ರೌಡಿ ಬಿಕ್ಲು ಶಿವ ಹತ್ಯೆ: ಶಾಸಕ ಬೈರತಿ ಬಸವರಾಜುಗೆ ಬಂಧನ ಭೀತಿ

KannadaprabhaNewsNetwork |  
Published : Jul 19, 2025, 02:00 AM ISTUpdated : Jul 19, 2025, 07:52 AM IST
Byrati Basavaraj

ಸಾರಾಂಶ

ಭಾರತಿ ನಗರದ ರೌಡಿ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಕೊಲೆ ಪ್ರಕರಣ ಸಂಬಂಧ ಕೆ.ಆರ್‌.ಪುರ ಕ್ಷೇತ್ರದ ಬಿಜೆಪಿ ಶಾಸಕ, ಮಾಜಿ ಸಚಿವ ಬೈರತಿ ಬಸವರಾಜು ಅವರಿಗೆ ಬಂಧನ ಭೀತಿ ಹೆಚ್ಚಾಗಿದೆ. ಮೂಲಗಳ ಪ್ರಕಾರ ಮೂರು ದಿನ ವಿಚಾರಣೆ ನಡೆಸಿ ಅವರನ್ನು ಬಂಧಿಸುವ ಸಾಧ್ಯತೆ ಇದೆ.

 ಬೆಂಗಳೂರು :  ಭಾರತಿ ನಗರದ ರೌಡಿ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಕೊಲೆ ಪ್ರಕರಣ ಸಂಬಂಧ ಕೆ.ಆರ್‌.ಪುರ ಕ್ಷೇತ್ರದ ಬಿಜೆಪಿ ಶಾಸಕ, ಮಾಜಿ ಸಚಿವ ಬೈರತಿ ಬಸವರಾಜು ಅವರಿಗೆ ಬಂಧನ ಭೀತಿ ಹೆಚ್ಚಾಗಿದೆ. ಮೂಲಗಳ ಪ್ರಕಾರ ಮೂರು ದಿನ ವಿಚಾರಣೆ ನಡೆಸಿ ಅವರನ್ನು ಬಂಧಿಸುವ ಸಾಧ್ಯತೆ ಇದೆ.

ಪ್ರಕರಣಕ್ಕೆ ಸಂಬಂಧಿಸಿ ನೋಟಿಸ್ ನೀಡಿದ್ದರೂ ಪೊಲೀಸ್‌ ವಿಚಾರಣೆಗೆ ಹಾಜರಾಗದೆ ಗೈರಾಗಿದ್ದ ಬೈರತಿ ಬಸವರಾಜು ಅವರು, ಶನಿವಾರ ತನಿಖಾಧಿಕಾರಿ ಮುಂದೆ ಹಾಜರಾಗುವ ಅನಿರ್ವಾಯತೆ ನಿರ್ಮಾಣವಾಗಿದೆ. ಈಗಾಗಲೇ ಹೈಕೋರ್ಟ್ ಸಹ ವಿಚಾರಣೆಗೆ ಹಾಜರಾಗುವಂತೆ ಸ್ಪಷ್ಟವಾಗಿ ಶಾಸಕರಿಗೆ ಸೂಚಿಸಿದೆ. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಹತ್ಯೆ ಪ್ರಕರಣ ಸಂಬಂಧ ಶಾಸಕರಿಗೆ ಬಂಧನ ಭೀತಿ ಹೆಚ್ಚಾಗಿದೆ ಎಂದು ಮೂಲಗಳು ತಿಳಿಸಿವೆ.

ನಾಲ್ಕು ದಿನಗಳ ಹಿಂದೆ ಕಿತ್ತಗನೂರು ಜಮೀನು ವಿವಾದದ ಹಿನ್ನೆಲೆಯಲ್ಲಿ ಹಲಸೂರು ಕೆರೆ ಸಮೀಪದ ತನ್ನ ಮನೆ ಮುಂದೆ ನಿಂತಿದ್ದ ರೌಡಿ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವನ ಮೇಲೆ ಶಾಸಕ ಬೈರತಿ ಬಸವರಾಜು ಅವರ ಬೆಂಬಲಿಗ ಎನ್ನಲಾದ ಹೆಣ್ಣೂರಿನ ಜಗದೀಶ್ ಅಲಿಯಾಸ್ ಜಗ್ಗನ ಸಹಚರರು ಮಾರಕಾಸ್ತ್ರಗಳಿಂದ ಭೀಕರವಾಗಿ ಹಲ್ಲೆ ನಡೆಸಿ ಹತ್ಯೆಗೈದಿದ್ದರು. ಈ ಕೊಲೆ ಪ್ರಕರಣ ಸಂಬಂಧ ಜಗ್ಗನ ಐವರು ಬೆಂಬಲಿಗರನ್ನು ಬಂಧಿಸಿದ ಪೊಲೀಸರು, ಹೊರ ರಾಜ್ಯದಲ್ಲಿ ತಲೆಮರೆಸಿಕೊಂಡಿರುವ ಜಗ್ಗನ ಪತ್ತೆಗೆ ಕಾರ್ಯಾಚರಣೆ ನಡೆಸಿದ್ದಾರೆ.

2 ದಿನದಲ್ಲಿ ಹಾಜರಾಗಲು ಸೂಚನೆ:

ಮಗನ ಹತ್ಯೆಗೆ ಶಾಸಕರು ಕುಮ್ಮಕ್ಕು ನೀಡಿದ್ದಾರೆ ಎಂದು ಆರೋಪಿಸಿ ಮೃತ ರೌಡಿಯ ತಾಯಿ ವಿಜಯಲಕ್ಷ್ಮೀ ದೂರು ನೀಡಿದ್ದರು. ಅದರಂತೆ ಎಫ್‌ಐಆರ್‌ನಲ್ಲಿ 5ನೇ ಆರೋಪಿ ಎಂದು ಶಾಸಕ ಬೈರತಿ ಬಸವರಾಜು ಹೆಸರು ಉಲ್ಲೇಖವಾಗಿತ್ತು. ಈ ಆರೋಪದ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ಶಾಸಕರಿಗೆ ಗುರುವಾರ ರಾತ್ರಿ ತನಿಖಾಧಿಕಾರಿ, ಕೆ.ಜಿ.ಹಳ್ಳಿ ಉಪ ವಿಭಾಗದ ಎಸಿಪಿ ಪ್ರಕಾಶ್ ರಾಥೋಡ್ ನೋಟಿಸ್ ಜಾರಿಗೊಳಿಸಿದ್ದರು.

ಎರಡು ದಿನಗಳಲ್ಲಿ ವಿಚಾರಣೆಗೆ ಹಾಜರಾಗುವಂತೆ ಆರೋಪಿ ಶಾಸಕರಿಗೆ ಸೂಚಿಸಲಾಗಿತ್ತು. ಆದರೆ ಶುಕ್ರವಾರ ವಿಚಾರಣೆಗೆ ಗೈರಾಗಿದ್ದ ಅವರು ಶನಿವಾರ ತನಿಖಾಧಿಕಾರಿ ಮುಂದೆ ಬರಬೇಕಿದೆ. ಇತ್ತ ಹೈಕೋರ್ಟ್ ಸಹ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿರುವುದು ಶಾಸಕರಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ ಎಂದು ತಿಳಿದು ಬಂದಿದೆ.

ಠಾಣೆಯಲ್ಲೇ ಹಿರಿಯ ಅಧಿಕಾರಿಗಳ ಸಭೆ:

ಕೊಲೆ ಪ್ರಕರಣದಲ್ಲಿ ಶಾಸಕ ಬೈರತಿ ಬಸವರಾಜು ವಿರುದ್ಧ ಮುಂದಿನ ಕಾನೂನು ಕ್ರಮ ಜರುಗಿಸುವ ಸಂಬಂಧ ಶುಕ್ರವಾರ ಸಂಜೆ ಭಾರತಿ ನಗರ ಠಾಣೆಯಲ್ಲಿ ಹಿರಿಯ ಅಧಿಕಾರಿಗಳ ಸಭೆ ನಡೆಯಿತು.

ಜಂಟಿ ಆಯುಕ್ತ (ಪೂರ್ವ) ರಮೇಶ್ ಬಾನೋತ್‌, ಡಿಸಿಪಿ ಡಿ.ದೇವರಾಜ್, ಎಸಿಪಿಗಳಾದ ಗೀತಾ ಹಾಗೂ ಪ್ರಕಾಶ್ ರಾಥೋಡ್ ಸೇರಿ ಇತರೆ ಅಧಿಕಾರಿಗಳು ಪಾಲ್ಗೊಂಡಿದ್ದರು. ಪ್ರಕರಣ ವಜಾ ಕೋರಿ ಶಾಸಕರು ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಹೈಕೋರ್ಟ್‌ ನೀಡಿರುವ ಆದೇಶದ ಬಗ್ಗೆ ಅಧಿಕಾರಿಗಳಿಂದ ಜಂಟಿ ಆಯುಕ್ತರು ಮಾಹಿತಿ ಪಡೆದರು. ಪ್ರಕರಣದ ಕುರಿತು ಶನಿವಾರ ತನಿಖಾಧಿಕಾರಿ ಮುಂದೆ ಹಾಜರಾಗಲಿರುವ ಶಾಸಕ ಬೈರತಿ ಬಸವರಾಜು ಅವರ ವಿಚಾರಣೆ ಬಗ್ಗೆ ಅಧಿಕಾರಿಗಳು ಸಮಾಲೋಚಿಸಿದ್ದಾರೆ. ಈ ಸಭೆ ಹಿನ್ನೆಲೆಯಲ್ಲಿ ಶಾಸಕರ ವಿರುದ್ಧ ಕಠಿಣ ಕ್ರಮ ಜರಗಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.

PREV
Read more Articles on

Latest Stories

ಬೈರತಿ ಬಸವರಾಜುಗೆ ಸತತ 3 ಗಂಟೆ ವಿಚಾರಣೆ ಬಿಸಿ
ಬೈರತಿ ಬಸವರಾಜುಗೆ 3 ಗಂಟೆ ವಿಚಾರಣೆ ಬಿಸಿ
ರೌಡಿ ನಹೀಮ್‌ ಕೊಲೆ ಪ್ರಕರಣದಲ್ಲಿ ಐದು ಆರೋಪಿಗಳ ಬಂಧನ