ಜೈಲಿನಲ್ಲಿ ರಾಜಾತಿಥ್ಯ ಪ್ರಕರಣದ ಹಿನ್ನೆಲೆ : ಬಳ್ಳಾರಿ ಜೈಲಿಗೆ ಇಂದು ದರ್ಶನ್‌ ಸ್ಥಳಾಂತರ?

KannadaprabhaNewsNetwork | Updated : Aug 29 2024, 04:42 AM IST

ಸಾರಾಂಶ

ಜೈಲಿನಲ್ಲಿ ರಾಜಾತಿಥ್ಯ ಪ್ರಕರಣದ ತನಿಖೆ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬೇರೆಡೆಗೆ ನಟ ದರ್ಶನ್‌ ಹಾಗೂ ಅವರ 9 ಮಂದಿ ಆಪ್ತರನ್ನು ಸ್ಥಳಾಂತರಿಸುವ ಪ್ರಕ್ರಿಯೆಗೆ ತಾಂತ್ರಿಕ ತೊಡಕು ಎದುರಾಗಿದೆ.

 ಬೆಂಗಳೂರು :  ಜೈಲಿನಲ್ಲಿ ರಾಜಾತಿಥ್ಯ ಪ್ರಕರಣದ ತನಿಖೆ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬೇರೆಡೆಗೆ ನಟ ದರ್ಶನ್‌ ಹಾಗೂ ಅವರ 9 ಮಂದಿ ಆಪ್ತರನ್ನು ಸ್ಥಳಾಂತರಿಸುವ ಪ್ರಕ್ರಿಯೆಗೆ ತಾಂತ್ರಿಕ ತೊಡಕು ಎದುರಾಗಿದೆ.

ಈ ಕಾರಣಕ್ಕೆ ದರ್ಶನ್ ಅವರ ಜೈಲು ಸ್ಥಳಾಂತರ ಬುಧವಾರ ವಿಳಂಬವಾಗಿದ್ದು, ಅವರನ್ನು ಗುರುವಾರ ಮಧ್ಯಾಹ್ನ ಬಳಿಕ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಸಾಗಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ಹೇಳಿವೆ.

ರಾಜಾತಿಥ್ಯ ಪ್ರಕರಣ ಹಿನ್ನೆಲೆಯಲ್ಲಿ ಬಳ್ಳಾರಿ ಸೆಂಟ್ರಲ್ ಜೈಲಿಗೆ ದರ್ಶನ್ ಹಾಗೂ ಅವರ 9 ಮಂದಿ ಆಪ್ತರನ್ನು ಬೇರೆ ಜೈಲುಗಳಿಗೆ ಸ್ಥಳಾಂತರಿಸಲು ನ್ಯಾಯಾಲಯದ ಅನುಮತಿಯನ್ನು ಕಾರಾಗೃಹ ಅಧಿಕಾರಿಗಳು ಪಡೆದಿದ್ದಾರೆ. ಆದರೆ ಇದೇ ಪ್ರಕರಣ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ದರ್ಶನ್ ವಿರುದ್ಧ ಎರಡು ಪ್ರತ್ಯೇಕ ಎಫ್‌ಐಆರ್‌ಗಳು ದಾಖಲಾಗಿವೆ. ಈ ಪ್ರಕರಣದ ತನಿಖೆಯನ್ನು ಆಗ್ನೇಯ ವಿಭಾಗದ ಪೊಲೀಸರು ಬಿರುಸಿನಿಂದ ನಡೆಸಿದ್ದಾರೆ.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ನಟ ದರ್ಶನ್ ಗ್ಯಾಂಗ್ ಅನ್ನು ಬೇರೆ ಜೈಲುಗಳಿಗೆ ಸ್ಥಳಾಂತರಿಸುವ ಸಂಬಂಧ ನ್ಯಾಯಾಲಯದ ಆದೇಶವನ್ನು ಅಧಿಕೃತವಾಗಿ ಬುಧವಾರ ಬೆಳಗ್ಗೆ ಸ್ವೀಕರಿಸಲಾಯಿತು. ಅಲ್ಲದೆ ವಿಶೇಷ ಸೌಲಭ್ಯ ಪಡೆದ ಪ್ರಕರಣದ ಕುರಿತು ಪರಪ್ಪನ ಅಗ್ರಹಾರ ಪೊಲೀಸರ ಮಹಜರ್ ಹಾಗೂ ವಿಚಾರಣೆ ಬಾಕಿ ಇತ್ತು. ಹೀಗಾಗಿ ಆರೋಪಿಗಳನ್ನು ಬೇರೆ ಜೈಲಿಗೆ ಸ್ಥಳಾಂತರಿಸಲು ತಡವಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈಗಾಗಲೇ ದರ್ಶನ್ ಗ್ಯಾಂಗ್ ಸ್ಥಳಾಂತರ ಬಗ್ಗೆ ಶಿವಮೊಗ್ಗ, ಬಳ್ಳಾರಿ, ಬೆಳಗಾವಿ, ಕಲುಬರಗಿ, ಧಾರವಾಡ, ವಿಜಯಪುರ ಹಾಗೂ ಮೈಸೂರು ಸೆಂಟ್ರಲ್ ಜೈಲುಗಳ ಮುಖ್ಯ ಅಧೀಕ್ಷಕರಿಗೆ ಮಾಹಿತಿ ನೀಡಲಾಗಿದೆ. ಆರೋಪಿಗಳಿಗೆ ಸೂಕ್ತ ಭದ್ರತಾ ವ್ಯವಸ್ಥೆಯನ್ನು ಆಯಾ ಜೈಲಿನ ಅಧಿಕಾರಿಗಳು ನೀಡಲಿದ್ದಾರೆ. ಜೈಲಿಗೆ ಕರೆದೊಯ್ಯುವಾಗ ಸೂಕ್ತ ಭದ್ರತೆ ಕಲ್ಪಿಸುವಂತೆ ಸಹ ಬೆಂಗಳೂರು ನಗರ ಪೊಲೀಸರಿಗೆ ಮನವಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜೈಲಿನಲ್ಲಿ ಸಿಗರೆಟ್ ಸೇದಿದ ಹಾಗೂ ಮೊಬೈಲ್‌ನಲ್ಲಿ ವಿಡಿಯೋ ಕಾಲ್ ಮಾಡಿದ ಸ್ಥಳದಲ್ಲಿ ಪೊಲೀಸರು ಮಹಜರ್ ನಡೆಸಬೇಕಿತ್ತು. ಅಲ್ಲದೆ ಜೈಲಿನಲ್ಲೇ ಆರೋಪಿಗಳಾದ ದರ್ಶನ್‌, ಅವರ ಆಪ್ತ ನಾಗರಾಜ್‌, ರೌಡಿಗಳಾದ ನಾಗರಾಜ ಅಲಿಯಾಸ್ ವಿಲ್ಸನ್ ಗಾರ್ಡನ್ ನಾಗ, ಶ್ರೀನಿವಾಸ ಅಲಿಯಾಸ್ ಕುಳ್ಳ ಸೀನ ಹಾಗೂ ಧರ್ಮನನ್ನು ವಿಚಾರಣೆ ನಡೆಸುತ್ತಿದ್ದಾರೆ. ಈ ವಿಚಾರಣೆ ಮುಗಿದ ನಂತರ ಅವರನ್ನು ಸ್ಥಳಾಂತರಿಸಲಾಗುತ್ತದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

Share this article