ದುಬೈನಲ್ಲಿ ಚಿನ್ನ ಕೊಟ್ಟರು, ಬೆಂಗ್ಳೂರು ಆಟೋದಲ್ಲಿಡಲು ಹೇಳಿದ್ದರು - ಅಪರಿಚಿತರು ಹೇಳಿದಂತೆ ಕೇಳಿದ್ದೇನೆ : ರನ್ಯಾ

Published : Mar 14, 2025, 09:34 AM IST
Ranya Rao

ಸಾರಾಂಶ

  ದುಬೈ ವಿಮಾನ ನಿಲ್ದಾಣದಲ್ಲಿ ಅಪರಿಚಿತ ವ್ಯಕ್ತಿಗಳು 14.2 ಕೆ.ಜಿ. ಚಿನ್ನ ತಂದು ಕೊಟ್ಟು  ಸಾಗಿಸುವ ಟಾಸ್ಕ್‌ ಕೊಟ್ಟಿದ್ದರು. ಆಗ ವಿಮಾನ ನಿಲ್ದಾಣದ ಶೌಚಾಲಯದಲ್ಲಿ ಕೂತು ಯೂಟ್ಯೂಬ್‌ ನೋಡಿ ಚಿನ್ನವನ್ನು ದೇಹದಲ್ಲಿ ಅಡಗಿಸಿಕೊಂಡು ತಂದಿದ್ದೆ’ ಎಂದು ನಟಿ ರನ್ಯಾ ರಾವ್‌ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಬೆಂಗಳೂರು : ‘ನನಗೆ ದುಬೈ ವಿಮಾನ ನಿಲ್ದಾಣದಲ್ಲಿ ಅಪರಿಚಿತ ವ್ಯಕ್ತಿಗಳು 14.2 ಕೆ.ಜಿ. ಚಿನ್ನ ತಂದು ಕೊಟ್ಟು ಬೆಂಗಳೂರಿಗೆ ಸಾಗಿಸುವ ಟಾಸ್ಕ್‌ ಕೊಟ್ಟಿದ್ದರು. ಆಗ ವಿಮಾನ ನಿಲ್ದಾಣದ ಶೌಚಾಲಯದಲ್ಲಿ ಕೂತು ಯೂಟ್ಯೂಬ್‌ ನೋಡಿ ಚಿನ್ನವನ್ನು ದೇಹದಲ್ಲಿ ಅಡಗಿಸಿಕೊಂಡು ತಂದಿದ್ದೆ’ ಎಂದು ನಟಿ ರನ್ಯಾ ರಾವ್‌ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಚಿನ್ನ ಕಳ್ಳ ಸಾಗಣೆ ಪ್ರಕರಣ ಸಂಬಂಧ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ ಬಳಿಕ ಕಂದಾಯ ಗುಪ್ತಚರ ಜಾರಿ ನಿರ್ದೇಶನಾಲಯ (ಡಿಆರ್‌ಐ) ವಿಚಾರಣೆ ವೇಳೆ ‘ಚಿನ್ನದ ಕಳ್ಳ ಹಾದಿ’ ಕುರಿತು ರನ್ಯಾ ಸವಿಸ್ತಾರವಾಗಿ ವಿವರಿಸಿದ್ದಾರೆ.

ತಾನು ಮೊದಲ ಬಾರಿಗೆ ಚಿನ್ನ ಕಳ್ಳ ಸಾಗಣೆ ಮಾಡಿದ್ದೇನೆ. ನನಗೆ ಅಪರಿಚಿತರು ದುಬೈನಲ್ಲಿ ಚಿನ್ನ ಕೊಟ್ಟು ಅದನ್ನು ಬೆಂಗಳೂರಿನ ವಿಮಾನ ನಿಲ್ದಾಣ ರಸ್ತೆಯಲ್ಲಿ ನಿಲ್ಲುವ ಆಟೋದಲ್ಲಿಡುವಂತೆ ಸೂಚಿಸಿದ್ದರು. ನಾನು ಅವರ ಸೂಚನೆ ಪಾಲಿಸಿದ್ದೇನೆ ಅಷ್ಟೆ. ನನಗೆ ಬೇರೇನೂ ಸಂಗತಿ ಗೊತ್ತಿಲ್ಲ ಎಂದು ಅವರು ಹೇಳಿದ್ದಾರೆ. 

ರನ್ಯಾ ರಾವ್‌ ಪೂರ್ಣ ಪಾಠ ಹೀಗಿದೆ:

ನಾನು ಹಲವು ಬಾರಿ ಯೂರೋಪ್, ಅಮೆರಿಕ ಹಾಗೂ ಆಫ್ರಿಕಾ ದೇಶಗಳಿಗೆ ಭೇಟಿ ನೀಡಿದ್ದೇನೆ. ಅಲ್ಲದೆ, ಹವ್ಯಾಸಿ ವನ್ಯಜೀವಿ ಛಾಯಾಗ್ರಾಹಕಿ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದು, ಮಧ್ಯ ಪ್ರಾಚ್ಯ ದೇಶಗಳಿಗೆ ವನ್ಯಜೀವಿ ಛಾಯಾಗ್ರಹಣ ಹಾಗೂ ರಿಯಲ್ ಎಸ್ಟೇಟ್ ಉದ್ದಿಮೆ ವಿಸ್ತರಣೆಯ ಅವಕಾಶಗಳಿಗಾಗಿಯೂ ಪ್ರವಾಸ ಮಾಡಿದ್ದೇನೆ. ರಿಯಲ್ ಎಸ್ಟೇಟ್‌ ಸಂಬಂಧ ದುಬೈಗೆ ಹೋಗಿದ್ದ ನಾನು ಮಾ.3ರಂದು ಅಲ್ಲಿಂದ ಬೆಂಗಳೂರಿಗೆ ಮರಳುವ ಯಾವುದೇ ಯೋಜನೆ ಇರಲಿಲ್ಲ. ಆದರೆ ನನಗೆ ಅಪರಿಚಿತನಿಂದ ಬಂದ ಕರೆ ಯೋಜನೆ ಬದಲಾಯಿಸಿತು ಎಂದಿದ್ದಾರೆ. ನನಗೆ ಮಾ.1ರಂದು ಸಂಜೆಯಿಂದ ಅಪರಿಚಿತ ವ್ಯಕ್ತಿಯಿಂದ ಇಂಟರ್‌ನೆಟ್ ಕಾಲ್‌ ಬಂದಿದ್ದವು. ಇದೇ ರೀತಿ ಕರೆಗಳು ನನಗೆ ಕಳೆದ ಎರಡು ವಾರಗಳಿಂದ ಬರುತ್ತಿದ್ದವು. ಆ ಕರೆ ಸ್ವೀಕರಿಸಿದಾಗ ದುಬೈ ವಿಮಾನ ನಿಲ್ದಾಣದ ಟರ್ಮಿನಲ್‌-3ರ ಗೇಟ್‌ ‘ಎ’ನಲ್ಲಿ ಚಿನ್ನ ಕಲೆಕ್ಟ್‌ ಮಾಡಿ ಬೆಂಗಳೂರಿಗೆ ಒಯ್ಯುವಂತೆ ಅಪರಿಚಿತ ವ್ಯಕ್ತಿ ಸೂಚಿಸಿದ್ದ ಎಂದು ರನ್ಯಾ ಹೇಳಿದ್ದಾರೆ.

ಆದರೆ ನಾನು ಈ ಅಪರಿಚಿತ ಕರೆಗಳ ಕುರಿತು ಪೊಲೀಸರಿಗೆ ಮಾಹಿತಿ ನೀಡಲಿಲ್ಲ. ನಾನು ಇದೇ ಮೊದಲ ಬಾರಿಗೆ ಅಕ್ರಮವಾಗಿ ಚಿನ್ನ ಸಾಗಿಸುವ ಕೃತ್ಯ ಎಸಗಿದ್ದೇನೆ. ಈ ಹಿಂದಿನ ದುಬೈ ಭೇಟಿ ವೇಳೆ ಯಾವುದೇ ಚಿನ್ನ ಖರೀದಿಸಿಲ್ಲ. ನನ್ನ ಪತಿ ಜತಿನ್ ವಿಜಯ್ ಕುಮಾರ್ ಹೆಸರಿನ ಕ್ರೆಡಿಟ್‌ ಕಾರ್ಡ್ ಬಳಸಿ ಮಾ.1ರ ಸಂಜೆ 6 ಗಂಟೆಗೆ ದುಬೈನಿಂದ ಬೆಂಗಳೂರಿಗೆ ಎಮಿರೇಟ್ಸ್‌ ವಿಮಾನದ ಟಿಕೆಟ್ ಬುಕ್ ಮಾಡಿದ್ದೆ. ಆದರೆ ದುಬೈ ವಿಮಾನ ನಿಲ್ದಾಣದ ಭದ್ರತಾ ತಪಾಸಣೆ ಮುಗಿದ ಬಳಿಕ ಅಲ್ಲಿನ ಟರ್ಮಿನಲ್‌-3ರ ಡೈನಿಂಗ್‌ ಲಾಂಜ್‌ ಬಳಿ ನನಗೆ ಬೆಂಗಳೂರಿಗೆ ತೆಗೆದುಕೊಂಡು ಹೋಗಲು ಚಿನ್ನದ ಬಿಸ್ಕೆತ್‌ಗಳನ್ನು ಗೌನ್ ಧರಿಸಿದ್ದ ಅಫ್ರಿಕನ್‌-ಅಮೆರಿಕನ್‌ ಶೈಲಿಯಲ್ಲಿ ಮಾತನಾಡುತ್ತಿದ್ದ ಅಪರಿಚಿತ ವ್ಯಕ್ತಿ ತಂದು ಕೊಟ್ಟು ಹೋದ. ನನಗೆ ಕರೆ ಮಾಡಿದ ವ್ಯಕ್ತಿಯ ಗುರುತಾಗಲಿ, ಚಿನ್ನ ಕೊಟ್ಟು ಹೋದ ವ್ಯಕ್ತಿಯ ಗುರುತಾಗಲಿ ನನಗೆ ಇಲ್ಲ ಎಂದು ರನ್ಯಾ ವಿವರಿಸಿದ್ದಾರೆ. 

ಈ ಮುಂಚೆ ಆತನನ್ನು ಈ ವ್ಯಕ್ತಿಯನ್ನು ಯಾವತ್ತೂ ಭೇಟಿಯಾಗಿರಲಿಲ್ಲ. ಚಿನ್ನ ನೀಡಿದ ಬಳಿಕ ಡೈನಿಂಗ್ ಲಾಂಜ್‌ನಲ್ಲಿ ಮತ್ತಿಬ್ಬರು ಅಪರಿಚಿತರು ಬಂದು ತೆಳು ಟಾರ್ಪಾಲಿನ್‌ ಪ್ಲಾಸ್ಟಿಕ್ ತಂದು ಕೊಟ್ಟು ಹೋದರು. ಬಳಿಕ ಅಲ್ಲಿನ ಶೌಚಾಲಯಕ್ಕೆ ತೆರಳಿ ಯೂಟ್ಯೂಬ್‌ ನೋಡಿ ಚಿನ್ನ ಸಾಗಣೆ ಬಗ್ಗೆ ತಿಳಿದುಕೊಂಡೆ. ಹಾಗಾಗಿ ಅಲ್ಲಿನ ಟಿಶ್ಯೂ ಅನ್ನೇ ಬಳಸಿ ಕಾಲು ಹಾಗೂ ಸೊಂಟದ ಭಾಗಗಳಿಗೆ ಚಿನ್ನದ ಬಿಸ್ಕತ್ತು ಇಟ್ಟು ಟೇಪ್ ಸುತ್ತಿ ಬ್ಯಾಂಡೇಜ್ ಹಾಕಿದೆ. ಸ್ವಲ್ಪ ಚಿನ್ನವನ್ನು ಜೀನ್ಸ್‌ ಪ್ಯಾಂಟ್‌ನ ಪ್ಯಾಕೆಟ್‌ನಲ್ಲಿಡಗಿಸಿದೆ. ಈ ಚಿನ್ನವನ್ನು ಬೆಂಗಳೂರು ತಲುಪಿದ ನಂತರ ಎಲ್ಲಿಗೆ ತಲುಪಿಸಬೇಕು ಎಂಬುದನ್ನು ಅಪರಿಚಿತ ವ್ಯಕ್ತಿ ಹೇಳಿದ್ದ. ವಿಮಾನ ನಿಲ್ದಾಣದ ಟೋಲ್‌ಗೇಟ್ ಹಾದು ಸರ್ವಿಸ್ ರಸ್ತೆ ಮೂಲಕ ಸಾಗಬೇಕು. ನಂತರ ಅಲ್ಲಿ ಟ್ರಾಫಿಕ್ ಸಿಗ್ನಲ್ ದಾಟಿದ ಬಳಿಕ ರಸ್ತೆ ಬದಿ ನಿಲ್ಲುವ ಆಟೋದಲ್ಲಿಡಬೇಕಿತ್ತು. ಅಲ್ಲಿಗೆ ನನ್ನ ಟಾಸ್ಕ್ ಸಹ ಮುಗಿಯುತ್ತಿತ್ತು ಎಂದು ರನ್ಯಾ ಹೇಳಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಅಕ್ರಮ ಕೃತ್ಯಗಳಿಗೆ ‘ದಂಡ’ ವಿಧಿಸಿ ಮುಚ್ಚು ಹಾಕುತ್ತಿದ್ದ ಅಪಾರ್ಟ್ಮೆಂಟ್ ವಿರುದ್ಧ ಕೇಸು
ವಿವಾಹ ಪವಿತ್ರವಾದ ಶಾಶ್ವತ ಸಮ್ಮಿಲನ : ಹೈಕೋರ್ಟ್‌