ಕನ್ನಡಪ್ರಭ ವಾರ್ತೆ ಬೆಂಗಳೂರು
ಚಪ್ಪಲಿ ಹಾಗೂ ಸಿದ್ದ ಉಡುಪು (ರೆಡಿಮೇಡ್ ಬಟ್ಟೆಗಳು) ಮಾರಾಟ ಮಳಿಗೆಯಲ್ಲಿ ಅಕ್ರಮವಾಗಿ ನಿಷೇಧಿತ ಇ ಸಿಗರೇಟ್ ಮಾರಾಟ ಮಾಡುತ್ತಿದ್ದ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.ಎಚ್‌ಬಿಆರ್ ಲೇಔಟ್‌ನ ನಿವಾಸಿ ಕೈಸರ್ ಪಾಷ, ಕೆ.ಜಿ.ಹಳ್ಳಿಯ ಮಹಮ್ಮದ್ ಅದ್ನಾನ್ ಹಾಗೂ ಡಿ.ಜೆ.ಹಳ್ಳಿಯ ರಬೀಲ್ ಷರೀಫ್ ಬಂಧಿತರಾಗಿದ್ದು, ಆರೋಪಿಗಳಿಂದ 30 ಲಕ್ಷ ರು ಮೌಲ್ಯದ 1,180 ಇ ಸಿಗರೇಟ್‌ಗಳನ್ನು ಜಪ್ತಿ ಮಾಡಲಾಗಿದೆ. ಹಲವು ದಿನಗಳಿಂದ ಗೋವಿಂದಪುರ ಸಮೀಪ ಚಪ್ಪಲಿ ಹಾಗೂ ರೆಡಿಮೇಡ್ ಬಟ್ಟೆಗಳ ಮಾರಾಟ ಮಳಿಗೆಯನ್ನು ಕೈಸರ್ ನಡೆಸುತ್ತಿದ್ದು, ಈ ಮಳಿಗೆಯಲ್ಲಿ ಅಕ್ರಮವಾಗಿ ಇ ಸಿಗರೇಟ್ ಮಾರಾಟದ ಬಗ್ಗೆ ಮಾಹಿತಿ ಪಡೆದು ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಇನ್‌ಸ್ಪೆಕ್ಟರ್ ಶಿವರಾಜ್ ತಂಡವು ತಕ್ಷಣವೇ ಮಾರುವೇಷದಲ್ಲಿ ಕಾರ್ಯಾಚರಣೆಗಿಳಿದೆ. ಆ ಮಳಿಗೆಗೆ ಗ್ರಾಹಕನ ಸೋಗಿನಲ್ಲಿ ತೆರಳಿ ಇ ಸಿಗರೇಟ್‌ನ್ನು ಪೊಲೀಸರು ಕೇಳಿದ್ದಾರೆ. ಆಗ ಹಣ ನೀಡಿದ ಕೂಡಲೇ ಸಿಗರೇಟ್ ನೀಡುತ್ತಿದ್ದಂತೆ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಬಳಿಕ ಕೈಸರ್ ಮಾಹಿತಿ ಮೇರೆಗೆ ಇನ್ನುಳಿದ ಇಬ್ಬರು ಸಿಸಿಬಿ ಬಲೆಗೆ ಬಿದ್ದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ವಿಮಾನ ನಿಲ್ದಾಣದ ಕಸ್ಟಮ್ಸ್‌ನಲ್ಲಿ ಖರೀದಿ?ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ವಿಭಾಗದಲ್ಲೇ ನಿಷೇಥಿತ ಇ ಸಿಗರೇಟ್ ಖರೀದಿಸಿದ್ದಾಗಿ ವಿಚಾರಣೆ ವೇಳೆ ಆರೋಪಿಗಳು ಬಾಯ್ಬಿಟ್ಟಿದ್ದಾರೆ. ಈ ಹೇಳಿಕೆ ಹಿನ್ನಲೆ ಕಸ್ಟಮ್ ಅಧಿಕಾರಿಗಳಿಗೆ ಪತ್ರ ಬರೆದು ಮಾಹಿತಿ ಕೋರಲಾಗಿದೆ. ಅಲ್ಲದೆ ಕಸ್ಟಮ್ಸ್ ವಿಭಾಗದ ಜತೆ ಕೈಸರ್ ನಂಟಿನ ಬಗ್ಗೆ ಸಹ ತನಿಖೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಹಲವು ದಿನಗಳಿಂದ ಗೋವಿಂದಪುರದಲ್ಲಿ ಕೈಸರ್ ಅಂಗಡಿ ನಡೆಸುತ್ತಿದ್ದ. ಹಣದಾಸೆಗೆ ಆತನ ಅಕ್ರಮ ವ್ಯವಹಾರಗಳಿಗೆ ಅದ್ನಾನ್ ಹಾಗೂ ಷರೀಫ್ ಸಾಥ್ ಕೊಟ್ಟಿದ್ದರು. ಸುಲಭವಾಗಿ ಹಣ ಸಂಪಾದನೆ ಸಲುವಾಗಿಯೇ ನಿಷೇಧಿತ ಇ ಸಿಗರೇಟ್ ದಂಧೆಯನ್ನು ಆರೋಪಿಗಳು ನಡೆಸುತ್ತಿದ್ದರು.