ಬೆಂಗಳೂರು : ಅಕ್ರಮವಾಗಿ ಮಾದಕವಸ್ತು ಮಾರಾಟ ದಂಧೆಯಲ್ಲಿ ತೊಡಗಿದ್ದ ಇಬ್ಬರು ವಿದೇಶಿ ಮಹಿಳೆಯರನ್ನು ಈಶಾನ್ಯ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಘಾನಾ ಮೂಲದ ಬೆನಡಿಕ್ಟ್(24) ಮತ್ತು ಲೈಬಿರಿಯಾ ಮೂಲದ ಪ್ರೆಸಿಲ್ಲಾ(28) ಬಂಧಿತರು. ಈ ಇಬ್ಬರಿಂದ 547 ಗ್ರಾಂ ಕೊಕೈನ್, 43 ಗ್ರಾಂ ಅಫಟಮಿನ್, 201 ಗ್ರಾಂ ಕ್ರಿಸ್ಟೆಲ್ಸ್, 40 ಗ್ರಾಂ ಗಾಂಜಾ ಸೇರಿ 831 ಗ್ರಾಂ ಮಾದಕವಸ್ತು ಹಾಗೂ 87 ಸಾವಿರ ರು. ನಗದು ಜಪ್ತಿ ಮಾಡಲಾಗಿದೆ.
ಈಶಾನ್ಯ ವಿಭಾಗದ ಪೊಲೀಸರು ಕಳೆದ ಜುಲೈನಲ್ಲಿ ಯಲಹಂಕ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯ ದೊಡ್ಡಬೆಟ್ಟಹಳ್ಳಿಯಲ್ಲಿ ಇಬ್ಬರು ಘಾನಾ ಪ್ರಜೆಗಳನ್ನು ಬಂಧಿಸಿ, ಸುಮಾರು 70 ಲಕ್ಷ ರು. ಮೌಲ್ಯದ 700 ಗ್ರಾಂ ಎಂಡಿಎಂಎ ಮಾದಕವಸ್ತು ಜಪ್ತಿ ಮಾಡಿದ್ದರು. ಈ ಇಬ್ಬರ ವಿಚಾರಣೆ ವೇಳೆ ಸಿಕ್ಕಿ ಮಾಹಿತಿ ಮೇರೆಗೆ ಮಾದಕವಸ್ತು ಮಾರಾಟ ದಂಧೆಯಲ್ಲಿ ತೊಡಗಿದ್ದ ಇಬ್ಬರು ವಿದೇಶಿ ಮಹಿಳೆಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತನಿಖೆ ವೇಳೆ ಇಬ್ಬರು ಘಾನಾ ಮೂಲದ ಡ್ರಕ್ಸ್ ಪೆಡ್ಲರ್‌ಗಳ ಜತೆಗೆ 9 ಮಂದಿ ವಿದೇಶಿ ಪ್ರಜೆಗಳು ಸಂಪರ್ಕದಲ್ಲಿರುವುದು ಕಂಡು ಬಂದಿದೆ. ಈ ಮಾಹಿತಿ ಮೇರೆಗೆ ಸೆ.3ರಂದು ನಗರದ ಗುಂಜೂರು, ವರ್ತೂರು, ಬೇಗೂರು ಕೊಪ್ಪ ರಸ್ತೆ, ಗಾಂಧೀಪುರ ವೈಟ್ ಫೀಲ್ಡ್, ಕೆ.ಆರ್.ಪುರಂನ ಮಾರಗೊಂಡನಹಳ್ಳಿ, ಈಜಿಪುರ, ಸಂಜಯ ನಗರ, ಎಂ.ಎಸ್.ಪಾಳ್ಯ ಸೇರಿದಂತೆ 7 ಕಡೆಗಳಲ್ಲಿ ದಾಳಿ ನಡೆಸಿ 9 ಮಂದಿ ವಿದೇಶಿ ಪ್ರಜೆಗಳನ್ನು ವಶಕ್ಕೆ ಪಡೆದಿದ್ದರು.
ಇಬ್ಬರು ದಂಧೆಯಲ್ಲಿ ಭಾಗಿ
ಈ 9 ಮಂದಿ ಪೈಕಿ ಘಾನಾ ಮೂಲದ ಬೆನಡಿಕ್ಟ್ ಮತ್ತು ಲೈಬಿರಿಯಾ ಮೂಲದ ಪ್ರೆಸಿಲ್ಲಾ ಮನೆಗಳಲ್ಲಿ 831 ಗ್ರಾಂ ಮಾದಕವಸ್ತು ಪತ್ತೆಯಾಗಿದೆ. ಈ ಇಬ್ಬರು ಬಿಜಿನೆಸ್ ವೀಸಾ ಪಡೆದು ಭಾರತಕ್ಕೆ ಬಂದಿದ್ದು, ವೀಸಾ ಅವಧಿ ಮುಗಿದಿದ್ದರೂ ಅಕ್ರಮವಾಗಿ ನಗರದಲ್ಲಿ ನೆಲೆಸಿರುವುದು ಕಂಡು ಬಂದಿದೆ. ಸುಲಭವಾಗಿ ಹಣ ಸಂಪಾದಿಸುವ ಉದ್ದೇಶದಿಂದ ಮಾದಕವಸ್ತು ಮಾರಾಟ ದಂಧೆಯಲ್ಲಿ ತೊಡಗಿರುವುದು ಬೆಳಕಿಗೆ ಬಂದಿದೆ. ಈ ಇಬ್ಬರನ್ನು ಬಂಧಿಸಿ ಎನ್‌ಡಿಪಿಎಸ್ ಕಾಯ್ದೆ ಹಾಗೂ ವಿದೇಶಿಗರ ಕಾಯ್ದೆಯಡಿ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಸ್ವದೇಶಕ್ಕೆ ಕಳುಹಿಸಲು ಕ್ರಮ:
ದಾಳಿ ವೇಳೆ ಪತ್ತೆಯಾದ ಉಳಿದ 7 ಮಂದಿ ವಿದೇಶಿ ಪ್ರಜೆಗಳು ವಿವಿಧ ಕಾರಣಗಳಿಗೆ ವೀಸಾ ಪಡೆದು ಭಾರತಕ್ಕೆ ಬಂದಿದ್ದು, ವೀಸಾ ಅವಧಿ ಮುಗಿದಿದ್ದರೂ ಅಕ್ರಮವಾಗಿ ನಗರದಲ್ಲಿ ನೆಲೆಸಿರುವುದು ಕಂಡು ಬಂದಿದೆ. ಹೀಗಾಗಿ ಅವರನ್ನು ವಶಕ್ಕೆ ಪಡೆದು ವಿದೇಶಿಗರ ಪ್ರಾದೇಶಿಕ ನೋಂದಣಿ ಕಚೇರಿ(ಎಫ್‌ಆರ್‌ಆರ್‌ಒ) ಅಧಿಕಾರಿಗಳ ಎದುರು ಹಾಜರುಪಡಿಸಿ, ಸ್ವದೇಶಕ್ಕೆ ಕಳುಹಿಸಲು ಕ್ರಮ ವಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.