ಮಂಗಳೂರು : ರಾಜ್ಯದಲ್ಲಿ ತಾಲಿಬಾನ್ ಸರ್ಕಾರವಿದೆ. ಸಿದ್ದರಾಮಯ್ಯನವರು ಟಿಪ್ಪು ಸುಲ್ತಾನ್ ಮೈಗೆ ಬಂದಂತೆ ಆಡ್ತಾರೆ. ಈ ತಾಲಿಬಾನ್ ಸರ್ಕಾರವನ್ನು ಬಗ್ಗು ಬಡಿಯುತ್ತೇವೆ ಎಂದು ವಿಧಾನಸಭೆಯ ವಿಪಕ್ಷ ನಾಯಕ ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನರೇಂದ್ರ ಮೋದಿಯವರು ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಬೋಳಿಯಾರ್‌ನಲ್ಲಿ ಭಾನುವಾರ ನಡೆದ ವಿಜಯೋತ್ಸವ ಸಂದರ್ಭದಲ್ಲಿ ಬಿಜೆಪಿಯ ಮೂವರು ಕಾರ್ಯಕರ್ತರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು. ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅಶೋಕ್ ಅವರು ಬುಧವಾರ ಆಸ್ಪತ್ರೆಗೆ ಭೇಟಿ ನೀಡಿ, ಗಾಯಾಳುಗಳ ಆರೋಗ್ಯ ವಿಚಾರಿಸಿದರು. ನಂತರ ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ, ರಾಜ್ಯ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದರು.
ಬಿಜೆಪಿಯ ವಿಜಯೋತ್ಸವ ವೇಳೆ ಕಾರ್ಯಕರ್ತರು ‘ಭಾರತ್ ಮಾತಾಕೀ ಜೈ’ ಎಂದು ಘೋಷಣೆ ಕೂಗಿದ್ದಾರೆ. ಭಾರತ್ ಮಾತಾ ಕೀ ಜೈ ಎನ್ನುವುದು ತಪ್ಪಾ? ಹೀಗೆ ಘೋಷಣೆ ಕೂಗಿದವರ ಮೇಲೆಯೇ ಮರುದಿನ ದೂರು ನೀಡಲಾಗಿದೆ. ಬೆಂಗಳೂರಿನ ಯಲಹಂಕ, ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗುತ್ತಾರೆ. ಅಂತವರ ವಿರುದ್ಧ ಕೇಸು ದಾಖಲಾಗುವುದಿಲ್ಲ. ಗಾಯಾಳುಗಳಿದ್ದ ಆಸ್ಪತ್ರೆಗೆ ಕಾರ್ಯಕ್ರಮಕ್ಕೆ ಆಗಮಿಸಿದ ಆರೋಗ್ಯ ಸಚಿವರು ಹಾಗೂ ಸ್ಪೀಕರ್ ಗಾಯಾಳುಗಳನ್ನು ಕನಿಷ್ಠ ಮಾನವೀಯತೆಗೂ ಭೇಟಿಯಾಗಿಲ್ಲ. ದ.ಕ.ದಲ್ಲಿ ಐವರು ಶಾಸಕರ ಮೇಲೂ ಸರ್ಕಾರ ಕೇಸು ದಾಖಲಿಸಿದೆ. ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೋಮು ಸೌಹಾರ್ದತೆ ಹಾಳು ಮಾಡುತ್ತಿದೆ. ಇಡೀ ಕರ್ನಾಟಕವನ್ನು ಕಾಂಗ್ರೆಸ್‌ನವರು ತಾಲಿಬಾನ್ ಮಾಡಲು ಹೊರಟಿದ್ದಾರೆ. ಮುಂದಿನ ಅಧಿವೇಶನದಲ್ಲಿ ಈ ವಿಚಾರ ಪ್ರಸ್ತಾಪಿಸುತ್ತೇವೆ ಎಂದು ಅವರು ಹೇಳಿದರು.
ಈ ಎಲ್ಲಾ ಕೇಸುಗಳನ್ನು ಕೂಡಲೇ ವಾಪಸ್ ಪಡೆಯಬೇಕು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳ ಪೂರ್ತಿ ಆಸ್ಪತ್ರೆ ವೆಚ್ಚವನ್ನು ಜಿಲ್ಲಾಡಳಿತ ಭರಿಸಬೇಕು ಎಂದವರು ಆಗ್ರಹಿಸಿದರು.
ವಾಲ್ಮೀಕಿ ನಿಗಮ ಹಗರಣದಲ್ಲಿ ಶೇ.80ರಷ್ಟು ಕಮಿಷನ್:
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಸಚಿವ ನಾಗೇಂದ್ರ ರಾಜೀನಾಮೆ ನೀಡಿದ್ದಾರೆ. ಈ ಪ್ರಕರಣದಲ್ಲಿ ಸಚಿವರ ಆಪ್ತ ಸಹಾಯಕರನ್ನೇ ಬಂಧಿಸಲಾಗಿದೆ. ಅವರು ಶೇ.20ರಷ್ಟು ಕಮಿಷನ್ ಪಡೆದಿರಬಹುದು. ಉಳಿದ ಶೇ.80ರಷ್ಟು ಕಮಿಷನ್ ತಿಂದವರಿದ್ದಾರೆ. ನಿಗಮದ ಮೊತ್ತ ಹಂಚಿಕೆಯಾಗಿರುವುದು ಸಿಎಂ ಅವರ ಹಣಕಾಸು ಇಲಾಖೆಯ ಅಡಿಯಲ್ಲೇ ಬರುತ್ತದೆ. ಅದಕ್ಕಾಗಿ ಸಿಎಂ ಸಿದ್ದರಾಮಯ್ಯ ರಾಜಿನಾಮೆಗೆ ಆಗ್ರಹಿಸುತ್ತಿದ್ದೇವೆ ಎಂದರು.
ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಹಿಂದಿಗಿಂತ ಕಡಿಮೆ ಸೀಟು ಪಡೆದಿರುವ ಬಗ್ಗೆ ಆತ್ಮಾವಲೋಕನ ನಡೆಸಲಾಗುವುದು. ಬಿಜೆಪಿ ಜತೆಗಿನ ಜೆಡಿಎಸ್ ಮೈತ್ರಿ ಮುಂದಿನ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲೂ ಮುಂದುವರಿಯಲಿದೆ ಎಂದು ಅಶೋಕ್ ಸ್ಪಷ್ಟಪಡಿಸಿದರು.