ಮನೆ ಎದುರು, ಪಾರ್ಕಿಂಗ್ ಸ್ಥಳಗಳಲ್ಲಿ ನಿಲುಗಡೆ ಮಾಡಿದ ದ್ವಿಚಕ್ರ ವಾಹನಗಳನ್ನು ಕಳವು ಮಾರುತ್ತಿದ್ದ ಇಬ್ಬರ ಬಂಧನ

KannadaprabhaNewsNetwork |  
Published : Aug 17, 2024, 01:48 AM ISTUpdated : Aug 17, 2024, 04:53 AM IST
ಬೇಡಿ | Kannada Prabha

ಸಾರಾಂಶ

ಬೈಕ್‌ ಕದ್ದು ತಮಿಳುನಾಡಿನಲ್ಲಿ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. 32 ಬೈಕ್‌ಗಳನ್ನು ಜಪ್ತಿ ಮಾಡಲಾಗಿದೆ.

 ಬೆಂಗಳೂರು :  ಮನೆ ಎದುರು, ಪಾರ್ಕಿಂಗ್ ಸ್ಥಳಗಳಲ್ಲಿ ನಿಲುಗಡೆ ಮಾಡಿದ ದ್ವಿಚಕ್ರ ವಾಹನಗಳನ್ನು ಕಳವು ಮಾಡಿ ತಮಿಳುನಾಡಿನಲ್ಲಿ ಮಾರಾಟ ಮಾಡುತ್ತಿದ್ದ ಇಬ್ಬರು ಕಳ್ಳರನ್ನು ಜೆ.ಪಿ.ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಜೆ.ಪಿ.ನಗರ 4ನೇ ಹಂತದ ಡಾಲರ್ಸ್‌ ಕಾಲೋನಿ ನಿವಾಸಿ ಕಿಶೋರ್‌(19) ಮತ್ತು ರಾಗಿಗುಡ್ಡ ನಿವಾಸಿ ವಿನಯ್‌ ಅಲಿಯಾಸ್‌ ಕುಳ್ಳ(20) ಬಂಧಿತರು. ಆರೋಪಿಗಳಿಂದ ₹22 ಲಕ್ಷ ಮೌಲ್ಯದ 32 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ವ್ಯಕ್ತಿಯೊಬ್ಬರು ಜೆ.ಪಿನಗರದ ಈಸ್ಟ್‌ ಎಂಡ್‌ ರಸ್ತೆಯಲ್ಲಿ ನಿಲುಗಡೆ ಮಾಡಿದ್ದ ದ್ವಿಚಕ್ರ ವಾಹನ ಕಳ್ಳತನವಾಗಿತ್ತು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ತನಿಖೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣದ ಸಂಬಂಧ ತನಿಖೆ ಮಾಡುವಾಗ ಬಾತ್ಮೀದಾರರು ನೀಡಿದ ಮಾಹಿತಿ ಮೇರೆಗೆ ರಾಗಿ ಗುಡ್ಡದ ಕ್ವಾಟ್ರಸ್‌ ಬಳಿ ಇಬ್ಬರನ್ನು ದ್ವಿಚಕ್ರ ವಾಹನ ಸಹಿತ ವಶಕ್ಕೆ ಪಡೆದು ವಿಚಾರಣೆಗೆ ಮಾಡಿದಾಗ ತಾವೇ ಕಳ್ಳತನ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಹೆಚ್ಚಿನ ವಿಚಾರಣೆ ವೇಳೆ ಇದೇ ರೀತಿ ಹಲವು ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿರುವುದಾಗಿ ಬಾಯ್ಬಿಟ್ಟಿದ್ದಾರೆ.

ತಮಿಳುನಾಡಿನಲ್ಲಿ ಮಾರಾಟ:

ನಗರದ ವಿವಿಧೆಡೆ ರಸ್ತೆ ಬದಿ, ಪಾರ್ಕಿಂಗ್‌ ಸ್ಥಳಗಳು, ಮನೆ ಎದುರು ನಿಲುಗಡೆ ಮಾಡಿದ ದ್ವಿಚಕ್ರ ವಾಹನಗಳನ್ನು ಗುರಿಯಾಗಿಸಿ ಹ್ಯಾಂಡಲ್ ಲಾಕ್‌ ಮುರಿದು ಕಳವು ಮಾಡುತ್ತಿದ್ದರು. ಕದ್ದ ದ್ವಿಚಕ್ರ ವಾಹನಗಳನ್ನು ತಮಿಳುನಾಡಿನ ವೇಲೂರು ಜಿಲ್ಲೆಯ ವಿವಿಧ ಹಳ್ಳಿಗಳಲ್ಲಿ ಮಾರಾಟ ಮಾಡಿ ಹಣ ಪಡೆದು ಮೋಜು-ಮಸ್ತಿ ಮಾಡುತ್ತಿದ್ದರು. ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ವೇಲೂರು ಜಿಲ್ಲೆಯ ಪೇರಣಂ ಪೆಟ್ಟು ಗ್ರಾಮದ ಖಾಲಿ ಜಾಗದಲ್ಲಿ ನಿಲುಗಡೆ ಮಾಡಿದ್ದ 12 ಹಾಗೂ ವಿವಿಧ ಸ್ಥಳಗಳಲ್ಲಿ ನಿಲುಗಡೆ ಮಾಡಿದ್ದ 19 ಸೇರಿ ಒಟ್ಟು 32 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ.

13 ಪ್ರಕರಣ ಪತ್ತೆ:

ಆರೋಪಿಗಳ ಬಂಧನದಿಂದ ಜೆ.ಪಿ.ನಗರ, 4, ಪುಟ್ಟೇನಹಳ್ಳಿ, ಮಡಿವಾಳ ತಲಾ 2, ಸುದ್ದುಗುಂಟೆಪಾಳ್ಯ, ಬೇಗೂರು, ಸಿದ್ದಾಪುರ, ವಿಲ್ಸನ್‌ಗಾರ್ಡನ್‌, ಮೈಕೋ ಲೇಔಟ್‌ ಠಾಣೆಯಲ್ಲಿ ದಾಖಲಾಗಿದ್ದ ತಲಾ 1 ಸೇರಿ ಒಟ್ಟು 13 ದ್ವಿಚಕ್ರ ವಾಹನ ಕಳವು ಪ್ರಕರಣಗಳು ಪತ್ತೆಯಾಗಿವೆ. ಉಳಿದ 19 ದ್ವಿಚಕ್ರ ವಾಹನಗಳ ಪ್ರಕರಣಗಳ ಬಗ್ಗೆ ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV

Recommended Stories

ರೈತನ ಬ್ಯಾಂಕ್ ಖಾತೆಯಲ್ಲಿದ್ದ ಕೋಟ್ಯಂತರ ರು.ಗೆ ಕದೀಮರಿಂದ ಕನ್ನ..!
ಗ್ರಾಮ ಲೆಕ್ಕಿಗರ ಹುದ್ದೆಗೆ ನಕಲಿ ಅಂಗವಿಕಲ ಪ್ರಮಾಣಪತ್ರ ಸಲ್ಲಿಕೆ...!