ದಾಂಪತ್ಯ ಕಲಹದಿಂದ ಮನನೊಂದು ಸಾಫ್ಟ್‌ವೇರ್ ಎಂಜಿನಿಯರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬೆಂಗಳೂರು : ದಾಂಪತ್ಯ ಕಲಹದಿಂದ ಮನನೊಂದು ಸಾಫ್ಟ್‌ವೇರ್ ಎಂಜಿನಿಯರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಗಾಣಿಗರಹಳ್ಳಿ ಡಿ.ಎಸ್.ಸ್ಮಾರ್ಟ್ ನೆಸ್ಟ್ ಅಪಾರ್ಟ್‌ಮೆಂಟ್ ನಿವಾಸಿ ಪ್ರಶಾಂತ್ ನಾಯರ್(40) ಆತ್ಮಹತ್ಯೆಗೆ ಶರಣಾದವರು. ಏ.4ರಂದು ರಾತ್ರಿ ಸಂಜೆ ಈ ಘಟನೆ ನಡೆದಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮೃತ ಪೋಷಕರು ಕೌಟುಂಬಿಕ ಕಲಹದಿಂದ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ದೂರು ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಂಪತಿ ಒಂದು ವರ್ಷದಿಂದ ಪ್ರತ್ಯೇಕ ವಾಸ:
ಮೃತ ಪ್ರಶಾಂತ್ ನಾಯರ್ 12 ವರ್ಷಗಳ ಹಿಂದೆ ಪೂಜಾ ನಾಯರ್ ಜೊತೆ ಮದುವೆಯಾಗಿದ್ದು, ದಂಪತಿಗೆ 8 ವರ್ಷದ ಮಗಳಿದ್ದಾಳೆ. ವೃತ್ತಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದ ಪ್ರಶಾಂತ್, ನಗರದ ಖಾಸಗಿ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಈ ಹಿಂದೆ ಪ್ರಶಾಂತ್ ಪತ್ನಿ ಮತ್ತು ಮಗಳ ಜತೆಗೆ ಹೆಣ್ಣೂರಿನಲ್ಲಿ ನೆಲೆಸಿದ್ದರು. ಕಳೆದ ಒಂದು ವರ್ಷದಿಂದ ದಂಪತಿ ನಡುವೆ ಕ್ಷುಲ್ಲಕ ಕಾರಣಗಳಿಗೆ ಗಲಾಟೆಗಳು ನಡೆಯುತ್ತಿದ್ದವು. ಹೀಗಾಗಿ ಒಂದು ವರ್ಷದಿಂದ ದಂಪತಿ ಪ್ರತ್ಯೇಕವಾಗಿ ನೆಲೆಸಿದ್ದರು. ಪ್ರಶಾಂತ್ ಗಾಣಿಗರಹಳ್ಳಿಯ ಅಪಾರ್ಟ್‌ಮೆಂಟ್‌ನಲ್ಲಿ ಒಬ್ಬರೇ ನೆಲೆಸಿದ್ದರು.
ಪ್ರಶಾಂತ್ ಏ.4ರ ಸಂಜೆ ಫ್ಲ್ಯಾಟ್‌ನಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಂದೆ ಕರೆ ಮಾಡಿದಾಗ ಕರೆ ಸ್ವೀಕರಿಸಿಲ್ಲ. ಅನುಮಾನಗೊಂಡು ಅಪಾರ್ಟ್‌ಮೆಂಟ್ ಬಳಿ ಬಂದು ನೋಡಿದಾಗ ಪ್ರಶಾಂತ್ ಆತ್ಮಹತ್ಯೆ ಘಟನೆ ಬೆಳಕಿಗೆ ಬಂದಿದೆ. ಈ ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ.
ಘಟನಾ ಸ್ಥಳದಲ್ಲಿ ಯಾವುದೇ ಮರಣಪತ್ರವೂ ಸಿಕ್ಕಿಲ್ಲ. ಸಾಂಸಾರಿಕ ಕಲಹದಿಂದ ಮನನೊಂದು ಮಗ ಪ್ರಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಗನ ಸಾವಿನ ಬಗ್ಗೆ ನನಗೆ ಯಾರ ಮೇಲೂ ಅನುಮಾನವಿಲ್ಲ ಎಂದು ಪ್ರಶಾಂತ್ ತಂದೆ ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.