ಸಾಲ ಬಾಧೆಯಿಂದ ಬೇಸತ್ತು ಪತ್ನಿ, ಮಗನನ್ನು ಕೊಂದು ತಂದೆ ಆತ್ಮಹತ್ಯೆ!

KannadaprabhaNewsNetwork |  
Published : Jun 10, 2026, 01:30 AM IST
೯ಕೆಎಂಎನ್‌ಡಿ-೩ಪ್ರಭಾಕರ್ | Kannada Prabha

ಸಾರಾಂಶ

ಸಾಲಬಾಧೆಯಿಂದ ತತ್ತರಿಸಿದ್ದ ಮಂಡ್ಯ ನಗರದ ಬಟ್ಟೆ ವ್ಯಾಪಾರಿಯೊಬ್ಬರು ಪತ್ನಿ ಮತ್ತು ಮಗನನ್ನು ಉಸಿರುಗಟ್ಟಿಸಿ ಕೊಲೆಗೈದು ಆನಂತರ ಅಂಗಡಿಗೆ ತೆರಳಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿನ ನೆಹರುನಗರ ಮೊದಲನೇ ಕ್ರಾಸ್‌ನಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಸಾಲಬಾಧೆಯಿಂದ ತತ್ತರಿಸಿದ್ದ ನಗರದ ಬಟ್ಟೆ ವ್ಯಾಪಾರಿಯೊಬ್ಬರು ಪತ್ನಿ ಮತ್ತು ಮಗನನ್ನು ಉಸಿರುಗಟ್ಟಿಸಿ ಕೊಲೆಗೈದು ಆನಂತರ ಅಂಗಡಿಗೆ ತೆರಳಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿನ ನೆಹರುನಗರ ಮೊದಲನೇ ಕ್ರಾಸ್‌ನಲ್ಲಿ ನಡೆದಿದೆ.

ಆಸ್ಪತ್ರೆ ರಸ್ತೆಯಲ್ಲಿರುವ ಕಲ್ಪವಕ್ಷ ಕಾಮೇಧೇನು ವಸ್ತ್ರಾಲಯದ ಮಾಲೀಕ ಪ್ರಭಾಕರ್ (೫೮), ಪತ್ನಿ ಜ್ಯೋತಿ (೪೫), ಪುತ್ರ ಸಂತೋಷ್ (೩೩) ಮೃತಪಟ್ಟವರು. ಮೃತ ಸಂತೋಷ್‌ಗೆ ಕಳೆದ ಒಂದು ತಿಂಗಳ ಹಿಂದಷ್ಟೇ ಮದುವೆಯಾಗಿತ್ತು ಎಂದು ತಿಳಿದುಬಂದಿದೆ.

ಕೆಲ ದಶಕಗಳ ಹಿಂದೆ ಪ್ರಭಾಕರ್ ಮತ್ತವರ ಸಹೋದರರು ಸೇರಿಕೊಂಡು ನಗರದಲ್ಲಿ ಪ್ರತಿಷ್ಠಿತ ಕಾಮಧೇನು ವಸ್ತ್ರಾಲಯ ಬಟ್ಟೆ ಅಂಗಡಿಯನ್ನು ತೆರೆದಿದ್ದರು. ಈ ಅಂಗಡಿ ಭಾರೀ ಜನಪ್ರಿಯತೆಯನ್ನು ಗಳಿಸಿಕೊಂಡಿತ್ತು. ಆ ನಂತರದಲ್ಲಿ ಸಹೋದರರು ಆಸ್ತಿ ಭಾಗ ಮಾಡಿಕೊಂಡು ಪ್ರತ್ಯೇಕವಾಗಿ ಜೀವನ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ.

ಪ್ರಭಾಕರ್ ಕುಟುಂಬ ಮೊದಲಿಗೆ ಬಿಗ್‌ಶಾಪ್ ಎಂಬ ಅಂಗಡಿಯನ್ನು ನಡೆಸಿ ಆರ್ಥಿಕ ನಷ್ಟ ಅನುಭವಿಸಿ ಕೈಸುಟ್ಟುಕೊಂಡಿದ್ದರು. ಕೋವಿಡ್ ಸಮಯದಲ್ಲೂ ವ್ಯಾಪಾರ ಅವರ ಕೈಹಿಡಿಯಲಿಲ್ಲ. ಐದಾರು ಬ್ಯಾಂಕ್‌ಗಳಲ್ಲಿ ಸಾಲ ಮಾಡಿಕೊಂಡಿದ್ದರು. ಪತ್ನಿ ಚೀಟಿ ವ್ಯವಹಾರ ನಡೆಸುತ್ತಿದ್ದು ಅದರಲ್ಲೂ ನಷ್ಟವಾಗಿತ್ತು. ಕಳೆದೆರಡು ವರ್ಷಗಳಿಂದ ಕಲ್ಪವೃಕ್ಷ ಕಾಮಧೇನು ಹೆಸರಿನಲ್ಲಿ ಮತ್ತೆ ಬಟ್ಟೆ ಅಂಗಡಿ ಆರಂಭಿಸಿದ್ದರು. ಆದರೂ ಸಾಲದ ಸುಳಿಯಿಂದ ಹೊರಬರಲಾಗದೆ ತತ್ತರಿಸಿದ್ದರು ಎಂದು ಹೇಳಲಾಗಿದೆ. ಸಾಲ ತೀರಿಸಲು ಮತ್ತು ಬಡ್ಡಿ ಕಟ್ಟುವುದಕ್ಕೂ ಸಾಧ್ಯವಾಗದೆ ಸಾಲಗಾರರ ಕಿರುಕುಳದಿಂದ ಪ್ರಭಾಕರ್ ತೀವ್ರವಾಗಿ ಮನನೊಂದಿದ್ದರು.

ನೆಹರು ನಗರದ ಹಿಮ ಡಯಾಗ್ನೋಸ್ಟಿಕ್ ಸೆಂಟರ್ ಕಟ್ಟಡದ ಎರಡನೇ ಮಹಡಿಯಲ್ಲಿ ವಾಸವಾಗಿದ್ದ ಪ್ರಭಾಕರ್ ಅವರು ಸೋಮವಾರ ತಡರಾತ್ರಿ ಮನೆಗೆ ಬಂದಿದ್ದಾರೆ. ಊಟ ಮಾಡಿ ಕೊಠಡಿಯಲ್ಲಿ ಮಲಗಿದ್ದಾರೆ. ಸಾಲಗಾರರ ಕಿರುಕುಳ ತಾಳಲಾರದೆ ಹತಾಶರಾಗಿದ್ದ ಅವರು ಮುಂಜಾನೆ ೩ ಗಂಟೆ ಸಮಯದಲ್ಲಿ ಮೊದಲು ಪತ್ನಿ ಜ್ಯೋತಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಅದನ್ನು ನೋಡಿದ ಮಗನನ್ನೂ ಕತ್ತು ಹಿಸುಕಿ ಕೊಲೆಗೈದಿದ್ದಾರೆ. ಬಳಿಕ ಅವರು ಮನೆಯಿಂದ ಹೊರನಡೆದು ಆಸ್ಪತ್ರೆ ರಸ್ತೆಯಲ್ಲಿರುವ ತಮ್ಮ ಅಂಗಡಿಗೆ ತೆರಳಿ ಅಲ್ಲಿ ಕಬ್ಬಿಣದ ಕೊಕ್ಕೆಯೊಂದಕ್ಕೆ ಹಗ್ಗ ಬಿಗಿದುಕೊಂಡು ನೇಣಿಗೆ ಶರಣಾಗಿದ್ದಾರೆ ಎಂದು ಹೇಳಲಾಗಿದೆ.

ಮನೆಯೊಳಗೆ ಇಷ್ಟೆಲ್ಲಾ ಘಟನೆ ನಡೆದರೂ ಸಂತೋಷ್ ಪತ್ನಿ ಮೇಘನಾ ಅವರಿಗೆ ಎಚ್ಚರವಾಗಿಲ್ಲ. ಅವರು ಬೆಳಗ್ಗೆ ಎದ್ದು ಮನೆ ಕಸ ಗುಡಿಸಿ, ತಿಂಡಿಗೆ ಈರುಳ್ಳಿಯನ್ನು ಹಚ್ಚಿದ್ದಾರೆ. ಬೆಳಗ್ಗೆ ೮ ಗಂಟೆಯಾದರೂ ಅತ್ತೆ ಕೊಠಡಿಯಿಂದ ಹೊರಬರದಿರುವುದನ್ನು ಕಂಡು ಒಳಹೋಗಿ ನೋಡಿದಾಗ ಅತ್ತೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದುದು ಕಂಡುಬಂದಿತು. ಗಾಬರಿಗೊಂಡ ಮೇಘನಾ ಕೂಡಲೇ ಕಟ್ಟಡದ ಕೆಳಭಾಗದಲ್ಲಿದ್ದ ಡಯಾಗ್ನೋಸ್ಟಿಕ್ ಸೆಂಟರ್‌ನ ವೈದ್ಯರಿಗೆ ವಿಷಯ ತಿಳಿಸಿದರು. ಅವರು ಬಂದು ನೋಡಿದಾಗ ಜ್ಯೋತಿ ಮೃತಪಟ್ಟಿರುವುದು ಖಚಿತವಾಯಿತು. ಅದೇ ಕೊಠಡಿಯ ಬಾಗಿಲ ಹಿಂಬದಿಯಲ್ಲೇ ಸಂತೋಷ್ ಶವ ಕೂಡ ಪತ್ತೆಯಾಯಿತು.

ಆ ನಂತರ ಪ್ರಭಾಕರ್ ಫೋನ್‌ಗೆ ಕರೆ ಮಾಡಿದರೂ ಸ್ವೀಕರಿಸಲಿಲ್ಲ. ಕೊನೆಗೆ ಅಂಗಡಿ ಬಳಿಗೆ ಹೋಗಿ ನೋಡಿದಾಗ ಅವರು ನೇಣಿಗೆ ಶರಣಾಗಿದ್ದರು. ಬಳಿಕ ವಿಷಯ ತಿಳಿದು ಸಂಬಂಧಿಕರೆಲ್ಲರೂ ಮನೆ ಹಾಗೂ ಅಂಗಡಿ ಬಳಿ ಜಮಾಯಿಸಿದರು. ಮನೆಯಲ್ಲಿ ಸಾಲ ಹೆಚ್ಚಾಗಿದೆ. ಬಡ್ಡಿ ಕಟ್ಟಲು ಸಾಧ್ಯವಾಗುತ್ತಿಲ್ಲ ಎಂದೆಲ್ಲಾ ಬರೆದಿರುವ ಡೆತ್‌ನೋಟ್ ಸಿಕ್ಕಿದೆ. ಕಳೆದ ಒಂದು ತಿಂಗಳ ಹಿಂದಷ್ಟೇ ಸಂತೋಷ್ ಮದುವೆ ಕೊಳ್ಳೇಗಾಲ ಮೂಲದ ಮೇಘನಾ ಎಂಬ ಯುವತಿಯೊಂದಿಗೆ ನೆರವೇರಿತ್ತು. ಸಂತೋಷ್ ಮಾನಸಿಕ ಅಸ್ವಸ್ಥನೆಂದು ಹೇಳಲಾಗಿದೆ. ಮತ್ತೊಬ್ಬ ಮಗಳು ಶುಭಾ ಬೆಂಗಳೂರಿನ ಬಾಸ್ಕ್ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅವರೂ ವಿಷಯ ತಿಳಿದು ಮಂಡ್ಯಕ್ಕೆ ಆಗಮಿಸಿದರು.

ವಿಷಯ ತಿಳಿದು ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿ.ಜೆ.ಶೋಭಾರಾಣಿ, ಡಿವೈಎಸ್ಪಿ, ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ವಿಧಿ ವಿಜ್ಞಾನ ತಂಡದವರು ಆಗಮಿಸಿ ಶವಗಳನ್ನು ಪರೀಕ್ಷಿಸಿದ ಬಳಿಕ ಶವಪರೀಕ್ಷೆಗಾಗಿ ಮಿಮ್ಸ್ ಆಸ್ಪತ್ರೆಯ ಶವಾಗಾರಕ್ಕೆ ಕೊಂಡೊಯ್ಯಲಾಯಿತು.

ಪೂರ್ವ ಹಾಗೂ ಪಶ್ಚಿಮ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಶಕ್ತಿ ಯೋಜನೆಯಿಂದ ವ್ಯಾಪಾರ ಕುಸಿತ

ರಾಜ್ಯ ಸರ್ಕಾರ ಶಕ್ತಿ ಯೋಜನೆಯಡಿ ಫ್ರೀ-ಬಸ್ ಬಿಟ್ಟಿರುವುದದರಿಂದ ವ್ಯಾಪಾರ ಕುಸಿತವಾಗಿದೆ. ಇದರಿಂದ ಮಾಡಿದ ಸಾಲ ತೀರಿಸಲಾಗುತ್ತಿಲ್ಲ. ಖಾಸಗಿ ಫೈನಾನ್ಸ್‌ನವರು ಸಾಲ ಕಟ್ಟಿಲ್ಲವೆಂದರೆ ಮನೆ ಬಳಿ ಬರುತ್ತಾರೆ. ಸಾಲದ ಕಿರುಕುಳದಿಂದ ಮನನೊಂದು ಪತ್ನಿ ಮತ್ತು ಮಗನನ್ನು ಸಾಯಿಸಿರುವುದಾಗಿ ಡೆತ್‌ನೋಟ್‌ನಲ್ಲಿ ಬರೆದಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ನನ್ನ ತಮ್ಮ ನನ್ನ ಬಳಿ ಏನೂ ಹೇಳಿಕೊಂಡಿರಲಿಲ್ಲ. ಒಂದು ತಿಂಗಳ ಹಿಂದಷ್ಟೇ ಮಗನನ್ನು ಮದುವೆ ಮಾಡಿದ್ದರು. ಆ ವೇಳೆ ಹಣಕಾಸು ಸಹಾಯ ಬೇಕಾ ಎಂದು ಕೇಳಿದ್ದೆ. ಹಣದ ಸಹಾಯ ಏನೂ ಬೇಡ. ಹಣ ಅಡ್ಜೆಸ್ಟ್ ಆಗಿದೆ ಎಂದಿದ್ದ. ಆಗ ನಾನು ಬಡ್ಡಿಗೆ ಸಾಲ ಮಾಡಬೇಡ ಎಂದಿದ್ದೆ. ಅದಕ್ಕವನು ಹಣ ಬೇಕಿದ್ದರೆ ಕೇಳ್ತೇನೆ ಎಂದಿದ್ದ. ಸಂತೋಷ್ ಕೂಡ ಅಪ್ಪನೊಂದಿಗೆ ಅಂಗಡಿ ನೋಡಿಕೊಳ್ಳುತ್ತಿದ್ದ. ಈಗಿನ ದೃಶ್ಯಗಳನ್ನು ನೋಡಿ ನಮಗೆ ಆಘಾತ ಉಂಟಾಗಿದೆ.

- ವೆಂಕಟರಾಮು, ಮೃತನ ಸಹೋದರ

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

30 ನಿರುದ್ಯೋಗಿಗಳಿಗೆ ವಂಚಿಸಿದ ತಂದೆ-ಮಗಳ ಸೆರೆ
ವೈಯಕ್ತಿಕ ದ್ವೇಷದಿಂದ ಕ್ರಿಮಿನಲ್‌ ಕೇಸ್‌ಕಾನೂನು ಪ್ರಕ್ರಿಯೆಯ ದುರ್ಬಳಕೆ: ಹೈ