ಬಿಬಿಎಂಪಿ ಮಹಿಳಾ ಸಿಬ್ಬಂದಿಗೆ ಲೈಂಗಿಕ ದೌರ್ಜನ್ಯ: ಸಹಾಯಕ ಆಯುಕ್ತ ವಿರುದ್ಧ ಆಯುಕ್ತರಿಗೆ ದೂರು

KannadaprabhaNewsNetwork | Updated : Mar 02 2025, 04:19 AM IST

ಸಾರಾಂಶ

ಮಹಿಳಾ ಸಿಬ್ಬಂದಿಗೆ ಲೈಂಗಿಕ ದೌರ್ಜನ್ಯ ನೀಡುತ್ತಿದ್ದಾರೆಂದು ಬಿಬಿಎಂಪಿಯ ಆಸ್ತಿ ವಿಭಾಗದ ಸಹಾಯಕ ಆಯುಕ್ತ ಬಿ.ಕೆ.ಶ್ರೀನಿವಾಸಮೂರ್ತಿ ವಿರುದ್ಧ ಮುಖ್ಯ ಆಯುಕ್ತರಿಗೆ ದೂರು ಸಲ್ಲಿಸಲಾಗಿದೆ.

 ಬೆಂಗಳೂರು : ಮಹಿಳಾ ಸಿಬ್ಬಂದಿಗೆ ಲೈಂಗಿಕ ದೌರ್ಜನ್ಯ ನೀಡುತ್ತಿದ್ದಾರೆಂದು ಬಿಬಿಎಂಪಿಯ ಆಸ್ತಿ ವಿಭಾಗದ ಸಹಾಯಕ ಆಯುಕ್ತ ಬಿ.ಕೆ.ಶ್ರೀನಿವಾಸಮೂರ್ತಿ ವಿರುದ್ಧ ಮುಖ್ಯ ಆಯುಕ್ತರಿಗೆ ದೂರು ಸಲ್ಲಿಸಲಾಗಿದೆ.

ರಜೆ ಹಾಕಿದ ಮಹಿಳಾ ಸಿಬ್ಬಂದಿಗೆ ಫೋನ್‌ ಮಾಡಿ ಎಚ್‌ಐವಿ ಬಂದಿದೆಯಾ ಅಥವಾ ನಿನ್ನನ್ನು ಯಾರಾದರೂ ರೇಪ್‌ ಮಾಡಿದ್ದಾರಾ, ದಂಧೆ ನಡೆಸುವುದಕ್ಕೆ ರಜೆ ಹಾಕಿದ್ದೀಯಾ, ಇಲ್ಲವೇ ಕುಷ್ಠ ರೋಗ ಬಂದಿಯಾ ಎಂದು ಶ್ರೀನಿವಾಸ್‌ ಮೂರ್ತಿ ನಿಂದಿಸುತ್ತಾರೆಂದು ಮಹಿಳಾ ಸಿಬ್ಬಂದಿ ದೂರಿದ್ದಾರೆ.

ಪ್ರತಿನಿತ್ಯ ಮಹಿಳಾ ಸಿಬ್ಬಂದಿಯನ್ನು ಹತ್ತಾರು ಬಾರಿ ಅನಗತ್ಯವಾಗಿ ತಮ್ಮ ಕೊಠಡಿಗೆ ಕರೆಸಿ ಲೈಂಗಿಕವಾಗಿ ನಿಂದಿಸುತ್ತಾರೆ. ಅಸಂಬದ್ಧ ವಿಷಯಗಳ ಮಾತನಾಡೋದು, ಕರ್ತವ್ಯಕ್ಕೆ ಅಡ್ಡಿ ಪಡಿಸೋದು, ಏರು ಧ್ವನಿಯಲ್ಲಿ ಬಾಯಿಗೆ ಬಂದಂತೆ ಮಾತನಾಡೋದು. ಸಾರ್ವಜನಿಕರ ಮುಂದೆ ಸಿಬ್ಬಂದಿಯನ್ನು ಹೀಯಾಳಿಸುತ್ತಾರೆ. ಪ್ರತಿರೋಧ ವ್ಯಕ್ತಪಡಿಸುವ ಸಿಬ್ಬಂದಿಗೆ ಹಿರಿಯ ಅಧಿಕಾರಿಗಳಿಗೆ ದೂರು ನೀಡುವುದಾಗಿ ಮತ್ತು ಸಿಬ್ಬಂದಿಯ ಸೇವಾ ಪುಸ್ತಕದಲ್ಲಿ ಕೆಂಪು ಶಾಹಿಯಲ್ಲಿ ರೀ ಮಾರ್ಕ್ ಬರೆಯುವುದಾಗಿ ಶ್ರೀನಿವಾಸ್‌ ಮೂರ್ತಿ ಬೆದರಿಸುತ್ತಾರೆ. ಈ ಹಿಂದೆ ಹಲವು ಬಾರಿ ಈ ಕುರಿತು ಮುಖ್ಯ ಆಯುಕ್ತರು ಹಾಗೂ ವಿಶೇಷ ಆಯುಕ್ತರಿಗೆ ದೂರು ನೀಡಿದ್ದರೂ ಯಾವುದೇ ಬದಲಾವಣೆ ಆಗಿಲ್ಲ ದೂರಿನಲ್ಲಿ ವಿವರಿಸಲಾಗಿದೆ.

ಮಾತೃ ಇಲಾಖೆಗೆ ಕಳುಹಿಸಲು ಚಿಂತನೆ:

ಎರವಲು ಸೇವೆಯಡಿ ಬಿಬಿಎಂಪಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶ್ರೀನಿವಾಸಮೂರ್ತಿ ಅವರ ಸೇವಾವಧಿ ಕಳೆದ 1 ವರ್ಷದ ಹಿಂದೆಯೇ ಪೂರ್ಣಗೊಂಡಿತ್ತು. ಆಗ ಮಾತೃ ಇಲಾಖೆಯಾದ ಪೌರಾಡಳಿತ ಇಲಾಖೆಗೆ ವಾಪಾಸ್‌ ಕಳುಹಿಸಲಾಗಿತ್ತು. ಆದರೆ, ಶ್ರೀನಿವಾಸ್‌ ಮೂರ್ತಿ ಲಾಭಿ ನಡೆಸಿ ಮತ್ತೆ ಬಿಬಿಎಂಪಿಯಲ್ಲಿ ಸೇವೆ ಮುಂದುವರೆಸಿದ್ದರು.

ಇದೀಗ ಮಹಿಳಾ ಸಿಬ್ಬಂದಿಗೆ ಲೈಂಗಿಕ ದೌರ್ಜನ್ಯ ನೀಡಿದ ಗಂಭೀರ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಬಿಬಿಎಂಪಿಯ ಸೇವೆಯಿಂದ ಬಿಡುಗಡೆ ಗೊಳಿಸಿ ಮಾತೃ ಇಲಾಖೆ ವಾಪಾಸ್‌ ಕಳುಹಿಸಲು ಪಾಲಿಕೆಯ ಅಧಿಕಾರಿಗಳು ನಿರ್ಧರಿಸಿದ್ದಾರೆ. ಪ್ರಕರಣದ ಕುರಿತದಂತೆ ವರದಿ ನೀಡಲು ಆಸ್ತಿ ವಿಭಾಗದ ಉಪ ಆಯುಕ್ತರಿಗೆ ಸೂಚಿಸಲಾಗಿದೆ. ವರದಿ ಬಂದ ನಂತರ ಮುಖ್ಯ ಆಯುಕ್ತರ ಗಮನಕ್ಕೆ ತಂದು ಶ್ರೀನಿವಾಸ್‌ ಮೂರ್ತಿ ಅವರನ್ನು ಪಾಲಿಕೆ ಸೇವೆಯಿಂದ ಬಿಡುಗಡೆ ಮಾಡುವುದಾಗಿ ಪಾಲಿಕೆ ಆಡಳಿತ ವಿಭಾಗದ ಅಧಿಕಾರಿಗಳು ಕನ್ನಡಪ್ರಭಕ್ಕೆ ಮಾಹಿತಿ ನೀಡಿದ್ದಾರೆ.

Share this article