ಮಂಡ್ಯ ಮಂಜುನಾಥ
ಕನ್ನಡಪ್ರಭ ವಾರ್ತೆ ಮಂಡ್ಯಸುಳ್ಳು ದಾಖಲೆಗಳನ್ನು ನೀಡಿ ಸಾಮಾಜಿಕ ಭದ್ರತಾ ಪಿಂಚಣಿಗಳನ್ನು ಪಡೆಯುತ್ತಿರುವ ೯೪೨೪೫ ಸಂಶಯಾತ್ಮಕ ಪ್ರಕರಣಗಳು ಪತ್ತೆಯಾಗಿರುವುದಾಗಿ ಕಂಡುಬಂದಿದೆ. ಪಿಂಚಣಿಗಳನ್ನು ಪಡೆಯುತ್ತಿರುವ ಪ್ರಕರಣಗಳ ಕುರಿತಂತೆ ಕುಟುಂಬ ಆ್ಯಪ್‌ನಿಂದ ಪಡೆಯಲಾದ ದತ್ತಾಂಶದೊಂದಿಗೆ ತಾಳೆ ಮಾಡಿದ ವೇಳೆ ಈ ಶಂಕಿತ ಪ್ರಕರಣಗಳನ್ನು ಗುರುತಿಸಲಾಗಿದೆ.
ಇದಕ್ಕೆ ಪುಷ್ಠಿ ನೀಡುವಂತೆ ಶ್ರೀರಂಗಪಟ್ಟಣ ತಾಲೂಕಿನಲ್ಲಿ ಸಂಧ್ಯಾ ಸುರಕ್ಷಾ ಯೋಜನೆಯಡಿ ಮಾನದಂಡಗಳನ್ನು ಅನುಸರಿಸದೆ ತಹಸೀಲ್ದಾರ್ ಗ್ರೇಡ್-೨ ಅವರು ಪಿಂಚಣಿ ಮಂಜೂರು ಮಾಡಿರುವ ಎರಡು ಪ್ರಕರಣಗಳು ಪತ್ತೆಯಾಗಿವೆ. ಇದರ ಸಂಬಂಧ ಎರಡೂ ಪ್ರಕರಣಗಳ ಫಲಾನುಭವಿಗಳಿಂದ ಸರ್ಕಾರಕ್ಕೆ ಉಂಟಾಗಿದ್ದ ಆರ್ಥಿಕ ನಷ್ಟ ೩೧,೨೦೦ ರು.ಗಳನ್ನು ವಸೂಲಿ ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ. ಆದರೆ, ಸುಳ್ಳು ದಾಖಲೆಗಳನ್ನು ಪಡೆದು ಪಿಂಚಣಿ ಮಂಜೂರು ಮಾಡಿದ ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮ ಜರುಗಿಸದಿರುವುದು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.ಈ ಸಂಶಯಾತ್ಮಕ ಪ್ರಕರಣಗಳನ್ನು ಗುರುತಿಸಿ ನೈಜತೆಯ ಬಗ್ಗೆ ಪರಿಶೀಲನೆ ನಡೆಸಿ ಜಿಲ್ಲಾಧಿಕಾರಿಗಳಿಂದ ವಿವರಗಳನ್ನು ಪಡೆಯಲು ಕ್ರಮ ವಹಿಸಲಾಗಿದೆ. ಜಿಲ್ಲಾಧಿಕಾರಿ ನೀಡುವ ವರದಿಯನ್ನಾಧರಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಕಂದಾಯ ಸಚಿವ ಕೃಷ್ಣ ಭೈರೇಗೌಡರು ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡರ ಪತ್ರಕ್ಕೆ ಉತ್ತರಿಸಿದ್ದಾರೆ.
ಎರಡು ಪ್ರಕರಣಗಳು ಪತ್ತೆ:ಶ್ರೀರಂಗಪಟ್ಟಣ ತಾಲೂಕು ಕಚೇರಿಯಲ್ಲಿ ಸಂಧ್ಯಾ ಸುರಕ್ಷಾ ಯೋಜನೆಯಡಿ ಫಲಾನುಭವಿಗಳ ಆಯ್ಕೆಯಲ್ಲಿ ಸರ್ಕಾರದ ಮಾರ್ಗಸೂಚಿ ಉಲ್ಲಂಘನೆ ಮಾಡಿ ಗ್ರಾಮ ಆಡಳಿತಾಧಿಕಾರಿ ಮತ್ತು ಕಂದಾಯಾಧಿಕಾರಿ ವರದಿ ಇಲ್ಲದಿದ್ದರೂ ಗ್ರೇಡ್-೨ ತಹಸೀಲ್ದಾರ್ ರೇಖಾ ಅವರು ಕಾನೂನುಬಾಹೀರವಾಗಿ ಹಣದಾಸೆಗೆ ಕೆಲವು ಫಲಾನುಭವಿಗಳಿಗೆ ಪಿಂಚಣಿ ಮಂಜೂರಾತಿ ಪತ್ರ ನೀಡಿರುವ ಬಗ್ಗೆ ಸಾಮಾಜಿಕ ಹೋರಾಟಗಾರ ಮೋಹನ್‌ಕುಮಾರ್ ಶ್ರೀರಂಗಪಟ್ಟಣ ತಹಸೀಲ್ದಾರ್‌ಗೆ ದೂರು ನೀಡಿದ್ದರು.
ಇದರ ಬಗ್ಗೆ ತನಿಖೆ ನಡೆಸಿದಾಗ ಎರಡು ಪ್ರಕರಣಗಳು ಅನರ್ಹವೆಂದು ಕಂಡುಬಂದ ಹಿನ್ನೆಲೆಯಲ್ಲಿ ಅಕ್ರಮವಾಗಿ ಅನರ್ಹರಿಗೆ ಸಂಧ್ಯಾ ಸುರಕ್ಷಾ ಯೋಜನೆಯಡಿ ಮಾಸಾಶನ ಮಂಜೂರು ಮಾಡಿ ಕರ್ತವ್ಯಲೋಪೆಸಗಿರುವ ಗ್ರೇಡ್-೨ ತಹಸೀಲ್ದಾರ್ ರೇಖಾ ವಿರುದ್ಧ ಸಿಸಿಎ ನಿಯಮಗಳನ್ವಯ ಶಿಸ್ತು ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿ ಡಾ.ಕುಮಾರ ಅವರು ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರಿಗೆ ಶಿಫಾರಸು ಮಾಡಿದ್ದರು.ಅಧಿಕಾರಿಗಳ ರಕ್ಷಣೆ:
ಈ ಮಧ್ಯೆ ಶ್ರೀರಂಗಪಟ್ಟಣ ತಹಸೀಲ್ದಾರ್ ಅವರು ಎರಡು ಅನರ್ಹ ಪ್ರಕರಣಗಳಲ್ಲಿ ಮಾತ್ರ ಪಿಂಚಣಿಯನ್ನು ಮಂಜೂರು ಮಾಡಿರುವುದನ್ನು ರಾಜಸ್ವ ನಿರೀಕ್ಷಕರು ಹಾಗೂ ಗ್ರಾಮ ಆಡಳಿತ ಅಧಿಕಾರಿಗಳ ವರದಿಯನ್ನಾಧರಿಸಿ ರದ್ದುಪಡಿಸಿದ್ದಾರೆ. ಜೊತೆಗೆ ಫಲಾನುಭವಿಗಳಿಂದ ಸರ್ಕಾರಕ್ಕೆ ಉಂಟಾಗಿದ್ದ ಆರ್ಥಿಕ ನಷ್ಟ ೩೧,೨೦೦ ರು.ಗಳನ್ನು ವಸೂಲಿ ಮಾಡಿ ಸರ್ಕಾರಕ್ಕೆ ಜಮೆ ಮಾಡಿಸಿ ಪ್ರಾದೇಶಿಕ ಆಯುಕ್ತರು ಮತ್ತು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಆದರೆ, ಕರ್ತವ್ಯಲೋಪವೆಸಗಿದ ಗ್ರೇಡ್-೨ ತಹಸೀಲ್ದಾರ್ ರೇಖಾ ವಿರುದ್ಧ ಸಿಸಿಎ ನಿಯಮಗಳನ್ವಯ ಶಿಸ್ತು ಕ್ರಮ ಕೈಗೊಳ್ಳದಿರುವುದು ಇಂತಹ ಪ್ರಕರಣಗಳು ಮರುಕಳಿಸುವುದಕ್ಕೆ ಎಡೆಮಾಡಿಕೊಟ್ಟಂತಾಗಿದೆ. ಅಧಿಕಾರಿಗಳ ಲೋಪವನ್ನು ಮುಚ್ಚಿಟ್ಟುಕೊಂಡು ಅವರನ್ನು ರಕ್ಷಣೆ ಮಾಡುತ್ತಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪಗಳು ವ್ಯಕ್ತವಾಗುತ್ತಿವೆ.೯೪೨೪೫ ಪ್ರಕರಣಗಳ ಬಗ್ಗೆ ಶಂಕೆ:
ಸುಳ್ಳು ದಾಖಲೆಗಳನ್ನು ನೀಡಿ ಸಾಮಾಜಿಕ ಭದ್ರತಾ ಪಿಂಚಣಿ ಪಡೆಯುತ್ತಿರುವ ೯೪೨೪೫ ಸಂಶಯಾತ್ಮಕ ಪ್ರಕರಣಗಳು ಕುಟುಂಬ ಆ್ಯಪ್‌ನಿಂದ ಪಡೆಯಲಾದ ದತ್ತಾಂಶಗಳ ತಾಳೆ ಮಾಡಿದಾಗ ಕಂಡುಬಂದಿರುವುದಾಗಿ ತಿಳಿದುಬಂದಿದೆ. ಸಾರ್ವಜನಿಕರೊಬ್ಬರು ನೀಡಿದ ದೂರಿನಿಂದ ಎರಡು ಪ್ರಕರಣಗಳು ಬಹಿರಂಗಗೊಂಡಿವೆ. ಬೆಳಕಿಗೆ ಬಾರದಿರುವ ಇನ್ನೂ ಎಷ್ಟೋ ಪ್ರಕರಣಗಳಿರುವುದು ಮೇಲ್ನೋಟಕ್ಕೆ ವ್ಯಕ್ತವಾಗುತ್ತಿದೆ. ಸಾಮಾಜಿಕ ಭದ್ರತಾ ಯೋಜನೆಯ ೨೭ ಪಿಂಚಣಿ ಯೋಜನೆಗಳ ಪೈಕಿ ಆರು ಯೋಜನೆಗಳನ್ನು ಹೊರತುಪಡಿಸಿ ಉಳಿದ ೨೧ ಯೋಜನೆಗಳಲ್ಲಿ ನೂರಾರು, ಸಾವಿರಾರು ಸಂಖ್ಯೆಯಲ್ಲಿ ಸಂಶಯಾತ್ಮಕ ಪ್ರಕರಣಗಳು ಗೋಚರಿಸುತ್ತಿವೆ. ಇವುಗಳನ್ನು ಸಮಗ್ರವಾಗಿ ತನಿಖೆ ನಡೆಸಿದಾಗ ಮಾತ್ರ ನೈಜ ಪಿಂಚಣಿದಾರರೆಷ್ಟು, ಅಕ್ರಮವಾಗಿ ಪಡೆಯುತ್ತಿರುವವರೆಷ್ಟು ಎಂಬುದು ಬೆಳಕಿಗೆ ಬರುತ್ತದೆ.ಸುಳ್ಳು ದಾಖಲೆಗಳನ್ನು ನೀಡಿ ಪಿಂಚಣಿ ಪಡೆಯುತ್ತಿರುವವರಿಂದ ಅರ್ಹ ಪಿಂಚಣಿದಾರರು ವಂಚಿತರಾಗುತ್ತಿದ್ದಾರೆ. ಅಧಿಕಾರಿಗಳು ಹಣ ಪಡೆದು ಅನರ್ಹರಿಗೆ ಪಿಂಚಣಿ ಪ್ರಮಾಣಪತ್ರ ನೀಡುತ್ತಿರುವುದರಿಂದ ಸರ್ಕಾರಕ್ಕೆ ಆರ್ಥಿಕ ನಷ್ಟವಾಗುತ್ತಿದೆ. ಅಧಿಕಾರಿಗಳನ್ನು ಶಿಕ್ಷೆಗೊಳಪಡಿಸುವ ಪ್ರಕ್ರಿಯೆ ನಡೆಯದಿರುವುದು ಪ್ರಕರಣಗಳ ಸಂಖ್ಯೆ ಹೆಚ್ಚಲು ಕಾರಣವಾಗಿದೆ. ಅನರ್ಹ ಪ್ರಕರಣಗಳನ್ನು ಸೃಷ್ಟಿಸುವ ಅಧಿಕಾರಿಗಳಿಗೂ ಶಿಕ್ಷೆಯಾಗಬೇಕು.- ಮೋಹನ್‌ಕುಮಾರ್, ಕಿರಂಗೂರು, ಶ್ರೀರಂಗಪಟ್ಟಣ ತಾ.