ಬೈಕ್‌ ಬಿಟ್ಟು ಬಂದಿದ್ದಕ್ಕೆ ಹೊಡೆದ ಮಗನ ಇರಿದು ಕೊಂದ ತಂದೆ!

KannadaprabhaNewsNetwork |  
Published : Jun 11, 2024, 01:38 AM ISTUpdated : Jun 11, 2024, 05:33 AM IST
ಚಾಕು ಇರಿದು ತಂದೆಯಿಂದ ಮಗನ ಕೊಲೆ  | Kannada Prabha

ಸಾರಾಂಶ

ಬೈಕ್‌ ವಿಚಾರವಾಗಿ ತಂದೆ ಮತ್ತು ಮಗನ ನಡುವೆ ಜಗಳ ನಡೆದು ತಂದೆಯಿಂದಲೇ ಮಗ ಕೊಲೆಯಾಗಿರುವುದು.

 ಬೆಂಗಳೂರು : ದ್ವಿಚಕ್ರ ವಾಹನ ಎಲ್ಲೋ ಬಿಟ್ಟು ಮನೆಗೆ ಬಂದಿದ್ದ ವಿಚಾರಕ್ಕೆ ಅಪ್ಪ-ಮಗನ ನಡುವೆ ಜಗಳ ನಡೆದು, ತಂದೆ ಚಾಕುವಿನಿಂದ ಮಗನ ಎದೆಗೆ ಇರಿದು ಹತ್ಯೆ ಮಾಡಿರುವ ಘಟನೆ ‘ಡಿ’ ಗ್ರೂಪ್‌ ಲೇಔಟ್‌ನ ಮುದ್ದಿನಪಾಳ್ಯದಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ.

ಅಂಜನ್‌ ಕುಮಾರ್‌(27) ಕೊಲೆಯಾದ ಮಗ. ವೆಂಕಟೇಶ್‌ (57) ಆರೋಪಿ. ಆರೋಪಿಯನ್ನು ಅನ್ನಪೂರ್ಣೇಶ್ವರಿನಗರ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.

ಏನಿದು ಘಟನೆ?:

ವೆಂಕಟೇಶ್‌ ತನ್ನ ಕುಟುಂಬದ ಜೊತೆಗೆ ಮುದ್ದಿನಪಾಳ್ಯದಲ್ಲಿ ನೆಲೆಸಿದ್ದು, ರಿಯಲ್‌ ಎಸ್ಟೇಟ್‌ ಬ್ರೋಕರ್‌ ಕೆಲಸ ಮಾಡುತ್ತಿದ್ದರು. ಇವರ ಮಗಳು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಮಗ ಅಂಜನ್‌ ಕುಮಾರ್‌ ಪಿಯುಸಿ ವ್ಯಾಸಂಗವನ್ನು ಮೊಟಕುಗೊಳಿಸಿದ್ದು ಮನೆಯಲ್ಲಿಯೇ ಇರುತ್ತಿದ್ದನು. ಭಾನುವಾರ ಸಂಜೆ ವೆಂಕಟೇಶ್‌, ಮಗಳ ದ್ವಿಚಕ್ರ ವಾಹನವನ್ನು ತೆಗೆದುಕೊಂಡು ಹೊರಗೆ ಹೋಗಿದ್ದು, ರಾತ್ರಿ ಮನೆಗೆ ಬಂದಾಗ ದ್ವಿಚಕ್ರ ವಾಹನ ತಂದಿರಲಿಲ್ಲ.

ಹೆಲ್ಮೆಟ್‌ನಿಂದ ಹಲ್ಲೆ ಮಾಡಿದ್ದಕ್ಕೆ ಚಾಕು ಇರಿದ:

ಬೈಕ್‌ ವಿಚಾರವಾಗಿ ಸೋಮವಾರ ಬೆಳಗ್ಗೆ ಅಂಜನ್‌ ಕುಮಾರ್‌, ತಂದೆ ವೆಂಕಟೇಶ್‌ನನ್ನು ಪ್ರಶ್ನೆ ಮಾಡಿದ್ದಾನೆ. ಆಗ ವೆಂಕಟೇಶ್‌ ಎಲ್ಲೋ ನಿಲ್ಲಿಸಿದ್ದೇನೆ. ಈಗ ತರುತ್ತೇನೆ ಎಂದು ಹೇಳಿದ್ದಾರೆ. ಈ ವಿಚಾರಕ್ಕೆ ಅಪ್ಪ-ಮಗನ ನಡುವೆ ಮಾತಿಗೆ ಮಾತು ಬೆಳೆದು. ಕೋಪಗೊಂಡ ಅಂಜನ್‌ ಕುಮಾರ್‌ ಹೆಲ್ಮೆಟ್‌ನಿಂದ ತಂದೆ ಮೇಲೆ ಹಲ್ಲೆ ಮಾಡಿದ್ದಾನೆ. ಇದರಿಂದ ಕೋಪೋದ್ರಿಕ್ತರಾದ ವೆಂಕಟೇಶ್‌, ಅಡುಗೆ ಮನೆಗೆ ತೆರಳಿ ಚಾಕು ತಂದು ಮಗನ ಎಡಭಾಗದ ಎದೆಗೆ ಇರಿದಿದ್ದಾರೆ. ಈ ವೇಳೆ ಅಂಜನ್‌ ಕುಮಾರ್‌ ತೀವ್ರ ರಕ್ತಸ್ರಾವವಾಗಿ ಕುಸಿದು ಬಿದ್ದಿದ್ದಾನೆ. ಕೂಡಲೇ ಆತನನ್ನು ಸ್ಥಳೀಯರು ಸಮೀಪದ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗ ಮಧ್ಯೆಯೇ ಕೊನೆಯುಸಿರೆಳೆದಿದ್ದಾನೆ.

ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ, ಆರೋಪಿ ವೆಂಕಟೇಶ್‌ನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಅನ್ನಪೂರ್ಣೇಶ್ವರಿನಗರ ಪೊಲೀಸ್‌ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.

PREV

Recommended Stories

ಜಮೀನು ಅಕ್ರಮ ಪರಭಾರೆ: ಇಬ್ಬರ ಬಂಧನ
ರೈತನ ಬ್ಯಾಂಕ್ ಖಾತೆಯಲ್ಲಿದ್ದ ಕೋಟ್ಯಂತರ ರು.ಗೆ ಕದೀಮರಿಂದ ಕನ್ನ..!