ಹಣ ವಂಚಿಸಿದವನ ಅಪಹರಿಸಿದ ನೊಂದವರು ಜೈಲಿಗೆ

KannadaprabhaNewsNetwork |  
Published : Jul 01, 2024, 01:50 AM ISTUpdated : Jul 01, 2024, 05:29 AM IST
money

ಸಾರಾಂಶ

ಇತ್ತೀಚೆಗೆ ನಗರದ ಎಂ.ಜಿ.ರಸ್ತೆಯ ಹೋಟೆಲ್‌ ಬಳಿ ನಡೆದಿದ್ದ ಯುವಕನ ಅಪಹರಣ ಪ್ರಕರಣ ಬೇಧಿಸಿರುವ ಹಲಸೂರು ಠಾಣೆ ಪೊಲೀಸರು, ಇಬ್ಬರು ಆರೋಪಿಗಳನ್ನು ಬಂಧಿಸಿ, ಯುವಕನನ್ನು ರಕ್ಷಿಸಿದ್ದಾರೆ.

 ಬೆಂಗಳೂರು : ಇತ್ತೀಚೆಗೆ ನಗರದ ಎಂ.ಜಿ.ರಸ್ತೆಯ ಹೋಟೆಲ್‌ ಬಳಿ ನಡೆದಿದ್ದ ಯುವಕನ ಅಪಹರಣ ಪ್ರಕರಣ ಬೇಧಿಸಿರುವ ಹಲಸೂರು ಠಾಣೆ ಪೊಲೀಸರು, ಇಬ್ಬರು ಆರೋಪಿಗಳನ್ನು ಬಂಧಿಸಿ, ಯುವಕನನ್ನು ರಕ್ಷಿಸಿದ್ದಾರೆ.

ತೆಲಂಗಾಣ ಮೂಲದ ದೇವರ ಕೊಂಡ ಶಿವಕೃಷ್ಣಾಚಾರಿ(34) ಮತ್ತು ಜಾಯ್‌ ಸ್ಟೀವನ್‌ ಜೋಸ್ನಾ(34) ಬಂಧಿತರು. ಆರೋಪಿಗಳು ಜೂ.16ರ ರಾತ್ರಿ ಎಂ.ಜಿ.ರಸ್ತೆಯ ಹೋಟೆಲ್‌ವೊಂದರ ಎದುರು ತೆಲಂಗಾಣ ಮೂಲದ ರಾಜು ಅಲಿಯಾಸ್‌ ಅಜ್ಮೀರ್‌ ರಾಜು(28) ಎಂಬಾತನನ್ನು ಕಾರಿನಲ್ಲಿ ಅಪಹರಿಸಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ತನಿಖೆ ನಡೆಸಿ ತೆಲಂಗಾಣದ ರೆಸಾರ್ಟ್‌ವೊಂದರಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿ, ಆರೋಪಿಗಳ ವಶದಲ್ಲಿದ್ದ ರಾಜುನನ್ನು ರಕ್ಷಿಸಿ ಕರೆತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಪ್ರಕರಣ?:

ತೆಲಂಗಾಣ ಮೂಲದ ರಾಜು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ವಿಲಾಸಿ ಜೀವನ ನಡೆಸುತ್ತಿದ್ದ. ತೆಲಂಗಾಣದ ಪ್ರಭಾವಿ ರಾಜಕೀಯ ವ್ಯಕ್ತಿಗಳು, ಸಿನಿಮಾ ತಾರೆಯ ಜತೆಗೆ ಫೋಟೋ ತೆಗೆಸಿಕೊಂಡು ಸಾರ್ವಜನಿಕವಾಗಿ ಶ್ರೀಮಂತನಂತೆ ಬಿಂಬಿಸಿಕೊಂಡಿದ್ದ. ಕಳೆದ ಆರು ತಿಂಗಳಿಂದ ನಗರದ ಎಂ.ಜಿ.ರಸ್ತೆಯ ಹೋಟೆಲ್‌ವೊಂದರಲ್ಲಿ ರೂಮ್‌ ಬಾಡಿಗೆಗೆ ಪಡೆದು ತಂಗಿದ್ದ. ಜೂ.16ರಂದು ಹೋಟೆಲ್‌ ನೌಕರರ ಜತೆಗೆ ಊಟಕ್ಕೆ ದ್ವಿಚಕ್ರ ವಾಹನದಲ್ಲಿ ಹೊರಗೆ ಹೋಗಿ ತಡರಾತ್ರಿ ವಾಪಾಸ್‌ ಬಂದಿದ್ದ. ಈ ವೇಳೆ ಕಾರಿನಲ್ಲಿ ಹೊಂಚು ಹಾಕಿ ಹೋಟೆಲ್‌ ಬಳಿ ಕಾದು ಕುಳಿತ್ತಿದ್ದ ಆರೋಪಿಗಳು, ಏಕಾಏಕಿ ರಾಜುನನ್ನು ಕಾರಿನೊಳಗೆ ಎಳೆದುಕೊಂಡು ಅಪಹರಣ ಮಾಡಿಕೊಂಡು ಪರಾರಿಯಾಗಿದ್ದರು.

ರೆಸಾರ್ಟ್‌ನಲ್ಲಿ ಇರಿಸಿ ಹಲ್ಲೆ:

ಬಳಿಕ ಆರೋಪಿಗಳು ರಾಜುನನ್ನು ತೆಲಂಗಾಣಕ್ಕೆ ಕರೆದೊಯ್ದು ರೆಸಾರ್ಟ್‌ವೊಂದರಲ್ಲಿ ಕೂಡಿ ಹಾಕಿದ್ದರು. ರಾಜುನನ್ನು ಅಪಹರಣ ಮಾಡಿದ ಬಗ್ಗೆ ಹೋಟೆಲ್‌ ನೌಕರರು ಹೊಯ್ಸಳ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಬಳಿಕ ಪೊಲೀಸರು ಘಟನೆ ಬಗ್ಗೆ ಮಾಹಿತಿ ಪಡೆದು ರಾಜುವಿನ ಮೊಬೈಲ್‌ ಲೊಕೇಶನ್‌ ಪರಿಶೀಲಿಸಿದಾಗ ತೆಲಂಗಾಣದಲ್ಲಿ ಇರುವುದನ್ನು ತೋರಿಸಿದೆ. ಈ ನಡುವೆ ಆರೋಪಿಗಳು ರೆಸಾರ್ಟ್‌ನಲ್ಲಿ ರಾಜುವಿನ ಮೇಲೆ ಹಲ್ಲೆ ಮಾಡಿ ವಿದೇಶಿ ಬ್ಯಾಂಕಿನಲ್ಲಿ ಇರುವ ಹಣವನ್ನು ತಮಗೆ ವರ್ಗಾವಣೆ ಮಾಡುವಂತೆ ಬೇಡಿಕೆ ಇರಿಸಿದ್ದಾರೆ.

ತೆಲಂಗಾಣದಲ್ಲಿ ಇಬ್ಬರ ಬಂಧನ:

ಆರೋಪಿಗಳು ತೆಲಂಗಾಣದಲ್ಲಿ ಇರುವ ಬಗ್ಗೆ ಸಿಕ್ಕ ಸುಳಿವಿನ ಮೇರೆಗೆ ಹಲಸೂರು ಠಾಣೆ ಪೊಲೀಸರ ತಂಡ ತೆಲಂಗಾಣದ ರೆಸಾರ್ಟ್‌ಗೆ ತೆರಳಿ ಅಪಹರಣಕಾರರಿಂದ ರಾಜುನನ್ನು ರಕ್ಷಿಸಿದ್ದಾರೆ. ರಾಜುನನ್ನು ವಶದಲ್ಲಿ ಇರಿಸಿಕೊಂಡು ಕಾವಲು ಕಾಯುತ್ತಿದ್ದ ಇಬ್ಬರನ್ನು ಬಂಧಿಸಿದ್ದಾರೆ. ಈ ಅಪಹರಣ ಪ್ರಕರಣದಲ್ಲಿ ಇನ್ನೂ ಎಂಟು ಮಂದಿ ಭಾಗಿಯಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಪಹರಣವಾಗಿದ್ದವನೇ ವಂಚಕ!

ಅಪಹರಣಕ್ಕೆ ಒಳಗಾಗಿದ್ದ ರಾಜು ತೆಲಂಗಾಣದಲ್ಲಿ ತನಗೆ ಪ್ರಭಾವಿ ರಾಜಕಾರಣಿಗಳು ಪರಿಚಯ ಎಂದು ಹೇಳಿಕೊಂಡು ಸರ್ಕಾರಿ ನೌಕರಿ ಕೊಡಿಸುವುದಾಗಿ ಹಲವರಿಂದ ಹಣ ಪಡೆದು ವಂಚಿಸಿದ್ದ. ಅಂತೆಯೇ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಅಧಿಕ ಲಾಭ ಬರಲಿದೆ ಎಂದು ನಂಬಿಸಿ ಹಲವರಿಂದ ಹಣ ಪಡೆದು ವಂಚಿಸಿದ್ದ. ಈ ಸಂಬಂಧ ಕೆಲವರು ತೆಲಂಗಾಣದಲ್ಲಿ ರಾಜು ವಿರುದ್ಧ ದೂರು ನೀಡಿದ್ದರು. ಈ ದೂರಿನ ಮೇರೆಗೆ ತೆಲಂಗಾಣ ಪೊಲೀಸರು ರಾಜುನನ್ನು ಬಂಧಿಸಿ ಜೈಲಿಗಟ್ಟಿದ್ದರು. ಜಾಮೀನು ಪಡೆದು ಬಿಡುಗಡೆಯಾಗಿದ್ದ ರಾಜು ತೆಲಂಗಾಣ ತೊರೆದು ಬೆಂಗಳೂರಿಗೆ ಬಂದು ಕಳೆದ ಆರು ತಿಂಗಳಿಂದ ಎಂ.ಜಿ.ರಸ್ತೆಯ ಹೋಟೆಲ್‌ನಲ್ಲಿ ರೂಮ್‌ ಬಾಡಿಗೆಗೆ ಪಡೆದು ಐಷಾರಾಮಿ ಜೀವನ ನಡೆಸುತ್ತಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.

ಮೋಸ ಹೋದವರಿಂದರಾಜುವಿನ ಅಪಹರಣ

ಜೈಲಿನಿಂದ ಬಿಡುಗಡೆಗೊಂಡ ಬಳಿಕ ರಾಜು ತೆಲಂಗಾಣ ತೊರೆದು ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿರುವ ಬಗ್ಗೆ ವಂಚನೆಗೆ ಒಳಗಾದವರು ಮಾಹಿತಿ ಸಂಗ್ರಹಿಸಿದ್ದರು. ಅದರಂತೆ ಜೂ.16ರಂದು ತೆಲಂಗಾಣದಿಂದ ಎರಡು ಕಾರುಗಳಲ್ಲಿ ಬೆಂಗಳೂರಿಗೆ ಬಂದು ರಾಜುನನ್ನು ಅಪಹರಣ ಮಾಡಿದ್ದರು. ತಮಗೆ ವಂಚಿಸಿರುವ ಹಣವನ್ನು ವಾಪಾಸ್‌ ನೀಡುವಂತೆ ರಾಜು ಮೇಲೆ ಹಲ್ಲೆ ಮಾಡಿದ್ದರು. ಹಣ ಕೊಡದಿದ್ದರೆ ಕೊಲೆ ಮಾಡಲು ಆರೋಪಿಗಳು ಸಂಚು ರೂಪಿಸಿದ್ದರು. ಅಷ್ಟರಲ್ಲಿ ಹಲಸೂರು ಠಾಣೆ ಪೊಲೀಸರು ಆರೋಪಿಗಳ ಜಾಡು ಹಿಡಿದು ತೆಲಂಗಾಣದ ರೆಸಾರ್ಟ್‌ಗೆ ತೆರಳಿ ರಾಜುನನ್ನು ರಕ್ಷಿಸಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಆನ್‌ಲೈನ್‌ನಲ್ಲಿ ಪರಿಚಯವಾದ ಯುವಕನಿಂದ ಗೃಹಿಣಿಗೆ ಕಿರುಕುಳ
20 ವಾಹನಕ್ಕೆ ಗುದ್ದಿಸಿದ ಟ್ರಕ್‌ನ್ನು 12 ಕಿ.ಮೀ. ಚೇಸ್‌ ಮಾಡಿದ ಪೊಲೀಸರು