ಮಹಿಳೆ ಬೆದರಿಸಿ ₹8000 ಹಣ ಸುಲಿಗೆ ಪ್ರಕರಣ ಸಂಬಂಧ ನಾಲ್ವರು ಪೊಲೀಸರ ಅಮಾನತು

KannadaprabhaNewsNetwork | Published : Feb 28, 2024 2:40 AM

ಸಾರಾಂಶ

ಇತ್ತೀಚಿಗೆ ಪಾನಮತ್ತ ಚಾಲನೆ ಮಾಡಿರುವುದಾಗಿ ಬೆದರಿಸಿ ಮಹಿಳೆಯೊಬ್ಬರಿಂದ 8 ಸಾವಿರ ರು. ಹಣ ಸುಲಿಗೆ ಮಾಡಿದ ಆರೋಪದ ಮೇರೆಗೆ ಜೀವನ್ ಭೀಮಾ (ಜೆಬಿ) ನಗರ ಸಂಚಾರ ಠಾಣೆ ಇನ್ಸ್‌ಪೆಕ್ಟರ್ ಸೇರಿದಂತೆ ನಾಲ್ವರನ್ನು ನಗರ ಪೊಲೀಸ್ ಆಯುಕ್ತರು ಮಂಗಳವಾರ ಅಮಾನತುಗೊಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಇತ್ತೀಚಿಗೆ ಪಾನಮತ್ತ ಚಾಲನೆ ಮಾಡಿರುವುದಾಗಿ ಬೆದರಿಸಿ ಮಹಿಳೆಯೊಬ್ಬರಿಂದ 8 ಸಾವಿರ ರು. ಹಣ ಸುಲಿಗೆ ಮಾಡಿದ ಆರೋಪದ ಮೇರೆಗೆ ಜೀವನ್ ಭೀಮಾ (ಜೆಬಿ) ನಗರ ಸಂಚಾರ ಠಾಣೆ ಇನ್ಸ್‌ಪೆಕ್ಟರ್ ಸೇರಿದಂತೆ ನಾಲ್ವರನ್ನು ನಗರ ಪೊಲೀಸ್ ಆಯುಕ್ತರು ಮಂಗಳವಾರ ಅಮಾನತುಗೊಳಿಸಿದ್ದಾರೆ.

ಇನ್ಸ್‌ಪೆಕ್ಟರ್ ವೆಂಕಟಚಲಪತಿ, ಹೆಡ್ ಕಾನ್‌ಸ್ಟೇಬಲ್‌ಗಳಾದ ಗಿರೀಶ್‌, ಹುಚ್ಚು ಸಾಬ್‌ ಕಡಿಮಣಿ ಹಾಗೂ ಕಾನ್‌ಸ್ಟೇಬಲ್‌ ಬಸವಪ್ಪ ಅಮಾನತುಗೊಂಡಿದ್ದು, ಕಳೆದ ಶನಿವಾರ ಇಸ್ರೋ ಜಂಕ್ಷನ್‌ ಬಳಿ ಡ್ರಿಂಕ್ ಅಂಡ್ ಡ್ರೈ ತಪಾಸಣೆ ವೇಳೆ ಈ ಕೃತ್ಯ ನಡೆದಿತ್ತು. ಈ ಬಗ್ಗೆ ಆಯುಕ್ತ ದಯಾನಂದ್ ಅವರಿಗೆ ‘ಎಕ್ಸ್‌’ ತಾಣದಲ್ಲಿ ಸಂತ್ರಸ್ತೆ ತಂದೆ ದೂರು ನೀಡಿದ್ದರು. ಈ ಬಗ್ಗೆ ಇಲಾಖಾ ಮಟ್ಟದ ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ಪೂರ್ವ ವಿಭಾಗ (ಸಂಚಾರ)ದ ಡಿಸಿಪಿ ಕುಲದೀಪ್.ಆರ್.ಜೈನ್ ರವರಿಗೆ ಆಯುಕ್ತರು ಸೂಚಿಸಿದರು. ಡಿಸಿಪಿ ನೀಡಿದ ವರದಿ ಮೇರೆಗೆ ಕರ್ತವ್ಯಲೋಪವೆಸಗಿದ ಇನ್ಸ್‌ಪೆಕ್ಟರ್‌ ಹಾಗೂ ಮೂವರು ಸಿಬ್ಬಂದಿಯನ್ನು ದಯಾನಂದ್ ಅಮಾನತುಗೊಳಿಸಿ ಆದೇಶಿಸಿದ್ದಾರೆ.

ಪ್ರಕರಣದ ವಿವರ:

ಇಸ್ರೋ ಜಂಕ್ಷನ್‌ನಲ್ಲಿ ಶನಿವಾರ ರಾತ್ರಿ ಜೆ.ಬಿ.ನಗರ ಸಂಚಾರ ಠಾಣೆ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದರು. ಆ ವೇಳೆ ಮಣಿಪಾಲ್ ಆಸ್ಪತ್ರೆ ಕಡೆಯಿಂದ ಬಂದ ಮಹಿಳೆಯೊಬ್ಬರನ್ನು ಅಡ್ಡಗಟ್ಟಿ ಜೆ.ಬಿ.ನಗರ ಸಂಚಾರ ಠಾಣೆ ಪೊಲೀಸರು ತಪಾಸಣೆ ನಡೆಸಿದ್ದರು. ಆಗ ಅಲ್ಕೋಮೀಟರ್‌ ಮೂಲಕ ಡ್ರಿಂಕ್ ಅಂಡ್ ಡ್ರೈವ್ ತಪಾಸಣೆಗೊಳಪಡಿಸಿದಾಗ ಮಹಿಳೆ ಮದ್ಯ ಸೇವಿಸದೆ ಇದ್ದರೂ 15 ಸಾವಿರ ರು ನೀಡುವಂತೆ ಪೊಲೀಸರು ಬೇಡಿಕೆ ಇಟ್ಟಿದ್ದರು. ಕೊನೆಗೆ 8 ಸಾವಿರ ರು ಹಣವನ್ನು ಗೂಗಲ್ ಪೇ ಮೂಲಕ ಪಡೆದು ಆಕೆಯನ್ನು ಪೊಲೀಸರು ಕಳುಹಿಸಿದ್ದರು ಎಂದು ಆರೋಪಿಸಲಾಗಿತ್ತು.

Share this article