ಡ್ರಗ್ಸ್‌ ನಿಯಂತ್ರಣಕ್ಕೆ ಕಾನೂನು ತಿದ್ದುಪಡಿ ಮಾಡಲು ಗೃಹ ಇಲಾಖೆಗೆ ಸೂಚಿಸಿದ್ದೇನೆ : ಸಿಎಂ

KannadaprabhaNewsNetwork |  
Published : Oct 16, 2024, 01:34 AM ISTUpdated : Oct 16, 2024, 04:31 AM IST
Vidhansoudha 5A | Kannada Prabha

ಸಾರಾಂಶ

ರಾಜ್ಯದಲ್ಲಿ ಮಾದಕ ವಸ್ತುಗಳ ಮಾರಾಟ ಮತ್ತು ಬಳಕೆ ಮೇಲೆ ನಿಯಂತ್ರಣ ಹೇರಲು ಕಾನೂನಿನಲ್ಲಿ ಸೂಕ್ತ ತಿದ್ದುಪಡಿ ಮಾಡಲು ಗೃಹ ಇಲಾಖೆಗೆ ಸೂಚನೆ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

 ಬೆಂಗಳೂರು : ರಾಜ್ಯದಲ್ಲಿ ಮಾದಕ ವಸ್ತುಗಳ ಮಾರಾಟ ಮತ್ತು ಬಳಕೆ ಮೇಲೆ ನಿಯಂತ್ರಣ ಹೇರಲು ಕಾನೂನಿನಲ್ಲಿ ಸೂಕ್ತ ತಿದ್ದುಪಡಿ ತರಲು ಚಿಂತನೆ ನಡೆಸಲಾಗಿದ್ದು, ಅದಕ್ಕೆ ಸಂಬಂಧಿಸಿದಂತೆ ಗೃಹ ಇಲಾಖೆಗೆ ಸೂಚನೆ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ರಾಜ್ಯ ಎನ್‌ಎಸ್‌ಎಸ್‌ ಕೋಶ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ವಿಧಾನಸೌಧದ ಬ್ಯಾಂಕ್ವೆಂಟ್‌ ಹಾಲ್‌ನಲ್ಲಿ ಏರ್ಪಡಿಸಲಾಗಿದ್ದ ತಂಬಾಕು ಮುಕ್ತ ಯುವ ಅಭಿಯಾನ 2.0 ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ನಂತರ ಮಾತನಾಡಿದರು.

ರಾಜ್ಯದಲ್ಲಿ ಮಾದಕ ವಸ್ತು ಮಾರಾಟ ದಂಧೆ ನಿಗ್ರಹಿಸಲು ಸರ್ಕಾರ ಎಲ್ಲ ಕ್ರಮ ಕೈಗೊಳ್ಳಲಿದೆ. ಅದಕ್ಕಾಗಿ ಕಾನೂನಿನಲ್ಲೂ ಸೂಕ್ತ ತಿದ್ದುಪಡಿ ತರಲು ಚಿಂತನೆ ನಡೆಸಲಾಗಿದೆ. ಯುವ ಜನತೆ ದುಶ್ವಟಕ್ಕೆ ಬಲಿಯಾಗದಂತೆ, ಮಾದಕ ವಸ್ತು ಮಾರಾಟ ದಂಧೆಗೆ ಕಡಿವಾಣ ಹಾಕುವುದು ಸರ್ಕಾರದ ಗುರಿಯಾಗಿದೆ. ಬೆಂಗಳೂರು, ಮಂಗಳೂರು, ಮೈಸೂರು, ಹುಬ್ಬಳ್ಳಿ-ಧಾರವಾಡಗಳಲ್ಲಿ ಡಗ್ಸ್‌ ಹಾವಳಿ ಹೆಚ್ಚಿದೆ. ಅದನ್ನು ನಿಗ್ರಹಿಸಲು ಸರ್ಕಾರ ಅನೇಕ ಕಾನೂನನ್ನು ರಚಿಸಿದೆ. ಆದರೂ, ಅವುಗಳಲ್ಲಿ ಸೂಕ್ತ ಬದಲಾವಣೆ ತಂದು ಕಾನೂನನ್ನು ಮತ್ತಷ್ಟು ಕಠಿಣಗೊಳಿಸಲಾಗುವುದು ಎಂದರು,

ಯುವ ಜನತೆ ತಂಬಾಕು ಉತ್ಪನ್ನಗಳನ್ನು ಸೇವಿಸುತ್ತಿದ್ದಲ್ಲಿ ಕೂಡಲೆ ಅದನ್ನು ನಿಲ್ಲಿಸಬೇಕು. ನಾನೂ ಹಿಂದೆ ತಂಬಾಕು ಉತ್ಪನ್ನ ಸೇವಿಸುತ್ತಿದೆ. ಆದರೆ, ಶಾಸಕನಾದ ನಂತರ ಅದರಿಂದ ಹೊರಬಂದೆ. ಹಾಗೆಯೇ, ಯುವ ಜನತೆ ಕೂಡ ದುಶ್ಚಟದಿಂದ ದೂರ ಉಳಿಯಬೇಕು. ಆರೋಗ್ಯಕರ ಜೀವನ ನಡೆಸಿ ಯುವ ಸಮುದಾಯ ಸಂತಸದಿಂದಿರಬೇಕು ಎಂದು ಹೇಳಿದರು.

ವಿಶ್ವ ಆರೋಗ್ಯ ಸಂಸ್ಥೆ ವರದಿಯಂತೆ ಭಾರತದಲ್ಲಿ ಪ್ರತಿ ವರ್ಷ 13.5 ಲಕ್ಷ ಜನರು ತಂಬಾಕು ಸೇವನೆಯಿಂದ ಸಾವಿಗೀಡಾಗುತ್ತಿದ್ದಾರೆ. ಇದು ಆತಂಕಕಾರಿ ವಿಷಯವಾಗಿದ್ದು, ಎಲ್ಲರೂ ತಂಬಾಕು ಉತ್ಪನ್ನಗಳಿಂದ ದೂರ ಇರಬೇಕು. ತಂಬಾಕು ಸೇವಿಸುತ್ತಿರುವವರಲ್ಲಿ ಶೇ. 50ರಷ್ಟು ಮಂದಿ ಕ್ಯಾನ್ಸರ್‌ನಂತಹ ಕಾಯಿಲೆಗೆ ತುತ್ತಾಗಿ, ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಬೇಕಿದೆ ಎಂದು ತಿಳಿಸಿದರು.

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್‌, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಇತರರಿದ್ದರು.

ಯುವಜನರಿಂದ ಪ್ರತಿಜ್ಞೆ : ತಂಬಾಕು ಮುಕ್ತ ಯುವ ಅಭಿಯಾನ 2.0 ಕಾರ್ಯಕ್ರಮದಲ್ಲಿ ಅಂಗವಾಗಿ ಪಾಲ್ಗೊಂಡಿದ್ದ ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರು ತಂಬಾಕು ಸೇವನೆ ವಿರುದ್ಧ ಪ್ರತಿಜ್ಞೆ ಕೈಗೊಂಡರು. ಈ ವೇಳೆ ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲಾಯಿತು.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಅಕ್ರಮ ಕೃತ್ಯಗಳಿಗೆ ‘ದಂಡ’ ವಿಧಿಸಿ ಮುಚ್ಚು ಹಾಕುತ್ತಿದ್ದ ಅಪಾರ್ಟ್ಮೆಂಟ್ ವಿರುದ್ಧ ಕೇಸು
ವಿವಾಹ ಪವಿತ್ರವಾದ ಶಾಶ್ವತ ಸಮ್ಮಿಲನ: ಹೈಕೋರ್ಟ್‌