ಡ್ರಗ್ಸ್‌ ಕಾರ್‍ಯಾಚರಣೆಯಲ್ಲಿ ರಾಜ್ಯ ಪೊಲೀಸರೂ ಭಾಗಿ : ಡಾ। ಪರಂ

KannadaprabhaNewsNetwork |  
Published : Dec 29, 2025, 02:00 AM ISTUpdated : Dec 29, 2025, 05:27 AM IST
dr g parameshwar

ಸಾರಾಂಶ

ಮಹಾರಾಷ್ಟ್ರ ಪೊಲೀಸರು ಬೆಂಗಳೂರಿನಲ್ಲಿ 56 ಕೋಟಿ ರು. ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದೇವೆ ಎಂದು ಹೇಳಿರುವುದು ಸತ್ಯಕ್ಕೆ ದೂರವಾದ ಮಾಹಿತಿ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

 ಬೆಂಗಳೂರು :  ಮಹಾರಾಷ್ಟ್ರ ಪೊಲೀಸರು ಬೆಂಗಳೂರಿನಲ್ಲಿ 56 ಕೋಟಿ ರು. ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದೇವೆ ಎಂದು ಹೇಳಿರುವುದು ಸತ್ಯಕ್ಕೆ ದೂರವಾದ ಮಾಹಿತಿ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಪತ್ತೆಯಾಗಿರುವ ಡ್ರಗ್ಸ್ ಕೆಮಿಕಲ್ ಮೌಲ್ಯ ಒಂದು ಕೆ.ಜಿ.ಗೆ 30 ಲಕ್ಷ ರು. ಬೆಲೆಬಾಳುತ್ತದೆ. ಒಟ್ಟು ನಾಲ್ಕು ಕೆಜಿಗೆ 1.20 ಕೋಟಿ ರು. ಮೌಲ್ಯವಾಗುತ್ತದೆ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ಭಾನುವಾರ ನಗರ ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ಹಿರಿಯ ಪೊಲೀಸ್‌ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಮಹಾರಾಷ್ಟ್ರ ಪೊಲೀಸರು ಮುಂಬೈನಲ್ಲಿ ಸಿಕ್ಕ ಆರೋಪಿಯ ಮಾಹಿತಿ ಆಧರಿಸಿ ಶನಿವಾರ ಬೆಂಗಳೂರಿನಲ್ಲಿ ಆರೋಪಿಯೊಬ್ಬನನ್ನು ಹಿಡಿದಿದ್ದಾರೆ. ಮುಂಬೈ ಪೊಲೀಸರು ಮತ್ತು ಬೆಂಗಳೂರು ನಗರ ಪೊಲೀಸರು ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯು ಡ್ರಗ್ಸ್ ತಯಾರಿಸಲು ಬೇಕಾದ ಮೆಫೆಡ್ರೋನ್ ಎಂಬ ಕೆಮಿಕಲ್ ಸಂಗ್ರಹಿಸಿಟ್ಟುಕೊಂಡಿದ್ದ ಎಂದು ಹೇಳಿದರು.

ಅದು ಜಂಟಿ ಕಾರ್ಯಾಚರಣೆ:

ಮುಂಬೈನಲ್ಲಿ ಸಿಕ್ಕಿದ್ದ ಆರೋಪಿಯು ನೀಡಿದ ಸುಳಿವಿನ ಮೇರೆಗೆ ಬೆಂಗಳೂರು ನಗರ ಪೊಲೀಸರು, ಮುಂಬೈ ಪೊಲೀಸರು, ಎನ್‌ಸಿಬಿ, ಸೋಕೋ ತಂಡದವರು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದಾರೆ. ಈ ಪ್ರಕರಣದಲ್ಲಿ ಬೆಂಗಳೂರು ನಗರ ಪೊಲೀಸರು ಏನೂ ಕ್ರಮ ಕೈಗೊಂಡಿಲ್ಲ‌ ಎಂಬ ಮಾತುಗಳು ಸರಿಯಲ್ಲ ಎಂದರು.

ಮೈಸೂರಿನಲ್ಲಿ ಡ್ರಗ್ಸ್ ಫ್ಯಾಕ್ಟರಿ ಪತ್ತೆಯಾದ ಘಟನೆಯ ಬಳಿಕ ಎಚ್ಚರಿಕೆಯಿಂದ‌ ಕೆಲಸ ಮಾಡಬೇಕು ಎಂದು ಪೊಲೀಸರಿಗೆ ಸೂಚನೆ ನೀಡಲಾಗಿದೆ. ಹೊಸ ವರ್ಷ ಸಮೀಪಿಸುತ್ತಿರುವುದರಿಂದ ಡ್ರಗ್ಸ್ ದಂಧೆಯ ವಿರುದ್ಧ ಅಕ್ಟೋಬರ್, ನವೆಂಬರ್ ತಿಂಗಳಿಂದ ಕರ್ನಾಟಕ ಪೊಲೀಸರು ರಾಜ್ಯದಾದ್ಯಂತ ಹೆಚ್ಚಿನ ಕಾರ್ಯಾಚರಣೆಗಳನ್ನು ಕೈಗೊಂಡಿದ್ದಾರೆ ಎಂದು ತಿಳಿಸಿದರು.

ನಗರದಲ್ಲಿ ಡ್ರಗ್ಸ್ ಫ್ಯಾಕ್ಟರಿ ಪತ್ತೆಯಾಗಿರುವ ಘಟನೆಯ ಬಗ್ಗೆ ಸಮರ್ಥಿಸಿಕೊಳ್ಳಲು ಹೋಗುವುದಿಲ್ಲ. ಅನೇಕ‌ ಸಂದರ್ಭಗಳಲ್ಲಿ ನಮ್ಮ ಪೊಲೀಸರು, ಇಲ್ಲಿ ಸಿಕ್ಕ ಆರೋಪಿಗಳು ನೀಡಿರುವ ಮಾಹಿತಿ ಆಧರಿಸಿ ಬೇರೆ ರಾಜ್ಯಗಳಲ್ಲಿ ಕಾರ್ಯಾಚರಣೆ ಕೈಗೊಂಡಿದ್ದಾರೆ. ಈಗಾಗಲೇ ಬೇರೆ ರಾಜ್ಯಗಳಲ್ಲಿ ನಮ್ಮ ನಾಲ್ಕು ಪೊಲೀಸರ ತಂಡಗಳು ಕಾರ್ಯಾಚರಣೆ ನಡೆಸುತ್ತಿವೆ. ಆಗ ಅಲ್ಲಿನ ಪೊಲೀಸರ ವೈಫಲ್ಯ ಎಂದು ಹೇಳಲು ಆಗುತ್ತಾ? ಮೂರು ಕಡೆಗಳಲ್ಲಿ ಫ್ಯಾಕ್ಟರಿ ಇತ್ತು ಎಂಬುದು ಸುಳ್ಳು. ಕಾರ್ಯಾಚರಣೆ ವೇಳೆ ನಮ್ಮ ಡಿಸಿಪಿಯವರು ಮುಂಬೈ ಪೊಲೀಸರೊಂದಿಗೆ ಇದ್ದರು. ಡ್ರಗ್ಸ್ ದಂಧೆಯ ವಿರುದ್ಧ ರಾಷ್ಟ್ರೀಯ ಮಟ್ಟದಲ್ಲಿ ಸಂಘಟಿತವಾಗಿ ಹೋರಾಟ ನಡೆಸಲಾಗುತ್ತಿದೆ ಎಂದು ಹೇಳಿದರು.

 ಅಧಿಕಾರಿಗಳ ವಿರುದ್ಧ ಪರಂ ಗರಂ

ವೈಟ್‌ಫೀಲ್ಡ್ ವಿಭಾಗದಲ್ಲಿ ನಡೆದ ಡ್ರಗ್ಸ್ ಪ್ರಕರಣದ ಕುರಿತಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಗರಂ ಆಗಿದ್ದಾರೆ ಎನ್ನಲಾಗಿದೆ.

ರಾಜ್ಯ ಪೊಲೀಸ್ ಮಹಾನಿರ್ದೇಶಕರು, ಬೆಂಗಳೂರು ನಗರ ಪೊಲೀಸ್ ಆಯುಕ್ತರ ಸಮ್ಮುಖದಲ್ಲಿ ಸಂಬಂಧಪಟ್ಟ ಇಬ್ಬರು ಡಿಸಿಪಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಇನ್‌ಸ್ಪೆಕ್ಟರ್, ಸಬ್‌ ಇನ್‌ಸ್ಪೆಕ್ಟರ್, ಬೀಟ್ ಕಾನ್‌ಸ್ಟೇಬಲ್ಸ್ ಏನು ಕೆಲಸ ಮಾಡುತ್ತಾರೆ? ಪ್ರಕರಣದ ಬಗ್ಗೆ ಬರಹ ರೂಪದಲ್ಲಿ ಉತ್ತರ ನೀಡುವಂತೆ ಡಿಸಿಪಿಗಳಿಗೆ ಖಾರವಾಗಿ ಎಚ್ಚರಿಸಿದ್ದಾರೆ‌ ಎಂದು ತಿಳಿದು ಬಂದಿದೆ.

ನೂರಾರು ಕೋಟಿ ರು. ಮೌಲ್ಯದ ಡ್ರಗ್ಸ್ ಹಿಡಿದಿದ್ದೇವೆ ಎಂದು ನಿಮ್ಮ ಬೆನ್ನು, ನೀವು ತಟ್ಟಿಕೊಂಡು ಹೋದರೆ ಮುಗಿಯುವುದಿಲ್ಲ. ಇನ್ನು ಮುಂದೆಯೂ ಗಂಭೀರವಾಗಿ ಪರಿಗಣಿಸದಿದ್ದರೆ ನಾನು ಸುಮ್ಮನಿರುವುದಿಲ್ಲ. ಯಾರು ಶಿಫಾರಸ್ಸು ಮಾಡಿದರೂ ನಾನು ಕೇಳುವುದಿಲ್ಲ. ಇದು ನೂರಕ್ಕೆ ನೂರರಷ್ಟು ನಿಜ. ನನಗೆ ಯಾವ ಮುಲಾಜೂ ಇಲ್ಲ ಎಂದು ಸಭೆಯಲ್ಲಿ ಎಚ್ಚರಿಕೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.
Read more Articles on

Recommended Stories

ಚಿನ್ನಾಭರಣಕ್ಕಾಗಿ ಗೃಹಿಣಿ ಕೊಲೆ; ಪೊಲೀಸರ ಶಂಕೆ
ಪತ್ನಿ ಆತ್ಮ*ತ್ಯೆ ನಿಂದನೆಗೆ ನೊಂದು ಪತಿಯೂ ನೇ*ಗೆ