ಮನೆಯಲ್ಲಿದ್ದ ಒಂಟಿ ಮಹಿಳೆ ಕೊಂದು ಲಕ್ಷಾಂತರ ರು. ಚಿನ್ನಾಭರಣ ಕದ್ದ ಕಿರಾತಕರು

Published : May 27, 2025, 07:01 AM IST
crime news

ಸಾರಾಂಶ

ಮನೆಯಲ್ಲಿ ಏಕಾಂಗಿಯಾಗಿದ್ದಾಗ ಬಟ್ಟೆ ವ್ಯಾಪಾರಿಯೊಬ್ಬರ ಪತ್ನಿಯನ್ನು ಕೊಂದು ಕಿಡಿಗೇಡಿಗಳು ಹಣ ಹಾಗೂ ಚಿನ್ನ ದೋಚಿರುವ ಘಟನೆ ಕಾಟನ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ನಡೆದಿದೆ.

ಬೆಂಗಳೂರು :  ಮನೆಯಲ್ಲಿ ಏಕಾಂಗಿಯಾಗಿದ್ದಾಗ ಬಟ್ಟೆ ವ್ಯಾಪಾರಿಯೊಬ್ಬರ ಪತ್ನಿಯನ್ನು ಕೊಂದು ಕಿಡಿಗೇಡಿಗಳು ಹಣ ಹಾಗೂ ಚಿನ್ನ ದೋಚಿರುವ ಘಟನೆ ಕಾಟನ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ನಡೆದಿದೆ.

ಕಾಟನ್‌ಪೇಟೆ ನಿವಾಸಿ ಲತಾ (50) ಕೊಲೆಯಾದ ದುರ್ದೈವಿ. ಮನೆಯಲ್ಲಿ ಮೃತರ ಪತಿ ಪ್ರಕಾಶ್ ಹಾಗೂ ಮಕ್ಕಳು ಹೊರ ಹೋಗಿದ್ದಾಗ ಈ ಕೃತ್ಯ ನಡೆದಿದ್ದು, ಕೆಲ ಹೊತ್ತಿನ ಬಳಿಕ ಮೃತರ ಪತಿ ಮನೆಗೆ ಮರಳಿದಾಗ ಕೃತ್ಯ ಬೆಳಕಿಗೆ ಬಂದಿದೆ.

ಹಲವು ವರ್ಷಗಳಿಂದ ಕಾಟನ್‌ಪೇಟೆಯಲ್ಲಿ ಪುಟ್ಟ ಬಟ್ಟೆ ಮಾರಾಟ ಅಂಗಡಿ ಇಟ್ಟಿರುವ ಬೀದರ್ ಜಿಲ್ಲೆಯ ಪ್ರಕಾಶ್ ಅವರು, ಅದೇ ಪ್ರದೇಶದಲ್ಲಿ ತಮ್ಮ ಪತ್ನಿ ಹಾಗೂ ಇಬ್ಬರು ಮಕ್ಕಳ ಜತೆ ನೆಲೆಸಿದ್ದರು. ಈ ಮಕ್ಕಳ ಪೈಕಿ ಖಾಸಗಿ ಕಂಪನಿಯಲ್ಲಿ ಮಗಳು ಉದ್ಯೋಗದಲ್ಲಿದ್ದರೆ, ಖಾಸಗಿ ಶಾಲೆಯಲ್ಲಿ ಅವರ ಪುತ್ರ 10ನೇ ತರಗತಿ ಓದುತ್ತಿದ್ದಾನೆ.

ಪ್ರತಿ ದಿನ ಪತಿ ಮತ್ತು ಮಕ್ಕಳು ತೆರಳಿದ ಬಳಿಕ ಲತಾ ಮನೆಯಲ್ಲಿ ಒಂಟಿಯಾಗಿರುತ್ತಿದ್ದರು. ಐದು ಅಂತಸ್ತಿನ ವಸತಿ ಸಮುಚ್ಛಯದಲ್ಲಿ ನಾಲ್ಕನೇ ಮಹಡಿಯಲ್ಲಿ ಅವರು ವಾಸವಾಗಿದ್ದರು. ಆ ಮನೆಗೆ ಮಧ್ಯಾಹ್ನ 12 ಗಂಟೆಗೆ ಸುಮಾರಿಗೆ ತೆರಳಿರುವ ಅಪರಿಚಿತ, ಬಾಗಿಲು ತೆರೆದಾಗ ಲತಾ ಅವರ ಮುಖಕ್ಕೆ ಗುದ್ದಿದ್ದಾನೆ. ಈ ಹೊಡೆತಕ್ಕೆ ಅವರು ಕೆಳಗೆ ಬಿದ್ದಾಗ ಕುತ್ತಿಗೆ ಹಿಸುಕಿ ಆತ ಕೊಂದಿದ್ದಾನೆ. ಬಳಿಕ ಮನೆಯಲ್ಲಿದ್ದ 150 ಗ್ರಾಂ ಚಿನ್ನಾಭರಣ ಹಾಗೂ 2 ಲಕ್ಷ ರು. ನಗದು ದೋಚಿ ದುಷ್ಕರ್ಮಿ ಪರಾರಿಯಾಗಿದ್ದಾನೆ.

ಮನೆಯಲ್ಲಿದ್ದ ಪತ್ನಿಗೆ ಸಂಜೆ 4 ಗಂಟೆ ಸುಮಾರಿಗೆ ಪ್ರಕಾಶ್ ಕರೆ ಮಾಡಿದ್ದಾರೆ. ಆದರೆ ನಿರಂತರವಾಗಿ ಕರೆ ಮಾಡಿದಾಗಲೂ ಪತ್ನಿ ಪ್ರತಿಕ್ರಿಯಿಸದೆ ಹೋದಾಗ ಅವರಿಗೆ ಆತಂಕವಾಗಿದೆ. ಕೂಡಲೇ ಮನೆಗೆ ಬಂದಾಗ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ನಿ ಕಂಡು ಅವರು ಕಿರುಚಿದ್ದಾರೆ. ಕೂಡಲೇ ಘಟನೆ ಕುರಿತು ಪೊಲೀಸರಿಗೆ ಸ್ಥಳೀಯರು ತಿಳಿಸಿದ್ದಾರೆ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪರಿಚಿತರ ಕೈವಾಡ ಶಂಕೆ:

ಲತಾ ಹತ್ಯೆ ಕೃತ್ಯದ ಹಿಂದೆ ಮೃತರ ಪರಿಚಿತರ ಕೈವಾಡ ಬಗ್ಗೆ ಶಂಕೆ ವ್ಯಕ್ತವಾಗಿದೆ. ಈ ಹಿನ್ನಲೆಯಲ್ಲಿ ಕೆಲವರನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಲತಾ ಕೊಲೆ ಪ್ರಕರಣದ ಸಂಬಂಧ ಎಲ್ಲ ಆಯಾಮದಿಂದ ತನಿಖೆ ನಡೆದಿದೆ. ಆರೋಪಿ ಕುರಿತು ಕೆಲ ಮಾಹಿತಿ ಲಭ್ಯವಾಗಿದ್ದು, ಶೀಘ್ರದಲ್ಲೇ ಹತ್ಯೆ ಪ್ರಕರಣವನ್ನು ಪತ್ತೆ ಹಚ್ಚುತ್ತೇವೆ.

-ಎಸ್‌.ಗಿರೀಶ್, ಡಿಸಿಪಿ, ಪಶ್ಚಿಮ ವಿಭಾಗ

PREV
Read more Articles on

Recommended Stories

ದುಷ್ಕರ್ಮಿಗಳಿಂದ ಯುವಕನ ಕೊಲೆ; ಪೊಲೀಸರಿಂದ ಸಹೋದರನ ವಿಚಾರಣೆ
24 ಕ್ಯಾರೆಟ್ ಶುದ್ಧ ಚಿನ್ನದ ಹೆಸರಲ್ಲಿ ಟೋಪಿ ಹಾಕಿದವ ಬಂಧನ : 30 ಲಕ್ಷ ರು. ಮೌಲ್ಯದ ವಸ್ತು ಜಪ್ತಿ