ಕನ್ನಡಪ್ರಭ ವಾರ್ತೆ ಮಂಡ್ಯ
ಮಳವಳ್ಳಿ ಹಾಗೂ ಮದ್ದೂರಿನಲ್ಲಿ ನಡೆದ ಎರಡು ಪ್ರತ್ಯೇಕ ಕೊಲೆ ಪ್ರಕರಣದಲ್ಲಿ ಒಟ್ಟು 11 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು.ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮಳವಳ್ಳಿ ತಾಲೂಕು ಮಾಗನೂರು ಗೇಟ್ ಬಳಿ ಪಟ್ಟಣದ ಎನ್‌ಇಎಸ್ ಬಡಾವಣೆಯ ನಿವಾಸಿ ಯೋಗೇಶ್ ಎಂಬಾತನನ್ನು ಕಳೆದ ಆ.6 ಬುಧವಾರ ಮಾರಕಾಸ್ತ್ರಗಳಿಂದ ಇರಿದು ಹತ್ಯೆ ಮಾಡಲಾಗಿತ್ತು.
ಆರೋಪಿಗಳ ಪತ್ತೆಗೆ ಎರಡು ತಂಡ ರಚಿಸಲಾಗಿತ್ತು. ಈ ತಂಡಗಳಲ್ಲಿ ಒಂದು ತಂಡ ಬೆಂಗಳೂರಿನಲ್ಲಿ ಪ್ರಮುಖ ಆರೋಪಿ ಮಳವಳ್ಳಿ ವಡ್ಡರಕಾಲೋನಿಯ ಮನೋಜ್ ಪಟೇಲ್ (23), ಎನ್‌ಇಎಸ್ ಬಡಾವಣೆಯ ಜೆ.ನಂದನ್ (22) ಅವರನ್ನು ಬಂಧಿಸಲಾಗಿದೆ. ಮತ್ತೊಂದು ತಂಡ ಮೈಸೂರಿನ ಜಿ.ಆರ್. ಗಿರೀಶ್ (24), ಎನ್. ಪ್ರೀತಮ್ (18) ಎಂಬುವರನ್ನು ಮೈಸೂರಿನಲ್ಲಿ ಬಂಧಿಸಲಾಗಿದೆ ಎಂದು ವಿವರಿಸಿದರು.ಚಾಲಕ ಯೋಗೇಶ್ ಹತ್ಯೆ:
ಹತ್ಯೆಯಾದ ಯೋಗೇಶ್ ಚಾಲಕನಾಗಿ ಕೆಲಸ ಮಾಡುತ್ತಿದ್ದನು. ಆರೋಪಿಗಳಲ್ಲೊಬ್ಬನಾದ ಮನೋಜ್ ಜೊತೆಗೆ ಜಗಳವಾಡಿಕೊಂಡು ಹಲ್ಲೆ ನಡೆಸಿದ್ದ. ಹಾಗಾಗ್ಗೆ ಆತನ ಮೇಲೆ ಹಲ್ಲೆ ನಡೆಸುತ್ತಲೂ ಇದ್ದ. ಒಮ್ಮೆ ಮುತ್ತತ್ತಿಯಲ್ಲಿ ಗಲಾಟೆ ನಡೆದು ಮನೋಜ್ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದನು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ನಂತರ ಆತ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಎಂದರು.ಯೋಗೇಶ್ ಜಾಮೀನಿನ ಮೇಲೆ ಹೊರಗೆ ಬಂದಿರುವುದು ಆರೋಪಿ ಮನೋಜ್‌ಗೆ ಸಹಿಸಲಾಗುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಯೋಗೇಶ್‌ನ ಹತ್ಯೆಗೆ ಸಂಚು ರೂಪಿಸಿದ್ದರು. ಮಾಗನೂರು ಗೇಟ್ ಬಳಿ ಯೋಗೇಶ್ ಮತ್ತು ಈತನ ಸ್ನೇಹಿತ ವಿಶ್ವಾಸ್ ಕುಡಿಯುತ್ತಾ ಕುಳಿತಿದ್ದ ವೇಳೆ ಸ್ಥಳಕ್ಕೆ ಧಾವಿಸಿದ ನಾಲ್ವರು ಆರೋಪಿಗಳು ಯೋಗೇಶ್‌ನ ಮೇಲೆ ಮಾರಕಾಸ್ತ್ರಗಳಿಂದ ತೀವ್ರವಾಗಿ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಘಟನೆಯಲ್ಲಿ ಯೋಗೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದನು.
ಹಳೇ ದ್ವೇಷದಿಂದ ಹತ್ಯೆ:ಮದ್ದೂರು ತಾಲೂಕು ಸ್ಕಂದ ಬಡಾವಣೆ ಬಳಿ ವಡ್ಡರದೊಡ್ಡಿ ಗ್ರಾಮದ ಪಿ.ಎನ್.ಅರುಣನನ್ನು ನಿಡಘಟ್ಟ ಗ್ರಾಮದ ಎನ್.ಎಸ್. ವಿಕಾಸ್ (31), ಹನುಮಂತಪುರದ ಎಚ್.ಆರ್.ಭರತ್‌ಗೌಡ (23), ಹನುಮಂತಪುರದ ಎಚ್.ಪಿ.ಹೇಮಂತ್ (23), ಯರಗನಹಳ್ಳಿಯ ವೈ.ಕೆ.ಚಂದನ್ (25), ಹೆಮ್ಮನಹಳ್ಳಿಯ ಎಚ್.ಎಸ್. ಕುಮಾರ (23), ಹನುಮಂತಪುರದ ಎಚ್.ಆರ್. ನಿತ್ಯಾನಂತ (25) ಹಾಗೂ ಹೆಮ್ಮನಹಳ್ಳಿಯ ಎಚ್.ಎಸ್.ಶ್ರೀನಿವಾಸ್ (21) ಎಂಬುವರೇ ಬಂಧಿತ ಆರೋಪಿಗಳಾಗಿದ್ದಾರೆ.
ವಡ್ಡರದೊಡ್ಡಿ ಗ್ರಾಮದ ಸೂರ್ಯ ಹಾಗೂ ವಿಕಾಸ್ ನಡುವೆ ಗಲಾಟೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ಕಳೆದ ಶನಿವಾರ ಅರುಣ್, ಸೂರ್‍ಯ ಇತರರು ಬಾರೊಂದರಲ್ಲಿ ಇದ್ದರು. ಇದನ್ನು ಕಂಡ ಆರೋಪಿಗಳು ಅವರ ಬಳಿ ಬಂದು ಜಗಳ ಮಾಡಿದ್ದರು. ಅರುಣ ಜಗಳ ಬಿಡಿಸಿ ಕಳುಹಿಸಿದ್ದನು.ನಂತರ ಮತ್ತೆ ಹಿಂದಿನಿಂದ ಹೋದ ಆರೋಪಿಗಳು ಸೂರ್ಯನನ್ನ ಬಿಟ್ಟು ಅರುಣನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದರು. ಘಟನೆಯಲ್ಲಿ ಆರುಣ್ ಸಾವನ್ನಪ್ಪಿದ್ದನು. ಈ ಸಂಬಂಧ ಕೆಸ್ತೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು 7 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಓರ್ವ ನಾಪತ್ತೆಯಾಗಿದ್ದಾನೆ ಎಂದು ವಿವರಿಸಿದರು.
ಎರಡೂ ಪ್ರಕರಣಗಳನ್ನು ಭೇದಿಸಿ ಆರೋಪಿಗಳನ್ನು ಬಂಧಿಸಿದ ಅಧಿಕಾರಿಗಳನ್ನು ಎಸ್ಪಿ ಅಭಿನಂದಿಸಿದರು.