)
ಕನ್ನಡಪ್ರಭ ವಾರ್ತೆ ಬೆಂಗಳೂರು
ಡಿ.ಎ. ಶ್ರೀನಿವಾಸ್, ಡಿ.ಎ.ಕಲ್ಪಜಾ ಮತ್ತು ಡಿವೈಎಸ್ಪಿ ಎಸ್.ವೈ. ಮೋಹನ್ ಬಂಧಿತರು. ಬಂಧನದ ಬಳಿಕ ಮೂವರು ಆರೋಪಿಗಳನ್ನು ನಗರದ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದ ಸಿಬಿಐ ಅಧಿಕಾರಿಗಳು, ವಿಚಾರಣೆ ಸಂಬಂಧ ಆರೋಪಿಗಳನ್ನು 10 ದಿನ ವಶಕ್ಕೆ ನೀಡುವಂತೆ ಮನವಿ ಮಾಡಿದರು. ವಿಚಾರಣೆ ನಡೆಸಿದ ನ್ಯಾಯಾಲಯವು ಮೂವರು ಆರೋಪಿಗಳನ್ನು ಡಿ.29ರ ವರೆಗೆ ಸಿಬಿಐ ವಶಕ್ಕೆ ನೀಡಿ ಆದೇಶಿಸಿತು.
ಇದಕ್ಕೂ ಮುನ್ನ ಆರೋಪಿ ಕಲ್ಪಜಾ ಪರ ವಕೀಲ ಕಿರಣ್ ಜವಳಿ, ಕಲ್ಪಜಾಗೆ ವಿಶೇಷ ಚೇತನ ಮಗಳು ಇದ್ದಾಳೆ. ಆಕೆಯನ್ನು ನೋಡಿಕೊಳ್ಳುವ ಅಗತ್ಯವಿದೆ. ಹೀಗಾಗಿ ಸಿಬಿಐ ವಶಕ್ಕೆ ನೀಡದೆ ಜಾಮೀನು ನೀಡಬೇಕು. ಪ್ರತಿ ದಿನ ಕಲ್ಪಜಾ ಸಿಬಿಐ ಕಚೇರಿಗೆ ಹಾಜರಾಗಿ ವಿಚಾರಣೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ಮನವಿ ಮಾಡಿದರು.ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಿಬಿಐ ಪರ ವಿಶೇಷ ಸರ್ಕಾರಿ ಅಭಿಯೋಜಕರಾದ ಹೇಮಾ, ಆರೋಪಿಗಳು ತುಂಬಾ ಪ್ರಭಾವಿಗಳಾಗಿದ್ದಾರೆ. ಹೀಗಾಗಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವ ಅಗತ್ಯವಿದೆ. ಆರೋಪಿಗಳಿಗೆ ಜಾಮೀನು ನೀಡದೆ ಸಿಬಿಐ ವಶಕ್ಕೆ ನೀಡುವಂತೆ ಕೋರಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ಮೂವರು ಆರೋಪಿಗಳನ್ನು ಡಿ.29ರವರೆಗೆ ಸಿಬಿಐ ಅಧಿಕಾರಿಗಳ ವಶಕ್ಕೆ ನೀಡಿ ಆದೇಶಿಸಿತು.
ಪ್ರಕರಣದ ಹಿನ್ನೆಲೆ: ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದ ಮೃತ ರಘುನಾಥ್ ಕರ್ನಾಟಕ, ಆಂಧ್ರ ಪ್ರದೇಶದಲ್ಲಿ ಭೂ ವ್ಯವಹಾರ ನಡೆಸುತ್ತಿದ್ದರು. ಈ ನಡುವೆ 2019ರ ಮೇನಲ್ಲಿ ಆರೋಪಿ ಡಿ.ಎ.ಶ್ರೀನಿವಾಸ್ ಅವರ ಗೆಸ್ಟ್ ಹೌಸ್‌ನಲ್ಲಿ ರಘುನಾಥ್ ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಸಂಬಂಧ ಮೃತನ ಪತ್ನಿ ಮಂಜುಳಾ ಅವರು ಪತಿ ರಘುನಾಥ್ ಅವರನ್ನು ಅಪಹರಿಸಿ ಬಳಿಕ ಕೊಲೆ ಮಾಡಲಾಗಿದೆ ಎಂದು ಎಚ್‌ಎಎಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ವೇಳೆ ಡಿ.ಎ.ಶ್ರೀನಿವಾಸ್, ದಾಮೋದರ್, ರಾಮಚಂದ್ರಯ್ಯ, ಪ್ರತಾಪ್ ಎಂಬುವರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು.ಆಸ್ತಿ ಬರೆಸಿಕೊಂಡು ಕೊಲೆ ಆರೋಪ:
ದೂರುದಾರೆ ಮಂಜುಳಾ ಅವರು ಆರೋಪಿಗಳ ವಿರುದ್ಧ ಹಲವು ಆರೋಪ ಮಾಡಿದ್ದರು. ಆರೋಪಿಗಳು ನಕಲಿ ಛಾಪಾಕಾಗದ ಬಳಸಿಕೊಂಡು ಪತಿ ರಘುನಾಥ ಅವರ ಆಸ್ತಿ ಬರೆಸಿಕೊಂಡಿದ್ದಾರೆ. ಬಳಿಕ ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸಿದ್ದಾರೆ ಎಂದು ಆರೋಪಿಸಿದ್ದರು. ಅಂದು ಎಚ್‌ಎಎಲ್ ಠಾಣೆಯಲ್ಲಿ ಇನ್ಸ್‌ಪೆಕ್ಟರ್ ಆಗಿದ್ದ ಮೋಹನ್ ಅವರು ಪ್ರಕರಣ ದಾಖಲಿಸಿಕೊಂಡಿದ್ದರು. ಬಳಿಕ ಪ್ರಕರಣ ತನಿಖೆ ನಡೆಸಿದ ಪೊಲೀಸರು ಬಿ ರಿಪೋರ್ಟ್ ಸಲ್ಲಿಸಿದ್ದರು.ಸಿಬಿಐ ತನಿಖೆಗೆ ಆದೇಶಿಸಿದ್ದ ಹೈಕೋರ್ಟ್:
ಈ ಬಿ ರಿಪೋರ್ಟ್ ಅನ್ನು ಮಂಜುಳಾ ಅವರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯವು ಎಸ್ಐಟಿ ತನಿಖೆಗೆ ಆದೇಶಿಸಿತ್ತು. ನಂತರ ಎಸ್‌ಐಟಿ ಸಹ ಈ ಪ್ರಕರಣದಲ್ಲಿ ಬಿ ರಿಪೋರ್ಟ್ ಸಲ್ಲಿಸಿತ್ತು. ಆಗಲೂ ಮಂಜುಳಾ ಅವರು ಈ ಬಿ ರಿಪೋರ್ಟ್ ಪ್ರಶ್ನಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಈ ವೇಳೆ ಹೈಕೋರ್ಟ್ ಸಿಬಿಐ ತನಿಖೆಗೆ ಆದೇಶಿಸಿತ್ತು.ಅದರಂತೆ ಸಿಬಿಐ ಈ ಪ್ರಕರಣ ಸಂಬಂಧ ಕ್ರಿಮಿನಲ್ ಪಿತೂರಿ, ವಂಚನೆ, ನಕಲಿ ಛಾಪಾಕಾಗದ, ನಕಲಿ ಸರ್ಕಾರಿ ಸೀಲುಗಳ ಬಳಸಿ ವಂಚನೆ, ಸಾಕ್ಷ್ಯಗಳ ನಾಶ, ಸುಳ್ಳು ಸಾಕ್ಷ್ಯಗಳ ಸೃಷ್ಟಿ ಆರೋಪದಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ. ಇದರ ಬೆನ್ನಲ್ಲೇ ಆರೋಪಿಗಳಾದ ಮಾಜಿ ಸಂಸದನ ಪುತ್ರ ಡಿ.ಎ.ಶ್ರೀನಿವಾಸ್, ಪುತ್ರಿ ಡಿ.ಎ.ಕಲ್ಪಜಾ ಮತ್ತು ಅಂದಿನ ಎಚ್‌ಎಎಲ್ ಠಾಣೆ ಇನ್ಸ್‌ಪೆಕ್ಟರ್ ಆಗಿದ್ದ ಇಂದಿನ ಎಸ್‌ಎಚ್‌ಆರ್‌ಸಿ ಡಿವೈಎಸ್ಪಿ ಮೋಹನ್ ಅವರನ್ನು ಬಂಧಿಸಿದ್ದಾರೆ.