಂಕ್‌ಗಳ ಲಾಕರ್‌ನಲ್ಲಿ ಇರಿಸುತ್ತಾರೆ. ಆದರೆ, ಈಗ ಈ ಲಾಕರ್‌ಗಳ ಸುರಕ್ಷತೆ ಬಗ್ಗೆಯೇ ಪ್ರಶ್ನೆಗಳು ಎದುರಾಗಿವೆ.

 ಬೆಂಗಳೂರು : ಕೆಲವರು ತಮ್ಮ ಮಹತ್ವದ ದಾಖಲೆಗಳು ಹಾಗೂ ಚಿನ್ನಾಭರಣಗಳ ಸುರಕ್ಷತೆ ದೃಷ್ಟಿಯಿಂದ ಬ್ಯಾಂಕ್‌ಗಳ ಲಾಕರ್‌ನಲ್ಲಿ ಇರಿಸುತ್ತಾರೆ. ಆದರೆ, ಈಗ ಈ ಲಾಕರ್‌ಗಳ ಸುರಕ್ಷತೆ ಬಗ್ಗೆಯೇ ಪ್ರಶ್ನೆಗಳು ಎದುರಾಗಿವೆ.

ಏಕೆಂದರೆ, ವ್ಯಕ್ತಿಯೊಬ್ಬರು ಬ್ಯಾಂಕ್‌ವೊಂದರ ಲಾಕರ್‌ನಲ್ಲಿ ಇರಿಸಿದ್ದ ₹31.15 ಲಕ್ಷ ಮೌಲ್ಯದ ಚಿನ್ನಾಭರಣ ನಾಪತ್ತೆಯಾಗಿದ್ದು, ದುಷ್ಕರ್ಮಿಗಳು ಅಸಲಿ ಚಿನ್ನಾಭರಣ ತೆಗೆದುಕೊಂಡು ನಕಲಿ ಚಿನ್ನಾಭರಣಗಳನ್ನು ಇರಿಸಿದ್ದಾರೆ.

ಜಯನಗರ 8ನೇ ಬ್ಲಾಕ್‌ನ ಬ್ಯಾಂಕ್‌ ಆಫ್‌ ಬರೋಡಾ ಶಾಖೆಯಲ್ಲೇ ಈ ಕೃತ್ಯ ನಡೆದಿದೆ. ಈ ಸಂಬಂಧ ಜೆ.ಪಿ.ನಗರ 7ನೇ ಹಂತದ ಪುಟ್ಟೇನಹಳ್ಳಿ ನಿವಾಸಿ ರಾಜೇಂದ್ರ ಸಿ.ಪಾಟೀಲ್‌ ಎಂಬುವವರು ನೀಡಿದ ದೂರಿನ ಮೇರೆಗೆ ಬ್ಯಾಂಕ್‌ ಆಫ್‌ ಬರೋಡಾ ಶಾಖೆಯ ಅಸಿಸ್ಟೆಂಟ್‌ ಮ್ಯಾನೇಜರ್‌ ರಾಜು ಎಂಬುವವರ ವಿರುದ್ಧ ಜಯನಗರ ಠಾಣೆ ಪೊಲೀಸರು ಎಫ್‌ಐಆರ್‌ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಏನಿದು ಪ್ರಕರಣ?

ದೂರುದಾರ ರಾಜೇಂದ್ರ ಸಿ.ಪಾಟೀಲ್‌ ಅವರು 2021ರ ಜೂನ್‌ 5ರಂದು ಜಯನಗರ 8ನೇ ಬ್ಲಾಕ್‌ನ ಬ್ಯಾಂಕ್‌ ಆಫ್‌ ಬರೋಡಾ ಶಾಖೆಯಲ್ಲಿ ವೈಯಕ್ತಿಕ ಲಾಕರ್‌ ತೆಗೆದುಕೊಂಡಿದ್ದರು. ಈ ಲಾಕರ್‌ನಲ್ಲಿ ಕೆಲವು ವೈಯಕ್ತಿಕ ದಾಖಲೆಗಳು ಹಾಗೂ ಚಿನ್ನಾಭರಣ ಸುರಕ್ಷಿತವಾಗಿ ಇರಿಸಿದ್ದರು. 2024ನೇ ಸಾಲಿನಲ್ಲಿ ಜೂ.6ರ, ಜು.31 ಮತ್ತು ಅ.7ರಂದು ಆ ಲಾಕರ್‌ ತೆರೆದಿದ್ದರು. ತಮ್ಮ ಬಳಿ ಇದ್ದ ಒಂದು ಕೀ ಮತ್ತು ಬ್ಯಾಂಕಿನ ಅಸಿಸ್ಟೆಂಟ್‌ ಮ್ಯಾನೇಜರ್‌ ರಾಜು ಅವರ ಬಳಿ ಇದ್ದ ಮಾಸ್ಟರ್‌ ಕೀ ಬಳಸಿ ಆ ಲಾಕರ್‌ ತೆರೆಯುತ್ತಿದ್ದರು.

ಫೆ.20ರಂದು ಲಾಕರ್‌ ತೆರೆದಾಗ ಪತ್ತೆ !

ಕಳೆದ ಅ.7ರಂದು ರಾಜೇಂದ್ರ ಸಿ.ಪಾಟೀಲ್‌ ಕೊನೆಯದಾಗಿ ಲಾಕರ್‌ ತೆರೆದು ನೋಡಿದಾಗ ₹31.15 ಲಕ್ಷ ಮೌಲ್ಯದ ಚಿನ್ನಾಭರಣಗಳು ಆ ಲಾಕರ್‌ನಲ್ಲಿ ಇದ್ದವು. ಬಳಿಕ ಫೆ.20ರಂದು ಆ ಲಾಕರ್‌ ತೆರೆದು ನೋಡಿದಾಗ ಚಿನ್ನಾಭರಣಗಳು ನಾಪತ್ತೆಯಾಗಿದ್ದವು. ಅಸಲಿ ಬದಲು ನಕಲಿ ಚಿನ್ನಾಭರಣಗಳು ಆ ಲಾಕರ್‌ನಲ್ಲಿ ಇರುವುದು ಕಂಡು ಬಂದಿದೆ.

ಅಸಿಸ್ಟೆಂಟ್ ಮ್ಯಾನೇಜರ್‌ ಉಡಾಫೆ ಉತ್ತರ

ಈ ಬಗ್ಗೆ ಅಸಿಸ್ಟೆಂಟ್‌ ಮ್ಯಾನೇಜರ್‌ ರಾಜು ಅವರನ್ನು ಪ್ರಶ್ನೆ ಮಾಡಿದಾಗ, ನಮಗೆ ಈ ಬಗ್ಗೆ ಗೊತ್ತಿಲ್ಲ. ನಮಗೆ ಆರ್‌ಬಿಐ ಗೈಡ್‌ಲೈನ್ಸ್‌ ಇದೆ. ನಮಗೂ ಇದಕ್ಕೂ ಸಂಬಂಧವಿಲ್ಲ ಎಂದು ಉಡಾಫೆಯಿಂದ ಮಾತನಾಡಿದ್ದಾರೆ. ಹೀಗಾಗಿ ಅಸಿಸ್ಟೆಂಟ್‌ ಮ್ಯಾನೇಜರ್ ರಾಜು ಮತ್ತು ಬ್ಯಾಂಕಿನ ಸಿಬ್ಬಂದಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ರಾಜೇಂದ್ರ ಸಿ.ಪಾಟೀಲ್‌ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಯನಗರ 8ನೇ ಬ್ಲಾಕ್‌ನ ಬ್ಯಾಂಕ್‌ ಆಫ್‌ ಬರೋಡಾ ಶಾಖೆಯ ಲಾಕರ್‌ನಲ್ಲಿದ್ದ ಚಿನ್ನಾಭರಣಗಳು ನಾಪತ್ತೆಯಾಗಿರುವ ಸಂಬಂಧ ವ್ಯಕ್ತಿಯೊಬ್ಬರು ನೀಡಿದ ದೂರಿನ ಮೇರೆಗೆ ಅಸಿಸ್ಟೆಂಟ್‌ ಮ್ಯಾನೇಜರ್‌ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ.

- ಲೋಕೇಶ್‌ ಬಿ.ಜಗಲಾಸರ್‌, ದಕ್ಷಿಣ ವಿಭಾಗದ ಡಿಸಿಪಿ

PREV

Recommended Stories

ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ
ಹಿಂಸೆ ಸಹಿಸದೆ ಕುಡುಕ ಪತಿಯ ಕೊಲೆ: ಪತ್ನಿ, ಬಾವಿ ಅಳಿಯ ಸೆರೆ