ಡ್ರಗ್ಸ್‌ ಪೆಡ್ಲರ್‌ಗಳ ವಿರುದ್ಧ ಕಠಿಣ ಕ್ರಮ: ದಯಾನಂದ್‌

KannadaprabhaNewsNetwork |  
Published : Jan 28, 2024, 01:17 AM IST
CP 5 | Kannada Prabha

ಸಾರಾಂಶ

ಡ್ರಗ್ಸ್‌ ಪೆಡ್ಲರ್‌ಗಳ ವಿರುದ್ಧ ಕಠಿಣ ಕ್ರಮ: ದಯಾನಂದ್‌. ಜನ ಸಂಪರ್ಕ ಸಭೆಯಲ್ಲಿ ಡ್ರಗ್ಸ್‌ ಬಗ್ಗೆ ಜನರ ಆತಂಕ

ಕನ್ನಡಪ್ರಭ ವಾರ್ತೆ ಬೆಂಗಳೂರು

‘ಬೆಂಗಳೂರು ಡ್ರಗ್ಸ್ ಮುಕ್ತ ನಗರ’ವಾಗಿಸಲು ಕಂಕಣ ಬದ್ಧರಾಗಿದ್ದು, ಪೆಡ್ಲರ್‌ಗಳ ವಿರುದ್ಧ ಗೂಂಡಾ ಕಾಯ್ದೆ ಮಾದರಿಯಲ್ಲಿ ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಎಚ್ಚರಿಕೆ ನೀಡಿದರು.

ದೊಡ್ಡಕಲ್ಲಸಂದ್ರದ ಶಂಕರ್ ಫೌಂಡೇಷನ್‌ ಸಭಾಂಗಣದಲ್ಲಿ ದಕ್ಷಿಣ ವಿಭಾಗದ ಪೊಲೀಸರು ಶನಿವಾರ ಆಯೋಜಿಸಿದ್ದ ‘ಮಾಸಿಕ ಜನ ಸಂಪರ್ಕ’ ಸಭೆಯಲ್ಲಿ ಜನರ ಅಹವಾಲು ಆಲಿಸಿದ ಬಳಿಕ ಆಯುಕ್ತರು ಮಾತನಾಡಿದರು.

ಈ ವೇಳೆ ಹಲವು ಸಾರ್ವಜನಿಕರು, ದಿನೇ ದಿನೇ ಡ್ರಗ್ಸ್ ವ್ಯಸನಿಗಳಾಗಿ ಯುವ ಜನತೆ ಭವಿಷ್ಯದ ಬದುಕನ್ನು ನಾಶ ಮಾಡಿಕೊಳ್ಳುತ್ತಿದ್ದಾರೆ. ಡ್ರಗ್ಸ್ ಜಾಲವನ್ನು ಬುಡ ಸಮೇತ ಕಿತ್ತೊಗೆಯಲು ಸಾರ್ವಜನಿಕರ ಸಹಕಾರ ಸಹ ಅಗತ್ಯವಿದೆ. ನಗರದಲ್ಲಿ ಡ್ರಗ್ಸ್ ಮಾರಾಟ ಎಗ್ಗಿಲ್ಲದೆ ಸಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು, ಡ್ರಗ್ಸ್ ಮಾಫಿಯಾದ ವಿರುದ್ಧ ಸಮರವನ್ನೇ ಸಾರಿದ್ದೇವೆ. ಬೆಂಗಳೂರನ್ನು ಡ್ರಗ್ಸ್ ಮುಕ್ತವಾಗಿಸುವ ನಿಟ್ಟಿನಲ್ಲಿ ಕಂಕಣ ಬದ್ಧರಾಗಿ ಕಾರ್ಯನಿರ್ವಹಿಸುತ್ತಿದ್ದೇವೆ. ಈಗ ಗೂಂಡಾ ಕಾಯ್ದೆ ಮಾದರಿಯಲ್ಲಿ ಪೆಡ್ಲರ್‌ಗಳನ್ನು ಬಂಧಿಸಿ ಜೈಲಿಗಟ್ಟಲು ಕಾನೂನಿನಲ್ಲಿ ಅವಕಾಶವಿದೆ. ಇದರಡಿ ಪೆಡ್ಲರ್‌ಗಳನ್ನು ಮಟ್ಟಹಾಕಲಾಗುವುದು ಎಂದರು.

ಸಭೆಯಲ್ಲಿ ಸಂಚಾರ ಸಮಸ್ಯೆ ಬಗ್ಗೆ ಸಾರ್ವಜನಿಕರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸಂಚಾರ ನಿರ್ವಹಣೆಗೆ ನಗರದ ಪ್ರಮುಖ ರಸ್ತೆಗಳು ಹಾಗೂ ಜಂಕ್ಷನ್‌ಗಳಲ್ಲಿ ಸಿಸಿಟಿವಿ ಕ್ಯಾಮೆರಾ ಜೊತೆಯಲ್ಲಿ ಧ್ವನಿವರ್ಧಕಗಳನ್ನು ಅಳವಡಿಸಲಾಗುತ್ತಿದೆ. ಠಾಣೆಯಲ್ಲಿ ಕುಳಿತ ಸಿಬ್ಬಂದಿ, ಕ್ಯಾಮೆರಾ ದೃಶ್ಯಗಳನ್ನು ವೀಕ್ಷಿಸಿ ಧ್ವನಿವರ್ಧಕ ಮೂಲಕವೇ ಸೂಚನೆಗಳನ್ನು ನೀಡಲಿದ್ದಾರೆ ಎಂದು ಆಯುಕ್ತರು ಹೇಳಿದರು.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಆಕ್ಟಿವೇ ಮಾಡದ ಹೊಸ ಕ್ರೆಡಿಟ್ ಕಾರ್ಡ್‌ ಬಳಸಿ 1.08 ಲಕ್ಷ ರು. ದೋಚಿದ ಸೈಬರ್ ಖದೀಮರು
ನಿದ್ರೆಗೆ ಜಾರಿದ ಪ್ರಯಾಣಿಕನ ದೋಚಿ ಮಾರ್ಗ ಮಧ್ಯೆಯೇ ಇಳಿಸಿ ಕ್ಯಾಬ್‌ ಚಾಲಕ ಪರಾರಿ!