ಕನ್ನಡಪ್ರಭ ವಾರ್ತೆ ಬೆಂಗಳೂರು
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ತನ್ನ 3 ವಾರದ ನವಜಾತ ಶಿಶುವನ್ನು ಕೊಲ್ಲುವುದಾಗಿ ಬೆದರಿಸಿದ್ದ ರೌಡಿಯೊಬ್ಬನನ್ನು ಹತ್ಯೆಗೈದಿದ್ದ ಮೃತನ ಪತ್ನಿ ಸೋದರ ಸಂಬಂಧಿಕರನ್ನು ಸಿದ್ದಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.ದಯಾನಂದನಗರ ನಿವಾಸಿ ಸಲ್ಮಾನ್ ಖಾನ್ (29) ಹತ್ಯೆಯಾಗಿದ್ದು, ಈ ಕೃತ್ಯ ನಡೆದ ಕೆಲವೇ ಕ್ಷಣಗಳಲ್ಲಿ ಆರೋಪಿಗಳಾದ ಸೈಯದ್ ಅನ್ಸರ್, ಉಮರ್ ಖಾನ್ ಹಾಗೂ ಮಹಮ್ಮದ್ ಶೋಯೆಬ್‌ನನ್ನು ಪೊಲೀಸರು ಸೆರೆ ಹಿಡಿದಿದ್ದಾರೆ.
ಕೌಟುಂಬಿಕ ಭಿನ್ನಾಭಿಪ್ರಾಯದ ಕಾರಣಕ್ಕೆ ಮನೆಯಲ್ಲಿ ತನ್ನ ಪತ್ನಿ ಮೇಲೆ ಮಂಗಳವಾರ ಮುಂಜಾನೆ ಗಲಾಟೆ ಮಾಡಿದ್ದ ಸಲ್ಮಾನ್, ತನ್ನ ನವಜಾತ ಮಗನನ್ನು ಕೊಲ್ಲುವುದಾಗಿ ಬೆದರಿಸಿದ್ದಾನೆ. ಆಗ ಭೀತಿಗೊಂಡ ಮೃತನ ಪತ್ನಿ ತಕ್ಷಣವೇ ಸಮೀಪದಲ್ಲೇ ಇದ್ದ ತವರು ಮನೆಗೆ ತೆರಳಿ ಗಲಾಟೆ ಬಗ್ಗೆ ತಿಳಿಸಿ ಕಣ್ಣೀರಿಟ್ಟಿದ್ದಾಳೆ.ಮಗು ಕೊಲ್ಲುವುದಾಗಿ ಬೆದರಿಕೆ ಸಂಗತಿ ಗೊತ್ತಾಗಿ ಕೆರಳಿದ ಆಕೆಯ ಸೋದರ ಸಂಬಂಧಿಗಳು, ರೊಚ್ಚಿಗೆದ್ದು ಸಲ್ಮಾನ್ ಮನೆಗೆ ನುಗ್ಗಿ ದಾಳಿ ನಡೆಸಿದ್ದಾರೆ. ಈ ವೇಳೆ ಮೀನು ಕತ್ತರಿಸುವ ಚಾಕುವಿನಿಂದ ಇರಿದು ಆತನನ್ನು ಆರೋಪಿಗಳು ಹತ್ಯೆ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಸಲ್ಮಾನ್ ಕ್ರಿಮಿನಲ್ ಹಿನ್ನಲೆಯುಳ್ಳವನಾಗಿದ್ದು, ಕಳೆದ 8 ವರ್ಷಗಳಿಂದ ಅಪರಾಧ ಚಟುಟಿಕೆಗಳಲ್ಲಿ ಆತ ಸಕ್ರಿಯವಾಗಿದ್ದ. ಈತನ ಮೇಲೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದವು. ಅಲ್ಲದೆ ಈ ಕ್ರಿಮಿನಲ್ ಹಿನ್ನಲೆ ಕಾರಣಕ್ಕೆ ಸಲ್ಮಾನ್ ವಿರುದ್ಧ ರೌಡಿಪಟ್ಟಿ ಕೂಡ ತೆರೆಯಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಮೊದಲು ಬೀರು ತಯಾರಿಕೆ ಕೈಗಾರಿಕೆಯಲ್ಲಿ ಕೆಲಸ ಮಾಡುತ್ತಿದ್ದ ಸಲ್ಮಾನ್, ಇತ್ತೀಚಿಗೆ ಸರಿಯಾಗಿ ಕೆಲಸಕ್ಕೆ ಹೋಗದೆ ಅಲೆಯುತ್ತಿದ್ದ. ವಿಪರೀತ ಮದ್ಯ ವ್ಯಸನಿಯಾಗಿದ್ದ ಆತ, ಕ್ಷುಲ್ಲಕ ಕಾರಣಗಳಿಗೆ ಮನೆಯಲ್ಲಿ ಪತ್ನಿ ಮೇಲೆ ಗಲಾಟೆ ಮಾಡುತ್ತಿದ್ದ. ಅದೇ ರೀತಿ ಮಂಗಳವಾರ ಮುಂಜಾನೆ ನಡೆದ ಗಲಾಟೆಯು ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.