ಸಂಚಾರ ದಟ್ಟಣೆ ಹೆಚ್ಚಿರುವ ಕೆಲವು ರಸ್ತೆಗಳಲ್ಲಿ ಮತ್ತೆ ಟೋಯಿಂಗ್‌ ಜಾರಿಗೆ ಚಿಂತನೆ: ಡಾ.ಜಿ.ಪರಮೇಶ್ವರ್‌

KannadaprabhaNewsNetwork |  
Published : Jan 30, 2025, 01:46 AM ISTUpdated : Jan 30, 2025, 05:13 AM IST
Home minister | Kannada Prabha

ಸಾರಾಂಶ

ನಗರದಲ್ಲಿ ಸಂಚಾರ ದಟ್ಟಣೆ ಹೆಚ್ಚಿರುವ ಕೆಲವು ರಸ್ತೆಗಳಲ್ಲಿ ಮತ್ತೆ ಟೋಯಿಂಗ್‌ ವ್ಯವಸ್ಥೆ ಜಾರಿಗೆ ತರುವ ಚಿಂತನೆಯಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಹೇಳಿದ್ದಾರೆ.

  ಬೆಂಗಳೂರು : ನಗರದಲ್ಲಿ ಸಂಚಾರ ದಟ್ಟಣೆ ಹೆಚ್ಚಿರುವ ಕೆಲವು ರಸ್ತೆಗಳಲ್ಲಿ ಮತ್ತೆ ಟೋಯಿಂಗ್‌ ವ್ಯವಸ್ಥೆ ಜಾರಿಗೆ ತರುವ ಚಿಂತನೆಯಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಹೇಳಿದ್ದಾರೆ.

ನಗರ ಸಂಚಾರ ಪೊಲೀಸ್‌ ವಿಭಾಗದಿಂದ ಇನ್ಫೆಂಟ್ರಿ ರಸ್ತೆಯ ಸಂಚಾರ ನಿರ್ವಹಣಾ ಕೇಂದ್ರದಲ್ಲಿ (ಟಿಎಂಸಿ) ಬುಧವಾರ ಆಯೋಜಿಸಿದ್ದ ‘ನಗರ ಚಲನಶೀಲತೆ ಸವಾಲುಗಳು ಮತ್ತು ಪೊಲೀಸರ ಪಾತ್ರ’ ವಿಷಯ ಕುರಿತು ಪೊಲೀಸರು–ಸಂಪಾದಕರ ನಡುವೆ ನಡೆದ ಸಂವಾದದಲ್ಲಿ ಮಾತನಾಡಿ, ದೆಹಲಿ ನಂತರ ಬೆಂಗಳೂರು ನಗರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಂಚಾರ ಪೊಲೀಸರು ಕಾರ್ಯ ನಿರ್ವಹಿಸುತ್ತಿದ್ದಾರೆ. 

ಸಂಚಾರ ಸಮಸ್ಯೆ ಸುಧಾರಣೆ ತರುವ ನಿಟ್ಟಿನಲ್ಲಿ ತಂತ್ರಜ್ಞಾನ ಬಳಕೆ, ಹೊಸ ಸಂಚಾರ ಪೊಲೀಸ್‌ ಠಾಣೆಗಳ ಸ್ಥಾಪನೆ ಸೇರಿದಂತೆ ಹಲವು ಕ್ರಮ ಕೈಗೊಳ್ಳಲಾಗಿದೆ. ಅಗತ್ಯ ಇದ್ದಲ್ಲಿ ಮತ್ತಷ್ಟು ಸಂಚಾರ ಪೊಲೀಸ್‌ ಠಾಣೆಗಳನ್ನು ಸ್ಥಾಪಿಸಲಾಗುವುದು. ನಗರದಲ್ಲಿ ಸುಮಾರು 1.40 ಕೋಟಿ ಜನಸಂಖ್ಯೆಯಿದೆ. ಎಸ್‌.ಎಂ.ಕೃಷ್ಣ ಅವರ ಅವಧಿಯಲ್ಲಿ ಹೆಚ್ಚಿನ ಮೇಲ್ಸೇತುವೆ ನಿರ್ಮಿಸಲಾಗಿತ್ತು. ಇದೀಗ ಜನಸಂಖ್ಯೆ ಹಾಗೂ ವಾಹನಗಳ ಸಂಖ್ಯೆ ಹೆಚ್ಚಳವಾಗಿದ್ದು, ಸುಗಮ ಸಂಚಾರಕ್ಕೆ ಮತ್ತಷ್ಟು ಮೂಲಸೌಕರ್ಯ ಕಲ್ಪಿಸುವ ಅಗತ್ಯವಿದೆ ಎಂದರು.

ಇದೇ ವೇಳೆ ಅಸ್ತ್ರಂ ಮೊಬೈಲ್‌ ಆ್ಯಪ್‌, ನಗರ ಸಂಚಾರ ಪೊಲೀಸ್‌ ಇತಿಹಾಸ ತಿಳಿಸುವ ವಸ್ತು ಸಂಗ್ರಹಾಲಯ, ಅನುಭವ ಮಂಟಪವನ್ನು ಲೋಕಾರ್ಪಣೆಗೊಳಿಸಿದರು. ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಅಲೋಕ್‌ ಮೋಹನ್‌, ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ, ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್‌ ಆಯುಕ್ತ ಎಂ.ಎನ್‌.ಅನುಚೇತ್‌ ಸೇರಿದಂತೆ ಹಿರಿಯ ಪೊಲೀಸ್‌ ಅಧಿಕಾರಿಗಳು, ಸಂಪಾದಕರು, ಹಿರಿಯ ಪತ್ರಕರ್ತರು ಉಪಸ್ಥಿತರಿದ್ದರು.

ಅಸ್ತ್ರಂ ಮೊಬೈಲ್‌ ಆ್ಯಪ್‌ ಅಭಿವೃದ್ಧಿ: ಸಾರ್ವಜನಿಕರು ಒಂದೇ ವೇದಿಕೆಯಲ್ಲಿ ನೈಜ ಸಮಯದ ಸಂಚಾರ ಅಪ್ಡೇಟ್‌ ಪಡೆಯುವ, ಅಪಘಾತ ವರದಿ, ಸಂಚಾರ ನಿಯಮ ಉಲ್ಲಂಘನೆ ವರದಿ ಮಾಡುವ, ದಂಡ ಪಾವತಿಸುವುದು ಸೇರಿ ಹಲವು ವೈಶಿಷ್ಟಗಳನ್ನು ಒಳಗೊಂಡಿರುವ ‘ಅಸ್ತ್ರಂ’ ಎಂಬ ಮೊಬೈಲ್‌ ಆ್ಯಪ್‌ ಅಭಿವೃದ್ಧಿಪಡಿಸಲಾಗಿದೆ. ಅಲ್ಲದೆ, ಸಂಚಾರ ನಿರ್ವಹಣಾ ಕೇಂದ್ರದಲ್ಲಿ (ಟಿಎಂಸಿ) ನಗರ ಸಂಚಾರ ಪೊಲೀಸ್‌ ವಸ್ತು ಸಂಗ್ರಹಾಲಯ ಸ್ಥಾಪಿಸಲಾಗಿದ್ದು, ಇಲ್ಲಿ ನಗರದ ಸಂಚಾರ ನಿರ್ವಹಣೆಯ ಇತಿಹಾಸ ಮತ್ತು ವಿಕಾಸದ ಬಗ್ಗೆ ಬೆಳಕು ಚೆಲ್ಲಲಾಗಿದೆ. 

ಅನುಭವ ಕೇಂದ್ರ: ಈ ಅನುಭವ ಕೇಂದ್ರವು ಅತ್ಯಾಧುನಿಕ ಸೌಲಭ್ಯ ಮತ್ತು ತಂತ್ರಜ್ಞಾನದಿಂದ ಕೂಡಿದ್ದು, ನಗರದಲ್ಲಿ ಸಂಚಾರ ಪೊಲೀಸ್‌ ಮತ್ತು ರಸ್ತೆ ಸುರಕ್ಷತೆಯ ತಾಂತ್ರಿಕ ವಿಕಾಸದ ಮೇಲೆ ಬೆಳಕು ಚೆಲ್ಲುತ್ತದೆ. ಹ್ಯಾಂಡ್ಸ್‌-ಆನ್‌ ಕಲಿಕೆಗಾಗಿ ಸಿಮ್ಯುಲೇಟೆಡ್‌ ಟ್ರಾಫಿಕ್‌ ಸನ್ನಿವೇಶಗಳು, ಸಂಚಾರದ ನೈಜ ಸಮಜಯದ ಡಿಜಿಟೆಲ್‌ ಮಾದರಿ, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತೆ, ಸಂಚಾರ ನಿರ್ವಹಣೆ ಕುರಿತು ಮಾಹಿತಿ, ಕೃತಕ ಬುದ್ಧಿಮತ್ತೆ ಆಧಾರಿತ ಸಿಗ್ನಲಿಂಗ್‌, ಡಿಜಿಟೆಲ್‌ ನಿಯಮ ಸೇರಿದಂತೆ ಹಲವು ಮಾಹಿತಿ ಒದಗಿಸಲಿದೆ.

PREV

Recommended Stories

ತಾಯಿಗೆ ಕ್ಷಮೆ ಕೋರಿ ಪತ್ರ ಬರೆದಿಟ್ಟು ನೇ*ಗೆ ಶರಣಾದ ಕನ್ನಡ ಗಾಯಕಿ ಸವಿತಾ ಮಗ
ಐಎಸ್‌ಡಿ ಕರೆಗಳ ಗೋಲ್‌ಮಾಲ್‌ : ಕೋಟ್ಯಂತರ ರು. ವಂಚಿಸಿದ್ದ ಇಬ್ಬರ ಬಂಧನ