ಸೀಟ್‌ ಬ್ಲಾಕಿಂಗ್‌ ದಂಧೆ ಕೇಸ್‌: 10 ಮಂದಿ ಬಂಧನ

KannadaprabhaNewsNetwork |  
Published : Dec 04, 2024, 01:30 AM IST
Avinash | Kannada Prabha

ಸಾರಾಂಶ

ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳ ಸರ್ಕಾರಿ ಕೋಟಾದ ಸೀಟುಗಳ ಬ್ಲಾಕಿಂಗ್‌ ದಂಧೆ ಪ್ರಕರಣದಲ್ಲಿ ಆರೋಪಿಗಳು ಅಭ್ಯರ್ಥಿಗಳ ಸೋಗಿನಲ್ಲಿ ನೆರೆಯ ಗೋವಾ ಹಾಗೂ ರಾಜ್ಯದ ವಿವಿಧೆಡೆ ಕುಳಿತು ಸೀಟ್‌ ಬ್ಲಾಕ್‌ ಮಾಡಿರುವುದು ಪೊಲೀಸರ ತನಿಖೆ ವೇಳೆ ಬೆಳಕಿಗೆ ಬಂದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳ ಸರ್ಕಾರಿ ಕೋಟಾದ ಸೀಟುಗಳ ಬ್ಲಾಕಿಂಗ್‌ ದಂಧೆ ಪ್ರಕರಣದಲ್ಲಿ ಆರೋಪಿಗಳು ಅಭ್ಯರ್ಥಿಗಳ ಸೋಗಿನಲ್ಲಿ ನೆರೆಯ ಗೋವಾ ಹಾಗೂ ರಾಜ್ಯದ ವಿವಿಧೆಡೆ ಕುಳಿತು ಸೀಟ್‌ ಬ್ಲಾಕ್‌ ಮಾಡಿರುವುದು ಪೊಲೀಸರ ತನಿಖೆ ವೇಳೆ ಬೆಳಕಿಗೆ ಬಂದಿದೆ.

ಈ ಸೀಟ್‌ ಬ್ಲಾಕಿಂಗ್‌ ದಂಧೆ ಪ್ರಕರಣದ ತನಿಖೆ ನಡೆಸುತ್ತಿರುವ ಮಲ್ಲೇಶ್ವರ ಠಾಣೆ ಪೊಲೀಸರು, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಹೊರಗುತ್ತಿಗೆ ನೌಕರ ಬಿ.ಎಸ್‌.ಅವಿನಾಶ್‌(36), ಕಡೂರು ಮೂಲದ ಶ್ರೀಹರ್ಷ(42), ಎಸ್‌.ಆರ್‌.ಪ್ರಕಾಶ್‌(42), ಪುರುಷೋತ್ತಮ(24), ಎಸ್‌.ಕೆ.ಶಶಿಕುಮಾರ್‌(34), ಎಸ್‌.ಎಲ್‌.ಪುನೀತ್‌(27), ಕನಕಪುರ ಸಾತನೂರಿನ ಎಸ್‌.ಸಿ.ರವಿಶಂಕರ್‌(56), ಬೆಂಗಳೂರಿನ ದಿಲ್‌ಶದ್‌ ಆಲಾಂ(33), ನೌಶದ್‌ ಆಲಾಂ(42) ಹಾಗೂ ಆರ್‌.ಜಿ.ತಿಲಕ್‌(60) ಸೇರಿ ಒಟ್ಟು 10 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳಿಂದ 13 ಮೊಬೈಲ್‌ಗಳು, ಕೆಲವು ದಾಖಲಾತಿಗಳು ಹಾಗೂ ಸುಟ್ಟು ಹಾಕಿರುವ ಮೂರು ಲ್ಯಾಪ್‌ಟಾಪ್‌ಗಳ ಅವಶೇಷಗಳನ್ನು ಜಪ್ತಿ ಮಾಡಿದ್ದಾರೆ.

ಮೊಬೈಲ್‌ ಸಂಖ್ಯೆಗಳ ಸುಳಿವು ಆಧರಿಸಿ ಬಂಧನ: ಪ್ರಕರಣದ ತನಿಖೆಗೆ ಇಳಿದ ಪೊಲೀಸರು, ಕೆಇಎ ವೆಬ್‌ಸೈಟ್‌ನಲ್ಲಿ ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳ ಸರ್ಕಾರಿ ಕೋಟಾದ ಸೀಟು ಬ್ಲಾಕ್‌ ಮಾಡಿದ್ದ ಮೊಬೈಲ್‌ ಸಂಖ್ಯೆಗಳ ಜಾಡು ಹಿಡಿದು ಮೊದಲಿಗೆ ಮೆಜೆಸ್ಟಿಕ್‌ ಬಸ್‌ ನಿಲ್ದಾಣದಲ್ಲಿ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ, ಸೀಟು ಬ್ಲಾಕಿಂಗ್‌ ದಂಧೆಯಲ್ಲಿ ಭಾಗಿಯಾಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ.

ಕೆಇಎ ನೌಕರನಿಂದ ಮಾಹಿತಿ ಸೋರಿಕೆ: ಪ್ರಕರಣದ ಕಿಂಗ್‌ಪಿನ್‌ ಆರೋಪಿ ಶ್ರೀಹರ್ಷ, ಸಂಜಯನಗರದ ಡಾಲರ್ಸ್ ಕಾಲೋನಿಯಲ್ಲಿ ಜಾಬ್ ಕನ್ಸಲ್ಟೆಂಟ್ ಕಚೇರಿ ಹೊಂದಿದ್ದಾನೆ. ತನಗೆ ಪರಿಚವಿರುವ ಕೆಇಎ ಗುತ್ತಿಗೆ ನೌಕರ ಅವಿನಾಶ್‌ಗೆ ಹಣದಾಮಿಷವೊಡ್ಡಿ ಮೂರನೇ ಸುತ್ತಿನ ಕೌನ್ಸೆಲಿಂಗ್‌ಗೆ ಹಾಜರಾಗದ ಅಭ್ಯರ್ಥಿಗಳ ಮಾಹಿತಿ ಮತ್ತು ವಿವರಗಳನ್ನು ಪಡೆದು ಬಳಿಕ ಆರೋಪಿ ಪ್ರಕಾಶ್‌ಗೆ ನೀಡಿದ್ದಾನೆ. ನಂತರ ಆರೋಪಿ ಪ್ರಕಾಶ್‌ ಉಳಿದ ಆರೋಪಿಗಳಿಗೆ ಅಭ್ಯರ್ಥಿಗಳ ಲಾಗಿನ್ ಐಡಿಗಳು ಮತ್ತು ಪಾಸ್‌ವರ್ಡ್‌ಗಳನ್ನು ನೀಡಿ ಸೀಟ್ ಬ್ಲಾಕ್ ಮಾಡಿಸಿರುವುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಮೂವರು ಏಜೆಂಟ್‌ಗಳು: ಬಂಧಿತ ಆರೋಪಿಗಳ ಪೈಕಿ ಬೆಂಗಳೂರಿನ ದಿಲ್‌ಶದ್‌ ಆಲಾಂ, ನೌಶದ್‌ ಆಲಾಂ ಹಾಗೂ ಆರ್‌.ಜಿ.ತಿಲಕ್‌ ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳ ಏಜೆಂಟರಾಗಿದ್ದಾರೆ. ಇವರು ಪ್ರಮುಖ ಆರೋಪಿ ಶ್ರೀಹರ್ಷನ ಸಹಾಯದಿಂದ ಸರ್ಕಾರಿ ಕೋಟಾದ ಸೀಟುಗಳನ್ನು ಬ್ಲಾಕ್‌ ಮಾಡಿಸಿ ಬಳಿಕ ಆ ಸೀಟುಗಳು ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳ ಆಡಳಿತ ಮಂಡಳಿ ಸೀಟುಗಳಾಗಿ ಪರಿವರ್ತನೆಯಾಗುವಂತೆ ನೋಡಿಕೊಳ್ಳುತ್ತಿದ್ದರು. ಇದಕ್ಕೆ ಕಾಲೇಜುಗಳಿಂದ ಕಮಿಷ್‌ ಸಹ ಪಡೆಯುತ್ತಿದ್ದರು.

ವಿದ್ಯಾರ್ಥಿಗಳ ಸೋಗಿನಲ್ಲಿ ಸೀಟು ಬ್ಲಾಕಿಂಗ್‌: ಪ್ರಮುಖ ಆರೋಪಿ ಶ್ರೀಹರ್ಷನ ಹಣದ ಆಮಿಷದಿಂದ ಆರೋಪಿಗಳಾದ ಎಸ್‌.ಆರ್‌.ಪ್ರಕಾಶ್‌, ಪುರುಷೋತ್ತಮ, ಎಸ್‌.ಕೆ.ಶಶಿಕುಮಾರ್‌, ಎಸ್‌.ಎಲ್‌.ಪುನೀತ್‌, ಎಸ್‌.ಸಿ.ರವಿಶಂಕರ್‌ ವಿದ್ಯಾರ್ಥಿಗಳ ಸೋಗಿನಲ್ಲಿ ಗೋವಾ, ಶಿವಮೊಗ್ಗ, ದಾವಣಗೆರೆ, ಕಡೂರು ಹಾಗೂ ಬೆಂಗಳೂರಿನಲ್ಲಿ ಕುಳಿತು ಲ್ಯಾಪ್‌ಟಾಪ್‌ ಬಳಸಿ ಕೆಇಎ ವೆಬ್‌ಸೈಟ್‌ನಲ್ಲಿ ಲಾಗಿನ್‌ ಆಗಿ ಇಂಜಿನಿಯರಿಂಗ್‌ ಕಾಲೇಜು ಮತ್ತು ಕೋರ್ಸ್‌ ಆಯ್ಕೆ ಮಾಡುತ್ತಿದ್ದರು. ಕಡೂರಿನಲ್ಲಿ ಲ್ಯಾಪ್‌ಟಾಪ್‌ಗಳಿಗೆ ಬೆಂಕಿ: ಈ ಸೀಟ್‌ ಬ್ಲಾಕಿಂಗ್‌ ದಂಧೆ ಸುದ್ದಿಯಾಗುತ್ತಿದ್ದಂತೆ ಆರೋಪಿಗಳಾದ ಎಸ್‌.ಆರ್‌.ಪ್ರಕಾಶ್‌, ಪುರುಷೋತ್ತಮ, ಎಸ್‌.ಕೆ.ಶಶಿಕುಮಾರ್‌, ಎಸ್‌.ಎಲ್‌.ಪುನೀತ್‌ ಮೂರು ಲ್ಯಾಪ್‌ಟಾಪ್‌ಗಳಿಗೆ ಬೆಂಕಿ ಹಚ್ಚಿ ಸುಟ್ಟಿ ನಾಶಪಡಿಸಿದ್ದಾರೆ. ತನಿಖೆ ವೇಳೆ ಪೊಲೀಸರು, ಈ ಮೂರು ಲ್ಯಾಪ್‌ಟಾಪ್‌ಗಳ ಅವಶೇಷಗಳನ್ನು ಜಪ್ತಿ ಮಾಡಿದ್ದಾರೆ. ಈ ಹಿಂದೆಯೂ ದಂಧೆಯಲ್ಲಿ ಭಾಗಿ: ಬಂಧಿತ ಆರೋಪಿಗಳು ಈ ಹಿಂದೆಯೂ ಇಂಜಿನಿಯರಿಂಗ್‌, ನರ್ಸಿಂಗ್‌, ಮೆಡಿಕಲ್‌ ಸೀಟು ಬ್ಲಾಕಿಂಗ್‌ ದಂಧೆಯಲ್ಲಿ ಭಾಗಿಯಾಗಿರುವುದು ತಿಳಿದು ಬಂದಿದೆ. ಈ ವ್ಯವಸ್ಥಿತ ವಂಚನೆ ಜಾಲದಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಸಾಧ್ಯತೆಯಿದೆ. ಹೆಚ್ಚಿನ ತನಿಖೆ ಬಳಿಕ ಮತ್ತಷ್ಟು ಮಾಹಿತಿ ಲಭ್ಯವಾಗಲಿದೆ. ಪ್ರಕರಣದ ಹಿನ್ನೆಲೆ: ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಆಳಿತಾಧಿಕಾರಿ ಇಸ್ಲಾವುದ್ದೀನ್‌ ಈ ಸೀಟ್‌ ಬ್ಲಾಕಿಂಗ್‌ ದಂಧೆ ಬಗ್ಗೆ ನ.13ರಂದು ಮಲ್ಲೇಶ್ವರ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಅಪರಿಚಿತ ವ್ಯಕ್ತಿಗಳು ಸಿಇಟಿ ಅರ್ಹ 52 ಅಭ್ಯರ್ಥಿಗಳ ಲಾಗಿನ್‌, ಪಾಸ್‌ವರ್ಡ್‌ ಹಾಗೂ ಸೀಕ್ರೇಟ್‌ ಕೀ ಅನಧಿಕೃತವಾಗಿ ಪಡೆದು ಅಭ್ಯರ್ಥಿಗಳ ಪರವಾಗಿ ಕೆಇಎ ವೆಬ್‌ಸೈಟ್‌ನಲ್ಲಿ ಲಾಗಿನ್‌ ಆಗಿ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳಿಗೆ ಸರ್ಕಾರದ ಕೋಟದಡಿ ಬರುವ ಸೀಟುಗಳನ್ನು ಬ್ಲಾಕ್ ಮಾಡಿದ್ದಾರೆ. ಈ ಮೂಲಕ ಖಾಸಗಿ ಕಾಲೇಜುಗಳಿಗೆ ಲಾಭ ಮಾಡಿಕೊಟ್ಟು ಅರ್ಹ ಅಭ್ಯರ್ಥಿಗಳು ಹಾಗೂ ಕೆಇಎಗೆ ವಂಚಿಸಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಶಾಸಕ ಬೈರತಿಗೆ ಕಂಟಕವಾದ ಕುಂಭಮೇಳ ಯಾತ್ರೆ!
5 ಜಿಲ್ಲೆಗಳಿಗೆ 2 ದಿನ ಶೀತ ಅಲೆ ರೆಡ್‌ ಅಲರ್ಟ್‌