ಸಾಫ್ಟ್‌ವೇರ್ ಉದ್ಯೋಗಿಗೆ ಅಶ್ಲೀಲ ವಿಡಿಯೋ ಹಾಗೂ ಫೋಟೋಗಳಿವೆ ಎಂದು ಬೆದರಿಸಿ ಎರಡೂವರೆ ಕೋಟಿ ರುಪಾಯಿ ಸುಲಿಗೆ

KannadaprabhaNewsNetwork |  
Published : Nov 23, 2024, 12:34 AM ISTUpdated : Nov 23, 2024, 04:24 AM IST
Money Horoscope

ಸಾರಾಂಶ

ಜಿಮ್‌ನಲ್ಲಿ ಸ್ನೇಹದ ಬಲೆಗೆ ಬೀಳಿಸಿಕೊಂಡು ಸಾಫ್ಟ್‌ವೇರ್ ಉದ್ಯೋಗಿಗೆ ಅಶ್ಲೀಲ ವಿಡಿಯೋ ಹಾಗೂ ಫೋಟೋಗಳಿವೆ ಎಂದು ಬೆದರಿಸಿ ಎರಡೂವರೆ ಕೋಟಿ ರುಪಾಯಿ ಸುಲಿಗೆ ಮಾಡಿದ್ದ ಅಣ್ಣ-ತಂಗಿ ಸೇರಿದಂತೆ ಮೂವರನ್ನು ಸಿಸಿಬಿ ಬಂಧಿಸಿದೆ.

 ಬೆಂಗಳೂರು : ಜಿಮ್‌ನಲ್ಲಿ ಸ್ನೇಹದ ಬಲೆಗೆ ಬೀಳಿಸಿಕೊಂಡು ಸಾಫ್ಟ್‌ವೇರ್ ಉದ್ಯೋಗಿಗೆ ಅಶ್ಲೀಲ ವಿಡಿಯೋ ಹಾಗೂ ಫೋಟೋಗಳಿವೆ ಎಂದು ಬೆದರಿಸಿ ಎರಡೂವರೆ ಕೋಟಿ ರುಪಾಯಿ ಸುಲಿಗೆ ಮಾಡಿದ್ದ ಅಣ್ಣ-ತಂಗಿ ಸೇರಿದಂತೆ ಮೂವರನ್ನು ಸಿಸಿಬಿ ಬಂಧಿಸಿದೆ.

ಉಡುಪಿ ಜಿಲ್ಲೆಯ ತಬಸಂ ಬೇಗಂ, ಆಕೆಯ ಸೋದರ ಅಜೀಂ ಉದ್ದೀನ್‌ ಹಾಗೂ ಅಭಿಷೇಕ್ ಅಲಿಯಾಸ್ ಅವಿನಾಶ್ ಬಂಧಿತನಾಗಿದ್ದು, ಆರೋಪಿಗಳಿಂದ ಮೊಬೈಲ್‌ಗಳು ಹಾಗೂ ಲ್ಯಾಪ್‌ಟಾಪ್‌ಗಳನ್ನು ಜಪ್ತಿ ಮಾಡಲಾಗಿದೆ.

ನಾಲ್ಕು ವರ್ಷಗಳ ಹಿಂದೆ ಆರ್‌.ಟಿ.ನಗರದಲ್ಲಿರುವ ತಬಸಂನ ಅಣ್ಣ ಅಜೀಂ ಒಡೆತನದ ಜಿಮ್‌ಗೆ ಟೆಕ್ಕಿ ತೆರಳುತ್ತಿದ್ದ. ಆ ವೇಳೆ ಫಿಟ್ನೆಸ್‌ ಮಾರ್ಗದರ್ಶಿಯಾಗಿದ್ದ ಆಕೆ, ಸಂತ್ರಸ್ತ ಟೆಕ್ಕಿ ಜತೆ ಸಲುಗೆ ಬೆಳೆಸಿಕೊಂಡು ಹನಿಟ್ರ್ಯಾಪ್ ಬಲೆಗೆ ಬೀಳಿಸಿಕೊಂಡಿದ್ದಳು. ಕೊನೆಗೆ ಬ್ಲ್ಯಾಕ್‌ಮೇಲ್‌ ಕಿರುಕುಳ ಸಹಿಸಲಾರದೆ ಪೊಲೀಸ್ ಆಯುಕ್ತರಿಗೆ ಸಂತ್ರಸ್ತ ನೀಡಿದ ದೂರು ಆಧರಿಸಿ ಸಿಸಿಬಿ ತನಿಖೆ ಕೈಗೆತ್ತಿಕೊಂಡಿತ್ತು. ದೂರು ದಾಖಲಾದ ಕೂಡಲೇ ನಗರ ತೊರೆದು ಉಡುಪಿ ಜಿಲ್ಲೆಯಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮಗು ಇದೆ ಎಂದು ಬೆದರಿಸಿ ಬ್ಲ್ಯಾಕ್‌ಮೇಲ್‌:

ದೂರುದಾರ ಸಾಫ್ಟ್‌ವೇರ್ ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿದ್ದು, ತಮ್ಮ ಕುಟುಂಬದ ಜತೆ ಆರ್‌.ಟಿ.ನಗರ ಸಮೀಪ ಆತ ನೆಲೆಸಿದ್ದಾನೆ. ಹಲವು ವರ್ಷಗಳಿಂದ ಆರ್.ಟಿ.ನಗರದಲ್ಲಿ ‘ಗ್ರೂಪ್ ಎಕ್ಸ್ ಫಿಟ್ನೆಸ್‌’ ಹೆಸರಿನ ಜಿಮ್‌ ಅನ್ನು ಅಜೀಂ ನಡೆಸುತ್ತಿದ್ದು, ಈ ಜಿಮ್‌ನಲ್ಲಿ ಆತನ ತಂಗಿ ತಬಸಂ ಫಿಟ್ನೆಸ್ ಕೋಚ್ ಆಗಿದ್ದಳು. ಆಗ ತನಗೆ ಮದುವೆಯಾಗಿ ಮಕ್ಕಳಿರುವ ಸಂಗತಿ ಮುಚ್ಚಿಟ್ಟು ತಮ್ಮ ಜಿಮ್‌ಗೆ ಬರುತ್ತಿದ್ದ ಟೆಕ್ಕಿ ಸ್ನೇಹ ಮಾಡಿ ಸಲುಗೆ ಬೆಳೆಸಿಕೊಂಡಿದ್ದಳು. ಅಲ್ಲದೆ ಪ್ರೀತಿ ನಾಟಕವಾಡಿ ದೂರುದಾರರ ಕುಟುಂಬದವರು ಇಲ್ಲದ ಹೊತ್ತಿನಲ್ಲಿ ಆತನ ಮನೆಗೆ ತೆರಳಿ ತಬಸಂ ಖಾಸಗಿ ಕ್ಷಣ ಕಳೆದಿದ್ದಳು. ಆ ವೇಳೆ ತನ್ನ ಮೊಬೈಲ್‌ನಲ್ಲಿ ರಹಸ್ಯವಾಗಿ ಏಕಾಂತದ ಸಮಯದ ದೃಶ್ಯಾವಳಿಗಳನ್ನು ಆಕೆ ಚಿತ್ರೀಕರಿಸಿಕೊಂಡಿದ್ದಳು.

ಈ ವಿಡಿಯೋ ಹಾಗೂ ಫೋಟೋ ಮುಂದಿಟ್ಟು ಆಕೆ ಸುಲಿಗೆ ಆರಂಭಿಸಿದ್ದಳು. ತನಗೆ ಹಣ ಕೊಡದೆ ಹೋದರೆ ಇವುಗಳನ್ನು ಮೀಡಿಯಾ ಮತ್ತು ಸೋಷಿಯಲ್ ಮೀಡಿಯಾದಲ್ಲಿ ಪ್ರಚಾರ ಮಾಡಿ ನಿನ್ನ ಮಾರ್ಯದೆ ತೆಗೆಯುವುದಾಗಿ ಬೆದರಿಕೆ ಹಾಕಿದ್ದಳು. ತನಗೆ ಮನೆಯಲ್ಲಿ ಮದುವೆಯಾಗುವಂತೆ ಒತ್ತಾಯಿಸುತ್ತಿದ್ದು, ಇದಕ್ಕಾಗಿ ಮಗುವೊಂದನ್ನು ದತ್ತು ತೆಗೆದುಕೊಂಡಿದ್ದೀನಿ ಎಂದು ಆಕೆ ಹೇಳಿದ್ದಳು. ಈ ಮಾತು ನಂಬಿದ ಸಂತ್ರಸ್ತ, ಆಕೆಯ ಮಗನ ಶಿಕ್ಷಣಕ್ಕೆ ನೆರವಾಗಿದ್ದ. ಅಲ್ಲದೆ ಪೊಲೀಸ್ ಮತ್ತು ಲಾಯರ್ ಎಂದು ಹೇಳಿಕೊಂಡು ತನ್ನ ಸಹಚರ ಅಭಿಷೇಕ್ ಮೂಲಕ ಸಂತ್ರಸ್ತನಿಗೆ ಕರೆ ಮಾಡಿ ಬೆದರಿಸಿದ್ದಳು.

ಇನ್ನು ಆಕೆಯ ಸೋದರ, ತನ್ನ ತಂಗಿಯನ್ನು ಮದುವೆಯಾಗು. ಇಲ್ಲದಿದ್ದರೆ ಆರು ಲಕ್ಷ ರುಪಾಯಿ ನೀಡುವಂತೆ ತಾಕೀತು ಮಾಡಿದ್ದ. ಹೀಗೆ ಬೆದರಿಸಿ ಹಂತ ಹಂತವಾಗಿ ಎರಡೂವರೆ ಕೋಟಿ ರು.ಗಳನ್ನು ಆರೋಪಿಗಳು ವಸೂಲಿ ಮಾಡಿದ್ದರು. ಇಷ್ಟಾದರೂ ಮತ್ತೆ ಹಣ ನೀಡುವಂತೆ ಈ ದುರುಳರ ಕಾಟ ಮುಂದುವರೆಸಿದ್ದರಿಂದ ಬೇಸತ್ತು ಪೊಲೀಸರಿಗೆ ಸಂತ್ರಸ್ತ ದೂರು ನೀಡಿದ್ದ.

ಈ ಬಗ್ಗೆ ಪ್ರಕರಣ ದಾಖಲಾದ ಬಳಿಕ ಆರೋಪಿಗಳು ನಗರ ತೊರೆದು ಉಡುಪಿ ಜಿಲ್ಲೆಗೆ ಪರಾರಿಯಾಗಿದ್ದರು. ಈ ಬಗ್ಗೆ ತನಿಖೆಗಿಳಿದ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಸಹವಾಸ, ಒತ್ತಾಯಕ್ಕೆ ಗಾಂಜಾ ಜಾಲಕ್ಕೆ ವಿದ್ಯಾರ್ಥಿಗಳು!
15 ವರ್ಷಗಳಿ ಸುವರ್ಣನ್ಯೂಸ್, ಕನ್ನಡಪ್ರಭದಲ್ಲಿ ಕೆಲಸ ಮಾಡುತ್ತಿದ್ದ ಮಹಿ‍ಳೆ ಅಪಘಾತದಲ್ಲಿ ದಾರುಣ ಸಾವು