ಶ್ರೀಮಂತ ಸ್ನೇಹಿತನಿಗೆ ಮದ್ಯ ಕುಡಿಸಿ ಸಿನಿಮೀಯ ಶೈಲಿಯಲ್ಲಿ ದರೋಡೆ ಮಾಡಿದ ಮೂವರು ಸೆರೆ

Published : Jun 16, 2025, 06:52 AM IST
women in jail

ಸಾರಾಂಶ

ಸ್ನೇಹಿತನಿಗೆ ಕಂಠಪೂರ್ತಿ ಮದ್ಯ ಕುಡಿಸಿದ ಸ್ನೇಹಿತರೇ ಲಾಂಗ್‌ ಡ್ರೈವ್‌ ಕರೆದೊಯ್ದು ಗ್ಯಾಂಗ್‌ವೊಂದಕ್ಕೆ ಸುಪಾರಿ ನೀಡಿ ಪಾನಮತ್ತ ಸ್ನೇಹಿತನನ್ನು ಸಿನಿಮೀಯ ಶೈಲಿಯಲ್ಲಿ ದರೋಡೆ ಮಾಡಿಸಿರುವ ಘಟನೆ ಚಿಕ್ಕಜಾಲ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

  ಬೆಂಗಳೂರು :  ಸ್ನೇಹಿತನಿಗೆ ಕಂಠಪೂರ್ತಿ ಮದ್ಯ ಕುಡಿಸಿದ ಸ್ನೇಹಿತರೇ ಲಾಂಗ್‌ ಡ್ರೈವ್‌ ಕರೆದೊಯ್ದು ಗ್ಯಾಂಗ್‌ವೊಂದಕ್ಕೆ ಸುಪಾರಿ ನೀಡಿ ಪಾನಮತ್ತ ಸ್ನೇಹಿತನನ್ನು ಸಿನಿಮೀಯ ಶೈಲಿಯಲ್ಲಿ ದರೋಡೆ ಮಾಡಿಸಿರುವ ಘಟನೆ ಚಿಕ್ಕಜಾಲ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಚುಂಚಕಟ್ಟ ಮುಖ್ಯರಸ್ತೆಯ ಶಿವಶಕ್ತಿನಗರ ನಿವಾಸಿ ಚಂದನ್‌ (23) ದರೋಡೆಗೆ ಒಳಗಾದವರು. ಈ ಸಂಬಂಧ ಚಂದನ್‌ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುವ ಪೊಲೀಸರು, ಆರೋಪಿಗಳಾದ ಪವನ್‌, ಅಚಲ್‌ ಹಾಗೂ ಪ್ರೇಮ್‌ ಶೆಟ್ಟಿ ಎಂಬುವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಆರೋಪಿಗಳು ಮೇ 1ರಂದು ಮುಂಜಾನೆ ನೆಲ್ಲಗುಂಟೆ ಸಮೀಪದ ಗಂಟಿಗಾನಹಳ್ಳಿ ಸರ್ಕಲ್‌ ಬಳಿ ಚಂದನ್‌ ಮೇಲೆ ಹಲ್ಲೆ ಮಾಡಿ ಸುಮಾರು ಮೂರು ಲಕ್ಷ ರು. ಮೌಲ್ಯದ ಚಿನ್ನಾಭರಣ ದರೋಡೆ ಮಾಡಿದ್ದರು.

ಪ್ರಕರಣದ ವಿವರ

ದೂರುದಾರ ಚಂದನ್ ಮತ್ತು ಆರೋಪಿಗಳಾದ ಪವನ್, ಅಚಲ್ ನಾಲ್ಕು ವರ್ಷಗಳಿಂದ ಸ್ನೇಹಿತರಾಗಿದ್ದರು. ಏ.30ರಂದು ರಾತ್ರಿ ಮೂವರೂ ಚಿಕ್ಕಜಾಲದ ನೆಕ್ಟ್ ಚಾಪ್ಟರ್ ಪಬ್‌ಗೆ ತೆರಳಿದ್ದಾರೆ. ಪವನ್ ಮತ್ತು ಅಚಲ್ ಸೇರಿಕೊಂಡು ಚಂದನ್‌ಗೆ ಕಂಠಪೂರ್ತಿ ಮದ್ಯ ಕುಡಿಸಿದ್ದಾರೆ. ಬಳಿಕ ಲಾಂಗ್‌ ಡ್ರೈವ್‌ ನೆಪದಲ್ಲಿ ಚಂದನ್‌ನನ್ನು ಕಾರಿನಲ್ಲಿ ಕರೆದೊಯ್ದಿದ್ದಾರೆ. ಮುಂಜಾನೆ ಸುಮಾರು 1.30ಕ್ಕೆ ನೆಲ್ಲಗುಂಟೆ ಸಮೀಪದ ಗಂಟಿಗಾನಹಳ್ಳಿ ಸರ್ಕಲ್‌ ಬಳಿ ಹೋಗುವಾಗ ಇಬ್ಬರು ಅಪರಿಚಿತರು ದ್ವಿಚಕ್ರ ವಾಹನದಲ್ಲಿ ಬಂದು ಕಾರನ್ನು ಅಡ್ಡಗಟ್ಟಿ ಚಂದನ್‌ ಮೇಲೆ ಹಲ್ಲೆಗೈದು ಚಿನ್ನದ ಚೈನ್‌, ಕಡಗ ಹಾಗೂ ಉಂಗುರ ದರೋಡೆ ಮಾಡಿ ಪರಾರಿಯಾಗಿದ್ದರು. ಈ ಸಂಬಂಧ ಚಂದನ್‌ ಚಿಕ್ಕಜಾಲ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

ತನಿಖೆ ವೇಳೆ ಸ್ನೇಹಿತರ ಕೈವಾಡ ಬೆಳಕಿಗೆ:

ಪ್ರಕರಣ ಸಂಬಂಧ ತನಿಖೆ ಮಾಡಿದಾಗ ಈ ದರೋಡೆ ಹಿಂದೆ ದೂರುದಾರನ ಸ್ನೇಹಿತರಾದ ಪವನ್‌ ಮತ್ತು ಅಚಲ್‌ ಕೈವಾಡ ಇರುವುದು ಕಂಡು ಬಂದ ಬಳಿಕ ಆ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಅಪರಾಧ ಹಿನ್ನೆಲೆಯ ಪ್ರೇಮ್‌ ಶೆಟ್ಟಿ ಗ್ಯಾಂಗ್‌ಗೆ ಸುಪಾರಿ ನೀಡಿ ಸ್ನೇಹಿತ ಚಂದನ್‌ನನ್ನು ದರೋಡೆ ಮಾಡಿಸಿದ್ದ ವಿಚಾರ ಬೆಳಕಿಗೆ ಬಂದಿದೆ. ಬಳಿಕ ಪ್ರೇಮ್‌ ಶೆಟ್ಟಿ ಹಾಗೂ ಸಚಹರರನ್ನು ಪೊಲೀಸರು ಬಂಧಿಸಿದ್ದಾರೆ.

ಕೆಫೆ ವ್ಯವಹಾರದಲ್ಲಿ ನಷ್ಟ:

ದರೋಡೆಗೆ ಒಳಗಾದ ಚಂದನ್‌ ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿದ್ದಾರೆ. ಯಾವಾಗಲೂ ಚಿನ್ನಾಭರಣ ಧರಿಸಿ ಕಾರಿನಲ್ಲಿ ಓಡಾಡುತ್ತಿದ್ದ. ಚಂದನ್‌ ಶ್ರೀಮಂತಿಕೆ ಬಗ್ಗೆ ಪವನ್‌ ಮತ್ತು ಅಚಲ್‌ಗೆ ಚೆನ್ನಾಗಿ ಗೊತ್ತಿತ್ತು. ಈ ನಡುವೆ ಅಚಲ್‌ ಜೆ.ಪಿ. ನಗರದಲ್ಲಿ ಕೆಫೆ ನಡೆಸುತ್ತಿದ್ದ. ವ್ಯವಹಾರದಲ್ಲಿ ನಷ್ಟ ಅನುಭವಿಸಿ ಸಾಲ ಮಾಡಿಕೊಂಡು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ. ಹೀಗಾಗಿ ಹೇಗಾದರೂ ಮಾಡಿ ಹಣ ಸಂಪಾದಿಸಿ ಆರ್ಥಿಕ ಸಂಕಷ್ಟದಿಂದ ಹೊರಬರಲು ಯೋಚಿಸುತ್ತಿದ್ದ. ಈ ವೇಳೆ ಸ್ನೇಹಿತ ಚಂದನ್‌ನನ್ನೇ ದರೋಡೆ ಮಾಡಿಸಲು ಸ್ಕೆಚ್ ಹಾಕಿದ್ದ. ಈ ವಿಚಾರವನ್ನು ಸ್ನೇಹಿತ ಪವನ್‌ಗೂ ತಿಳಿಸಿದ್ದ. ಪವನ್‌ ಸಹ ಇದಕ್ಕೆ ಸಾಥ್‌ ನೀಡಿದ್ದ. ಚಂದನ್‌ ದರೋಡೆಗೆ ಅಪರಾಧ ಹಿನ್ನೆಲೆವುಳ್ಳ ಪ್ರೇಮ್‌ ಶೆಟ್ಟಿ ಗ್ಯಾಂಗ್‌ಗೆ ಸುಪಾರಿ ನೀಡಿ ದರೋಡೆ ಮಾಡಿಸಿದ್ದರು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಸಿಡಿಆರ್‌ ನೀಡಿದ ಸುಳಿವು: ದರೋಡೆ ರಹಸ್ಯ ಬಯಲು

ತನಿಖೆ ಆರಂಭದಲ್ಲಿ ಪವನ್‌ ಮತ್ತು ಅಚಲ್‌ನನ್ನು ವಿಚಾರಣೆ ಮಾಡಿದಾಗ ತಮಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ಆದರೆ, ಅವರ ಮೊಬೈಲ್‌ ಕರೆಗಳ ವಿವರ(ಸಿಡಿಆರ್‌) ಸಂಗ್ರಹಿಸಿ ಪರಿಶೀಲಿಸಿದಾಗ ದರೋಡೆಗೂ ಮುನ್ನ ಪ್ರೇಮ್‌ ಶೆಟ್ಟಿಗೆ ಹಲವು ಬಾರಿ ಕರೆ ಮಾಡಿರುವುದು ಗೊತ್ತಾಗಿದೆ. ಬಳಿಕ ಇಬ್ಬರನ್ನು ವಶಕ್ಕೆ ಪಡೆದು ಪೊಲೀಸ್‌ ಭಾಷೆಯಲ್ಲಿ ವಿಚಾರಣೆ ಮಾಡಿದಾಗ ಈ ಸಿನಿಮೀಯ ಶೈಲಿಯ ದರೋಡೆ ರಹಸ್ಯ ಬಯಲಾಗಿದೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.
Read more Articles on

Recommended Stories

ಜಮೀನು ವಿಚಾರವಾಗಿ ದಾಯಾದಿಗಳ ನಡುವೆ ಕಲಹ: ಕೊಲೆ ಅಂತ್ಯ
ಪೊಲೀಸ್‌ ಠಾಣೆ ಸಮೀಪ ಪಾನಮತ್ತ ದಂಪತಿಯ ರಂಪಾಟ