ಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಹಾಸನ ಜಿಲ್ಲೆ ಆಲೂರು ತಾಲೂಕು ಮುದಿಗೆರೆ ಗ್ರಾಮದ ಎಂ.ವಿ.ರಂಗೇಗೌಡ ಅಲಿಯಾಸ್ ಸಂತೋಷ ಅಲಿಯಾಸ್, ಐಪಿಎಲ್ ಸಂತೋಷ್ (೩೭) ಎಂಬಾತನೇ ಬಂಧಿತ ಆರೋಪಿ ಎಂದರು.
ಈತ ಹಗಲು ಹೊತ್ತಿನಲ್ಲಿ ಬೀಗ ಹಾಕಿರುವ ಮನೆಗಳನ್ನೇ ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದನೆಂದು ತಿಳಿದುಬಂದಿದೆ. ಅದೇ ರೀತಿ ಮೇ ೧೮ರಂದು ಬೆಳಗ್ಗೆ ೧೦.೩೦ರಿಂದ ೧೨ ಗಂಟೆ ನಡುವೆ ನಾಗಮಂಗಲ ತಾಲೂಕು ಬಿದರಕೆರೆ ಗ್ರಾಮದ ರಂಗೇಗೌಡ ಅವರ ಮನೆಯ ಮುಂದೆ ಇಟ್ಟಿದ್ದ ಬೀಗದ ಕೀಲಿ ತೆಗೆದುಕೊಂಡು ಒಳನುಗ್ಗಿ ೨೦ ಗ್ರಾಂ ಚಿನ್ನಾಭರಣ ಹಾಗೂ ೯೭ ಸಾವಿರ ಹಣ ದೋಚಿದ್ದನು ಎಂದರು.ಈ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿಯನ್ನು ಹಾಸನದಲ್ಲಿ ಪತ್ತೆ ಹಚ್ಚಿ ಕರೆತಂದು ವಿಚಾರಣೆಗೆ ಒಳಪಡಿಸಿದಾಗ ಈತ ಬಿಂಡಿಗನವಿಲೆ, ಬೆಳ್ಳೂರು, ತುರುವೇಕೆರೆ ಹಾಗೂ ಹುಲಿಯೂರು ದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸುಮಾರು ೧೦ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ ಎಂದರು.
ಆರೋಪಿಯು ಐಪಿಎಲ್ ಪಂದ್ಯಾವಳಿಗಳು ನಡೆಯುವ ಸಂದರ್ಭದಲ್ಲಿ ಐಪಿಎಲ್ ಬೆಟ್ಟಿಂಗ್ ಆಡಿಸುತ್ತಿದ್ದನೆಂಬ ಕಾರಣಕ್ಕೆ ಈತನಿಗೆ ಐಪಿಎಲ್ ಸಂತೋಷ್ ಎಂದು ಹೆಸರಿಸಲಾಗಿದೆ. ಆದರೆ, ಮಂಡ್ಯದಲ್ಲಿ ಈತ ಬೆಟ್ಟಿಂಗ್ ನಡೆಸಿರುವ ಯಾವುದೇ ಪ್ರಕರಣಗಳು ದಾಖಲಾಗಿಲ್ಲ. ಆರೋಪಿ ಎಂ.ವಿ.ರಂಗೇಗೌಡ ಸಾಲಗಾರನಾಗಿದ್ದು, ಕಳವು ಮಾಡಿದ ಹಣದಿಂದ ಸಾಲವನ್ನು ತೀರಿಸುತ್ತಿದ್ದನು. ಮತ್ತೆ ಸಾಲ ಮಾಡಿ ಕಳ್ಳತನಕ್ಕೆ ಇಳಿಯುತ್ತಿದ್ದ ಎಂದು ಗೊತ್ತಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮಂಡ್ಯ ನಗರ ವ್ಯಾಪ್ತಿಯಲ್ಲಿ ನಗರಸಭೆ ಸಹಯೋಗದೊಂದಿಗೆ ೧೫ ಸಿಸಿ ಕ್ಯಾಮೆರಾಗಳನ್ನು ಶೀಘ್ರ ಅಳವಡಿಸುವ ಮೂಲಕ ಕಾನೂನು ಸುವ್ಯವಸ್ಥೆ ಕಾಪಾಡುವುದಾಗಿ ತಿಳಿಸಿದ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಅವರು, ಈಗಾಗಲೇ ಮಳವಳ್ಳಿ ತಾಲೂಕಿನಾದ್ಯಂತ ೧೦೦ಕ್ಕೂ ಹೆಚ್ಚು ಸಿಸಿ ಕ್ಯಾಮೆರಾಗಳನ್ನು ಅಳವಡಿಸಿರುವುದಾಗಿ ವಿವರಿಸಿದರು.