ನಟಿ ರನ್ಯಾ ಹಿಂದಿರುವ ವ್ಯಕ್ತಿಗಳಿಗಾಗಿ ತಲಾಶ್‌ : ₹2.06 ಕೋಟಿ ಮೌಲ್ಯದ ಚಿನ್ನಾಭರಣ ಜಪ್ತಿ

KannadaprabhaNewsNetwork | Updated : Mar 06 2025, 04:45 AM IST

ಸಾರಾಂಶ

ನಟಿ ರನ್ಯಾ ರಾವ್ ವಿರುದ್ಧದ ಚಿನ್ನ ಕಳ್ಳ ಸಾಗಾಣಿಕೆ ಪ್ರಕರಣದ ತನಿಖೆ ಮುಂದುವರೆಸಿರುವ ಕಂದಾಯ ಗುಪ್ತಚರ ಜಾರಿ ನಿರ್ದೇಶನಾಲಯ (ಡಿಆರ್‌ಐ) ಅಧಿಕಾರಿಗಳು ಮತ್ತೆ ನಟಿ ಮನೆಯಲ್ಲಿ ₹2.06 ಕೋಟಿ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.

 ಬೆಂಗಳೂರು :  ನಟಿ ರನ್ಯಾ ರಾವ್ ವಿರುದ್ಧದ ಚಿನ್ನ ಕಳ್ಳ ಸಾಗಾಣಿಕೆ ಪ್ರಕರಣದ ತನಿಖೆ ಮುಂದುವರೆಸಿರುವ ಕಂದಾಯ ಗುಪ್ತಚರ ಜಾರಿ ನಿರ್ದೇಶನಾಲಯ (ಡಿಆರ್‌ಐ) ಅಧಿಕಾರಿಗಳು ಮತ್ತೆ ನಟಿ ಮನೆಯಲ್ಲಿ ₹2.06 ಕೋಟಿ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.

ನಗರದ ಲ್ಯಾವೆಲ್ಲೆ ರಸ್ತೆಯಲ್ಲಿರುವ ರನ್ಯಾ ಅವರ ಮನೆ ಮೇಲೆ ಡಿಆರ್‌ಐ ಅಧಿಕಾರಿಗಳು ಮಂಗಳವಾರ ರಾತ್ರಿ ದಾಳಿ ನಡೆಸಿದ್ದರು. ಈ ವೇಳೆ ₹2.06 ಕೋಟಿ ಮೌಲ್ಯದ ಚಿನ್ನ ಹಾಗೂ ₹2.67 ಕೋಟಿ ನಗದು ಜಪ್ತಿಯಾಗಿದೆ. ಈ ಮೂಲಕ ಇದುವರೆಗೆ ಚಿನ್ನ ಕಳ್ಳ ಸಾಗಾಣಿಕೆ ಪ್ರಕರಣ ಸಂಬಂಧ ಒಟ್ಟು ರನ್ಯಾ ಬಳಿ ₹17 ಕೋಟಿ ಮೌಲ್ಯದ ವಸ್ತುಗಳು ಜಪ್ತಿಯಾಗಿವೆ.

ಅಕ್ರಮ ಮಾರ್ಗದಲ್ಲಿ ಚಿನ್ನ ಸಾಗಾಣಿಕೆ ಕೃತ್ಯದಲ್ಲಿ ದೊಡ್ಡ ಮಟ್ಟದ ಹಣ ವರ್ಗಾವಣೆಯಾಗಿದೆ. ಇದು ಚಿನ್ನದ ವ್ಯಾಪಾರಕ್ಕೆ ಸಂಬಂಧಿಸಿದ ಚಿನ್ನವಂತೂ ಅಲ್ಲ. ಹಾಗಾಗಿ ಚಿನ್ನ ಖರೀದಿ ಹಾಗೂ ಅದರ ಸಾಗಾಣಿಕೆಗೆ ಕಾಣದ ಕೈಗಳ ಬಂಡವಾಳ ಹೂಡಿಕೆ ಬಗ್ಗೆ ಶಂಕೆ ಇದೆ. ಈ ಆಯಾಮದಲ್ಲಿ ತನಿಖೆ ಮುಂದುವರೆಸಲಾಗಿದೆ ಎಂದು ಮೂಲಗಳು ಹೇಳಿವೆ.

ಎರಡು ದಿನಗಳ ಹಿಂದೆ ದುಬೈನಿಂದ ತನ್ನ ಪತಿ ಜತೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಎಮಿರೆಟ್ಸ್ ವಿಮಾನದಲ್ಲಿ ರನ್ಯಾ ಆಗಮಿಸಿದ್ದರು. ಆ ವೇಳೆ ಶಂಕೆ ಮೇರೆಗೆ ಆಕೆಯನ್ನು ವಶಕ್ಕೆ ಪಡೆದು ತಪಾಸಣೆ ನಡೆಸಿದಾಗ ₹12.56 ಕೋಟಿ ಮೌಲ್ಯದ 14.2 ಕೇಜಿ ಚಿನ್ನ ಪತ್ತೆಯಾಗಿದೆ. ರಾಜ್ಯದ ಮಟ್ಟಿಗೆ ನಡೆದ ಇತಿಹಾಸದಲ್ಲೇ ಡಿಆರ್‌ಐ ನಡೆಸಿದ ದೊಡ್ಡ ಬೇಟೆ ಎಂದು ಡಿಆರ್‌ಐ ಅಧಿಕಾರಿಗಳು ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ರನ್ಯಾ ಸಂಪರ್ಕ ಜಾಲದ ಶೋಧನೆ:

ರಾಜ್ಯ ಪೊಲೀಸ್ ಗೃಹ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಹಾಗೂ ಡಿಜಿಪಿ ರಾಮಚಂದ್ರರಾವ್ ಅವರ ಮಲ ಮಗಳು ಆಗಿರುವ ನಟಿ ರನ್ಯಾ ವಿರುದ್ಧ ತನಿಖೆಯನ್ನು ಡಿಆರ್‌ಐ ತೀವ್ರಗೊಳಿಸಿದೆ. ನಟಿ ಸಂಪರ್ಕಜಾಲವನ್ನು ಶೋಧಿಸಿರುವ ಅಧಿಕಾರಿಗಳು, ಆಕೆಯ ಎರಡು ವರ್ಷಗಳ ವಿದೇಶ ಪ್ರಯಾಣದ ಹಿಸ್ಟರಿ ಬಗ್ಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಲಸೆ ವಿಭಾಗದಿಂದ ಮಾಹಿತಿ ಪಡೆದಿದ್ದಾರೆ ಎನ್ನಲಾಗಿದೆ.

ರನ್ಯಾ ಸ್ನೇಹಿತರ ವಿಚಾರಣೆ ಸಾಧ್ಯತೆ:

ಚಿನ್ನ ಕಳ್ಳ ಸಾಗಾಣಿಕೆ ಪ್ರಕರಣ ಕುರಿತು ನಟಿ ರನ್ಯಾ ಆಪ್ತ ಬಳಗ ಗೆಳೆಯರು ಸೇರಿದಂತೆ ಕೆಲವರಿಗೆ ಡಿಆರ್‌ಐ ತನಿಖೆ ಬಿಸಿ ತಟ್ಟಲಿದೆ ಎನ್ನಲಾಗಿದ್ದು, ಶೀಘ್ರವೇ ಕೆಲವರಿಗೆ ವಿಚಾರಣೆಗೆ ಹಾಜರಾಗುವಂತೆ ಅಧಿಕಾರಿಗಳು ನೋಟಿಸ್ ನೀಡಲಿದ್ದಾರೆ ಎಂದು ತಿಳಿದು ಬಂದಿದೆ. ಇ.ಡಿ.ಗೆ ಡಿಆರ್‌ಇ ವರದಿ

ನಟಿ ರನ್ಯಾ ಬಳಿ ₹2.6 ಕೋಟಿ ನಗದು ಜಪ್ತಿ ಸಂಬಂಧ ಜಾರಿ ನಿರ್ದೇಶನಾಲಯ ಅಧಿಕಾರಿಗಳಿಗೆ ಡಿಆರ್‌ಇ ಮಾಹಿತಿ ನೀಡಿದೆ ಎಂದು ತಿಳಿದು ಬಂದಿದೆ.

ಚಿನ್ನ ಕಳ್ಳ ಸಾಗಾಣಿಕೆ ಪ್ರಕರಣದಲ್ಲಿ ನಡೆದ ದಾಳಿ ಸಂದರ್ಭದಲ್ಲಿ ರನ್ಯಾ ಅವರ ಮನೆಯಲ್ಲಿ ₹2.6 ಕೋಟಿ ಹಣ ಪತ್ತೆಯಾಗಿದೆ. ಅಲ್ಲದೆ ಚಿನ್ನ ಸಾಗಾಣಿಕೆ ಕೃತ್ಯದಲ್ಲಿ ಸಹ ಅಕ್ರಮ ಹಣ ವರ್ಗಾವಣೆ ಬಗ್ಗೆ ಶಂಕೆ ಇದೆ. ಈ ಕುರಿತು ತನಿಖೆ ಅಗತ್ಯವಿದೆ ಎಂದು ಇಡಿಗೆ ಡಿಆರ್‌ಐ ಪತ್ರ ಬರೆದಿದೆ ಎನ್ನಲಾಗಿದೆ. 

ಜಾಮೀನು ಮೊರೆ ಹೋದ ರನ್ಯಾ

ಈ ಪ್ರಕರಣದಲ್ಲಿ ಜಾಮೀನು ಕೋರಿ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯಕ್ಕೆ ಬುಧವಾರ ರನ್ಯಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಚಿನ್ನ ಕಳ್ಳ ಸಾಗಾಣಿಕೆ ಪ್ರಕರಣದಲ್ಲಿ ಬಂಧಿತರಾಗಿ ಅವರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದಾರೆ.

ಎಲ್ಲರಿಗಿಂತ ಮೊದಲೇತಿಳಿಯುವುದು ಇಲ್ಲೇ!

ನಟಿ ರನ್ಯಾ ಬಳಿ 2 ಕೋಟಿ ರು.ಗೂ ಅಧಿಕ ಹಣ ಜಪ್ತಿ ಬಗ್ಗೆ ‘ಕನ್ನಡಪ್ರಭ’ ಮಾತ್ರ ನಿನ್ನೆ ವರದಿ ಮಾಡಿತ್ತು. 

 - ರಾಜ್ಯದ ಇತಿಹಾಸದಲ್ಲೇ ದೊಡ್ಡ ಚಿನ್ನ ಸ್ಮಗ್ಲಿಂಗ್‌ ಕೇಸಿದು 

ನಟಿ ಮನೆಯಲ್ಲಿ ಇನ್ನೂ ₹2 ಕೋಟಿ ಬಂಗಾರ ವಶ

ಇ.ಡಿ. ಉರುಳು

ಚಿತ್ರನಟಿ ಬಳಿ ಪತ್ತೆಯಾದ ನಗದು ಪತ್ತೆ ಇ.ಡಿ.ಗೆ ಡಿಆರ್‌ಐ ಮಾಹಿತಿ ನೀಡಿದೆ. ಚಿನ್ನ ಖರೀದಿಯಲ್ಲಿ ಅಕ್ರಮ ಹಣ ವರ್ಗಾವಣೆಯಾಗಿರುವ ಬಗ್ಗೆಯೂ ಶಂಕೆ ವ್ಯಕ್ತಪಡಿಸಿದೆ. ಹೀಗಾಗಿ ನಟಿಗೆ ಇ.ಡಿ. ತನಿಖೆ ಬಿಸಿ ಎದುರಾಗುವ ಸಾಧ್ಯತೆ ಇದೆ.

Share this article