ಕನ್ನಡಪ್ರಭ ವಾರ್ತೆ ಮಂಡ್ಯ
ಆಸ್ತಿಯಲ್ಲಿ ಮಗಳಿಗೆ ಹೆಚ್ಚು ಪಾಲು ನೀಡಿದ ತಂದೆಯ ವಿರುದ್ಧ ಕುಪಿತಗೊಂಡ ಮಗ ಕಲ್ಲಿನಿಂದ ಜಜ್ಜಿ ಹತ್ಯೆಗೈದಿದ್ದಾನೆ. ಕೃತ್ಯವನ್ನು ತಡೆಯಲು ಬಂದ ತಾಯಿಯ ಮೇಲೂ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ತಾಲೂಕಿನ ಸುಂಡಹಳ್ಳಿ ಗ್ರಾಮದಲ್ಲಿ ನಡೆದಿದೆ.ಗ್ರಾಮದ ನಂಜಪ್ಪ (೬೫) ಕೊಲೆಯಾದ ವ್ಯಕ್ತಿಯಾಗಿದ್ದು, ಈತನ ಮಗ ಮಹದೇವ (೪೦) ಹತ್ಯೆಗೈದ ಬಳಿಕ ಪರಾರಿಯಾಗಿರುವ ಆರೋಪಿಯಾಗಿದ್ದಾನೆ.
ಮೂಲತಃ ರಾಮನಗರದ ಜಿಲ್ಲೆ, ಅರ್ಚಕರಹಳ್ಳಿ ಗ್ರಾಮದವರಾದ ನಂಜಪ್ಪ ತನ್ನ ಮಗಳನ್ನು ತಾಲೂಕಿನ ಸುಂಡಹಳ್ಳಿ ಗ್ರಾಮದ ಯುವಕನಿಗೆ ಕೊಟ್ಟು ವಿವಾಹ ಮಾಡಿಕೊಟ್ಟಿದ್ದರು. ನಂತರದ ದಿನಗಳಲ್ಲಿ ಮಗಳು-ಅಳಿಯ ಇದ್ದ ಸುಂಡಹಳ್ಳಿ ಗ್ರಾಮಕ್ಕೆ ಬಂದು ನೆಲೆಸಿದ್ದರು. ಗ್ರಾಮದಲ್ಲಿ ಸ್ವಂತ ಮನೆ ಮತ್ತು ಜಮೀನು ಮಾಡಿಕೊಂಡು ಬದುಕು ಸಾಗಿಸುತ್ತಿದ್ದರು.ಈ ಮಧ್ಯೆ ಅರ್ಚಕರಹಳ್ಳಿ ಗ್ರಾಮದಲ್ಲಿದ್ದ ಎರಡು ಎಕರೆ ಜಮೀನನ್ನು ಮಾರಾಟ ಮಾಡಿ ಅದರಿಂದ ಬಂದ ಹಣವನ್ನು ಮಗಳು ಮತ್ತು ಮಗನಿಗೆ ಹಂಚಿಕೆ ಮಾಡಿದ್ದರು. ಜೊತೆಗೆ ತಮ್ಮ ಮನೆಯ ಬಳಿ ಇದ್ದ ನಿವೇಶವನ್ನು ಮಗಳ ಹೆಸರಿಗೆ ಬರೆದುಕೊಟ್ಟಿದ್ದರು.
ಸುಂಡಹಳ್ಳಿ ಗ್ರಾಮದ ಬಳಿ ಇದ್ದ ಜಮೀನನ್ನು ಮಾರಾಟ ಮಾಡಲು ಮುಂದಾದಾಗ ಮಗಳು ತಕರಾರು ತೆಗೆದಿದ್ದಳು. ನಂತರ ಆಕೆಯನ್ನು ಸಮಾಧಾನಪಡಿಸಿ ಸ್ವಲ್ಪ ಹಣಕಾಸಿನ ಸಹಾಯ ಮಾಡಿದ್ದರು. ಇದರಿಂದ ಕುಪಿತಗೊಂಡಿದ್ದ ಮಗ ಮಹದೇವ ಈ ವಿಷಯವಾಗಿ ಆಗಾಗ್ಗೆ ತಂದೆಯೊಂದಿಗೆ ಜಗಳ ಮಾಡುತ್ತಿದ್ದನು.ಇದರ ನಡುವೆ ಇತ್ತೀಚೆಗೆ ಅರ್ಧ ಎಕರೆ ಜಮೀನು ಮಾರಾಟ ಮಾಡಿ ಅದರಲ್ಲೂ ಮಗಳಿಗೆ ಹಂಚಿಕೆ ಮಾಡಿದ್ದರು. ಇದರಿಂದ ಕ್ರೋಧಗೊಂಡಿದ್ದ ಮಹದೇವ ಸೋಮವಾರ ಬೆಳಗ್ಗೆ ತಂದೆ ನಂಜಪ್ಪನೊಂದಿಗೆ ಜಗಳ ತೆಗೆದು ಹಲ್ಲೆ ನಡೆಸಿದನು. ಆತನಿಂದ ತಪ್ಪಿಸಿಕೊಳ್ಳಲು ಮನೆಯಿಂದ ಹೊರ ಬಂದ ನಂಜಪ್ಪನನ್ನು ಗ್ರಾಮದಲ್ಲೆಲ್ಲಾ ಅಟ್ಟಾಡಿಸಿ ಹಲ್ಲೆ ಮಾಡಿದ್ದಾನೆ. ಕೃತ್ಯವನ್ನು ತಡೆಯಲು ಬಂದ ತಾಯಿ ಮಹದೇವಮ್ಮಳ ತಲೆಗೆ ಕಲ್ಲಿನಿಂದ ತೀವ್ರವಾಗಿ ಹಲ್ಲೆ ನಡೆಸಿದ್ದರಿಂದ ತಾಯಿಯೂ ಸಹ ಸ್ಥಳದಲ್ಲೇ ಕುಸಿದುಬಿದ್ದು ತೀವ್ರ ಗಾಯಗೊಂರು. ನಂತರ ತಂದೆಯ ಮೇಲರಗಿ ಕಲ್ಲಿನಿಂದ ಮುಖವನ್ನು ಜಜ್ಜಿ ಕೊಲೆಗೈದಿದ್ದಾನೆ.
ತೀವ್ರವಾಗಿ ಗಾಯಗೊಂಡಿದ್ದ ಇಬ್ಬರನ್ನೂ ಆಸ್ಪತ್ರೆಗೆ ಸಾಗಿಸಲು ಗ್ರಾಮಸ್ಥರು ಮುಂದಾದರಾದರೂ ಅಷ್ಟರಲ್ಲಿ ನಂಜಪ್ಪ ಕೊನೆಯುಸಿರೆಳೆದಿದ್ದರು. ಆದರೆ, ಮಹದೇವಮ್ಮಳನ್ನು ಮಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಆಕೆಯ ಸ್ಥಿತಿಯೂ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಘಟನೆ ನಂತರ ಆರೋಪಿ ಮಹದೇವ ಪರಾರಿಯಾಗಿದ್ದು, ಆತನ ಪತ್ತೆಗೆ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ. ಸ್ಥಳಕ್ಕೆ ಉನ್ನತ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಂಡ್ಯ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.