ಬಳ್ಳಾರಿ ರಸ್ತೆ ಫ್ಲೈಓವರಲ್ಲಿ ಸರಣಿ ಅಪಘಡ: ಬಿಬಿಎಂಪಿ ಲಾರಿ ಚಾಲಕ ಸಾವು, 3 ವಾಹನಗಳ ಜಖಂ

KannadaprabhaNewsNetwork |  
Published : May 25, 2025, 02:11 AM ISTUpdated : May 25, 2025, 05:27 AM IST
Dhar road accident

ಸಾರಾಂಶ

ಬಳ್ಳಾರಿ ರಸ್ತೆಯ ಕೊಡಿಗೇಹಳ್ಳಿ ಮೇಲ್ಸೇತುವೆಯಲ್ಲಿ ಸಂಭವಿಸಿದ ಸರಣಿ ಅಪಘಾತದಲ್ಲಿ ಬಿಬಿಎಂಪಿ ಕಸದ ಲಾರಿ ಚಾಲಕ ಮೃತಪಟ್ಟು, ಇಬ್ಬರು ಗಾಯಗೊಂಡಿರುವ ಘಟನೆ ಶನಿವಾರ ಮುಂಜಾನೆ ನಡೆದಿದೆ.

 ಬೆಂಗಳೂರು : ಬಳ್ಳಾರಿ ರಸ್ತೆಯ ಕೊಡಿಗೇಹಳ್ಳಿ ಮೇಲ್ಸೇತುವೆಯಲ್ಲಿ ಸಂಭವಿಸಿದ ಸರಣಿ ಅಪಘಾತದಲ್ಲಿ ಬಿಬಿಎಂಪಿ ಕಸದ ಲಾರಿ ಚಾಲಕ ಮೃತಪಟ್ಟು, ಇಬ್ಬರು ಗಾಯಗೊಂಡಿರುವ ಘಟನೆ ಶನಿವಾರ ಮುಂಜಾನೆ ನಡೆದಿದೆ.

ಬಿಹಾರ ಮೂಲದ ಫೈಜಾನ್‌ ಅಹಮ್ಮದ್‌ (25) ಮೃತ ಬಿಬಿಎಂಪಿ ಕಸದ ಲಾರಿ ಚಾಲಕ. ಕ್ಲೀನರ್‌ ಮರ್ಗೂಬ್‌ ರೇಜಾ(23) ಹಾಗೂ ಮತ್ತೊಂದು ಲಾರಿಯ ಚಾಲಕ ಹರೀಶ್‌ ಗಾಯಗೊಂಡಿದ್ದು, ಇಬ್ಬರು ಚಿಕಿತ್ಸೆ ಪಡೆದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸರಣಿ ಅಪಘಾತದಲ್ಲಿ ಎರಡು ಲಾರಿ ಮತ್ತು ಒಂದು ಕಾರು ಸೇರಿ ಮೂರು ವಾಹನಗಳು ಜಖಂಗೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶನಿವಾರ ಮಧ್ಯರಾತ್ರಿ ಸುಮಾರು 1.30ಕ್ಕೆ ಬಳ್ಳಾರಿ ರಸ್ತೆಯ ಕೊಡಿಗೇಹಳ್ಳಿ ಸಿಗ್ನಲ್‌ ನ ಬ್ರಿಗೇಡ್ ಮ್ಯಾಗ್ನಮ್‌ ಬಳಿಯ ಮೇಲ್ಸೇತುವೆಯಲ್ಲಿ ಹೋಗುವಾಗ ಕಸದ ಲಾರಿ ಕೆಟ್ಟು ನಿಂತಿದೆ. ಹೀಗಾಗಿ ಮೇಲ್ಸೇತುವೆ ಬಲ ಭಾಗದಲ್ಲಿ ಲಾರಿ ನಿಲ್ಲಿಸಿಕೊಂಡು ಫೈಜಾನ್‌ ಮತ್ತು ಕ್ಲೀನರ್‌ ರೇಜಾ ರಿಪೇರಿಯಲ್ಲಿ ತೊಡಗಿದ್ದರು.

ಹಿಂದಿನಿಂದ ಬಂದು ಡಿಕ್ಕಿ:

ಇದೇ ಸಮಯಕ್ಕೆ ಏರ್‌ಪೋರ್ಟ್‌ ಕಡೆಯಿಂದ ಕಲ್ಲು ತುಂಬಿಕೊಂಡು ನಗರಕ್ಕೆ ಬರುತ್ತಿದ್ದ ದೊಡ್ಡ ಲಾರಿ ಕೆಟ್ಟು ನಿಂತಿದ್ದ ಕಸದ ಲಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದು ಬಳಿಕ ಅದೇ ಮಾರ್ಗದಲ್ಲಿ ಬರುತ್ತಿದ್ದ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದು ಮೇಲ್ಸೇತುವೆ ತಡೆಗೋಡೆಗೆ ಗುದ್ದಿ ನಿಂತಿದೆ. ಕಲ್ಲಿನ ಲಾರಿ ಗುದ್ದಿದ ರಭಸಕ್ಕೆ ಬಿಬಿಎಂಪಿ ಕಸದ ಲಾರಿ ಪಲ್ಟಿಯಾದ ಪರಿಣಾಮ ಚಾಲಕ ಫೈಜಾನ್‌ ಮತ್ತು ಕ್ಲೀನರ್‌ ರೇಜಾ ಗಂಭೀರವಾಗಿ ಗಾಯಗೊಂಡಿದ್ದರು. ಕಲ್ಲಿನ ಲಾರಿ ಚಾಲಕ ಹರೀಶ್‌ ಸಹ ಗಾಯಗೊಂಡಿದ್ದರು. ಅದೃಷ್ಟವಶಾತ್‌ ಕಾರಿನಲ್ಲಿದ್ದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.

ಕಸದ ಲಾರಿ ಚಾಲಕ ಸಾವು:

ಕೂಡಲೇ ಇತರೆ ವಾಹನ ಸವಾರರು ಮೂವರು ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ಸಾಗಿಸಿದ್ದಾರೆ. ಪರೀಕ್ಷಿಸಿದ ವೈದ್ಯರು, ಕಸದ ಲಾರಿ ಚಾಲಕ ಫೈಜಾನ್‌ ಮಾರ್ಗ ಮಧ್ಯೆಯೇ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಕ್ಲೀನರ್‌ ರೇಜಾ ಮತ್ತು ಕಲ್ಲಿನ ಲಾರಿ ಚಾಲಕ ಹರೀಶ್‌ಗೆ ಚಿಕಿತ್ಸೆ ಮುಂದುವರೆದಿದೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಸಂಚಾರ ಪೊಲೀಸರು ಪರಿಶೀಲನೆ ನಡೆಸಿ, ಮೂರು ವಾಹನಗಳನ್ನು ಮೇಲ್ಸೇತುವೆಯಿಂದ ತೆರವುಗೊಳಿಸಿದ್ದಾರೆ.

ಸರಣಿ ಅಪಘಾತಕ್ಕೆ ಕಲ್ಲಿನ ಲಾರಿಗೆ ಚಾಲಕನ ಅತಿವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯೇ ಕಾರಣ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಈ ಸಂಬಂಧ ಕಲ್ಲಿನ ಲಾರಿ ಚಾಲಕ ಹರೀಶ್‌ ವಿರುದ್ಧ ಹೆಬ್ಬಾಳ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV
Read more Articles on

Recommended Stories

ಹೆಮ್ಮನಹಳ್ಳಿಯ ಗೃಹಿಣಿ ಆತ್ಮಹತ್ಯೆ ಪ್ರಕರಣ ಸುಖಾಂತ್ಯ; ತೋಟದಲ್ಲಿ ಅಂತ್ಯಕ್ರಿಯೆ
ಬೈಕ್‌ಗೆ ಹಾಲಿನ ಟ್ಯಾಂಕರ್ ಡಿಕ್ಕಿ: ಸವಾರ ಸ್ಥಳದಲ್ಲೇ ಸಾವು