ನಟಿ ರನ್ಯಾ ರಾವ್ ದುಬೈನಿಂದ ಚಿನ್ನ ಕಳ್ಳ ಸಾಗಣೆ ಮಾಡುವ ವೇಳೆ ತನ್ನ ಸ್ನೇಹಿತ ಹಾಗೂ ಪಾಲುದಾರ ತರುಣ್ ರಾಜ್‌ನ ಅಮೆರಿಕ ಪಾಸ್‌ಪೋರ್ಟ್ ಬಳಸಿಕೊಂಡಿರುವುದು ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ಅಧಿಕಾರಿಗಳ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಬೆಂಗಳೂರು : ನಟಿ ರನ್ಯಾ ರಾವ್ ದುಬೈನಿಂದ ಚಿನ್ನ ಕಳ್ಳ ಸಾಗಣೆ ಮಾಡುವ ವೇಳೆ ತನ್ನ ಸ್ನೇಹಿತ ಹಾಗೂ ಪಾಲುದಾರ ತರುಣ್ ರಾಜ್‌ನ ಅಮೆರಿಕ ಪಾಸ್‌ಪೋರ್ಟ್ ಬಳಸಿಕೊಂಡಿರುವುದು ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ಅಧಿಕಾರಿಗಳ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಆರೋಪಿ ರನ್ಯಾ ಮತ್ತು ತರುಣ್ ರಾಜ್ ಕಾಲೇಜು ದಿನಗಳಿಂದ ಸ್ನೇಹಿತರಾಗಿದ್ದರು. ಇಬ್ಬರೂ ಶೇ.50ರ ಅನುಪಾತದ ಹೂಡಿಕೆಯಲ್ಲಿ 2023ರಲ್ಲಿ ದುಬೈನಲ್ಲಿ ‘ವೈರಾ ಡೈಮಂಡ್ಸ್ ಟ್ರೇಡಿಂಗ್’ ಕಂಪನಿ ತೆರೆದಿದ್ದಾರೆ. ಆರಂಭಿಕ ಬಂಡವಾಳವಾಗಿ ರನ್ಯಾಳ ಎಚ್‌ಡಿಎಫ್‌ಸಿ ಬ್ಯಾಂಕ್ ಖಾತೆಯಿಂದ ಕಂಪನಿ ಖಾತೆಗೆ ಸುಮಾರು 10 ಲಕ್ಷ ರು. ವರ್ಗಾಯಿಸಲಾಗಿದೆ. ಆದರೆ, ಇಲ್ಲಿ ಕಂಪನಿಗೆ ಶೇ.100ರಷ್ಟು ಬಂಡವಾಳವನ್ನು ರನ್ಯಾ ರಾವ್ ಹೂಡಿಕೆ ಮಾಡಿದ್ದು, ತರುಣ್ ರಾಜ್‌ನನ್ನು ಕೇವಲ ವರ್ಕಿಂಗ್ ಪಾರ್ಟ್ನರ್ ಮಾಡಿಕೊಂಡಿರುವುದು ಡಿಆರ್‌ಐ ಅಧಿಕಾರಿಗಳ ತನಿಖೆಯಲ್ಲಿ ಗೊತ್ತಾಗಿದೆ.
ತರುಣ್ ರಾಜ್ ಹೆಸರಿನಲ್ಲಿ ಚಿನ್ನ ಖರೀದಿ:
ರನ್ಯಾ ದುಬೈನಲ್ಲಿ ತರುಣ್ ಹೆಸರಿನಲ್ಲಿ ಸಗಟು ದರಕ್ಕೆ ಚಿನ್ನ ಖರೀದಿಸುತ್ತಿದ್ದಳು. ತರುಣ್ ಬಳಿ ಅಮೆರಿಕ ಪಾಸ್‌ಪೋರ್ಟ್ ಇದ್ದುದರಿಂದ ಜಿನೇವಾಕ್ಕೆ ಚಿನ್ನ ಕೊಂಡೊಯ್ಯಲು ಪ್ರತ್ಯೇಕ ವೀಸಾದ ಅಗತ್ಯವಿಲ್ಲ. ಹೀಗಾಗಿ ರನ್ಯಾ ತರುಣ್ ಹೆಸರಿನಲ್ಲೇ ಚಿನ್ನ ಖರೀದಿಸಿ ದಾಖಲೆ ಪಡೆಯುತ್ತಿದ್ದಳು. ಬಳಿಕ ತರುಣ್ ದುಬೈ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳ ಬಳಿ ಜಿನೇವಾಗೆ ಚಿನ್ನ ಕೊಂಡೊಯ್ಯುತ್ತಿರುವುದಾಗಿ ಅಧಿಕೃತವಾಗಿ ಘೋಷಿಸಿಕೊಳ್ಳುತ್ತಿದ್ದ. ವಿಮಾನ ನಿಲ್ದಾಣ ಪ್ರವೇಶಿಸಿದ ಬಳಿಕ ರನ್ಯಾ ಆ ಚಿನ್ನವನ್ನು ತಾನು ಪಡೆದುಕೊಂಡು ಭಾರತಕ್ಕೆ ಕಳ್ಳ ಸಾಗಣೆ ಮಾಡುತ್ತಿದ್ದಳು ಎಂಬುದು ಡಿಆರ್‌ಐ ಅಧಿಕಾರಿಗಳ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ತರುಣ್ ರಾಜ್‌ಗೂ ಈಕೆಯೇ ಟಿಕೆಟ್ ಖರೀದಿ:
ರನ್ಯಾ ತನ್ನ ಅಮೆರಿಕನ್ ಎಕ್ಸ್‌ಪ್ರೆಸ್ ಕಾರ್ಡ್ ಬಳಸಿ ಇಬ್ಬರಿಗೂ ವಿಮಾನ ಟಿಕೆಟ್ ಖರೀದಿಸಿದ್ದಾಳೆ. ರನ್ಯಾಳ ಈ ಚಿನ್ನ ಕಳ್ಳ ಸಾಗಣೆಯಲ್ಲಿ ತರುಣ್ ಪ್ರಮುಖ ಪಾತ್ರ ವಹಿಸಿರುವುದು ಕಂಡು ಬಂದಿದೆ. ಹೀಗಾಗಿ ತರುಣ್‌ನ ಟ್ರಾವೆಲ್ ಹಿಸ್ಟರಿ ಬಗ್ಗೆ ಡಿಆರ್‌ಐ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ. ಸದ್ಯ ನ್ಯಾಯಾಂಗ ಬಂಧನಲ್ಲಿರುವ ತರುಣ್‌ನನ್ನು ಹೆಚ್ಚಿನ ವಿಚಾರಣೆ ಸಂಬಂಧ ಶೀಘ್ರದಲ್ಲೇ ಮತ್ತೆ ವಶಕ್ಕೆ ಪಡೆಯುವ ಸಾಧ್ಯತೆ ಎಂದು ಮೂಲಗಳು ತಿಳಿಸಿವೆ.