ನಿರ್ಮಾಣ ಹಂತದ ಕಬ್ಬಿಣ ಸರಳು ಬಿದ್ದು ಇಬ್ಬರು ಕಾರ್ಮಿಕರ ಸಾವು; ಐದು ಜನರ ಸ್ಥಿತಿ ಗಂಭೀರ!

KannadaprabhaNewsNetwork | Published : Jan 20, 2024 2:01 AM

ಸಾರಾಂಶ

ನಿರ್ಮಾಣ ಹಂತದ ಕಟ್ಟಡ ಬಿದ್ದು ಇಬ್ಬರು ಕಾರ್ಮಿಕರ ಸಾವು; ಐದು ಜನರ ಸ್ಥಿತಿ ಗಂಭೀರ! 16 ಕಾರ್ಮಿಕರು ಸಿಲುಕಿರುವ ಸಾಧ್ಯತೆ. ಸೆಂಟ್ ಅಗ್ನೇಸ್ ಶಾಲಾ ಕಟ್ಟಡ ನಿರ್ಮಾಣ ವೇಳೆ ಘಟನೆ

16 ಕಾರ್ಮಿಕರು ಸಿಲುಕಿರುವ ಸಾಧ್ಯತೆ । ಸೆಂಟ್ ಅಗ್ನೇಸ್ ಶಾಲಾ ಕಟ್ಟಡ ನಿರ್ಮಾಣ ವೇಳೆ ಘಟನೆಕನ್ನಡಪ್ರಭ ವಾರ್ತೆ ಆನೇಕಲ್‌

ನಿರ್ಮಾಣ ಹಂತದ ಶಾಲಾ ಕಟ್ಟಡ ಕುಸಿದು ಇಬ್ಬರು ಕಾರ್ಮಿಕರು ಸ್ಥಳದಲ್ಲೆ ಮೃತಪಟ್ಟು ಐವರು ಗಂಭೀರವಾಗಿ ಗಾಯಗೊಂಡು ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿರುವ ಹೃದಯ ವಿದ್ರಾವಕ ಘಟನೆ ಆನೇಕಲ್ ಠಾಣಾ ವ್ಯಾಪ್ತಿಯ ಬ್ಯಾಡರ ಹಳ್ಳಿಯಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ.

ಕಲ್ಕತ್ತಾ ಹಾಗೂ ಜಾರ್ಖಂಡ್ ಮೂಲದ ಮಿನರ್ ಬಿಶ್ವಾಸ್(35) ಶಾಹಿದ್(38) ಮೃತಪಟ್ಟ ನತದೃಷ್ಟರು. ಇನ್ನೂ ಐದು ಕಾರ್ಮಿಕರು ಕಬ್ಬಿಣದ ಸರಳು, ಸಿಮೆಂಟ್ ಕಾಂಕ್ರಿಟ್ ನಡುವೆ ಸಿಲುಕಿರುವ ಸಾಧ್ಯತೆಯಿದೆ.

ಸೆಂಟ್ ಅಗ್ನೇಸ್ ಎಂಬ ಶಾಲಾ ಕಟ್ಟಡ ನಿರ್ಮಾಣವಾಗುತ್ತಿದ್ದು, ಎರಡನೆಯ ಅಂತಸ್ತು ಕಟ್ಟಡ ಅಂದಾಜು 20 ಅಡಿ ಎತ್ತರದ ಪೋರ್ಟಿಕೋಗೆ ಕಬ್ಬಿಣ ಸೆಂಟ್ರಿಂಗ್ ಕಾರ್ಯ ಮುಗಿದಿತ್ತು. ಇಂದು ಬೆಳಿಗ್ಗೆ ಕಾಂಕ್ರಿಟ್ ಮಿಕ್ಸ್ ತುಂಬುವಾಗ ಒಂದೇ ಕಡೆ ತೂಕ ಹೆಚ್ಚಾಗಿ ಕುಸಿದಿರಬಹುದೆಂದು ಅಂದಾಜಿಸಲಾಗಿದೆ.

ಏಕಾ ಏಕಿ ಕುಸಿತವಾದಾಗ ಕಾರ್ಮಿಕರು ಕಿರುಚಿಕೊಂ ಡು ಕಾಂಕ್ರೀಟ್ ಮತ್ತು ಕಬ್ಬಿಣದ ಸರಳುಗಳ ಸಹಿತ ನೆಲಕ್ಕೆ ಬಿದ್ದರು. ಕೂಡಲೇ ಅಗ್ನಿಶಾಮಕ ದಳ ಹಾಗೂ ಪೊಲೀಸರ ರಿಗೆ ಕರೆ ಮಾಡಿ ತಿಳಿಸಿದರು. ನೂರಾರು ಕಾರ್ಮಿಕರು ಇಲ್ಲೇ ಕೆಲಸ ಮಾಡುತ್ತಿದ್ದು ಜೆಸಿಬಿ ಮೂಲಕ ಡೆಬ್ರಿಸ್ ತೆರವು ಮಾಡಿ ಹಲವರನ್ನು ರಕ್ಷಿಸಿದರು. ತಜ್ಞರು ಬಂದು ಕಬ್ಬಿಣವನ್ನು ಕತ್ತರಿಸಿ ಗಾಯಾಳುಗಳನ್ನು ರಕ್ಷಿಸುವ ಕೆಲಸಕ್ಕೆ ಮುಂದಾದರು.

ಕಟ್ಟಡದ ಅವಶೇಷಗಳ ಅಡಿಯಲ್ಲಿ ಸುಮಾರು 16 ಮಂದಿ ಕಾರ್ಮಿಕರು ಸಿಲುಕಿರುವ ಸಾಧ್ಯತೆ ಇದ್ದು, ಗಾಯಾಳುಗಳನ್ನ ಆನೇಕಲ್ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಮೂವರನ್ನು ಬೆಂಗಳೂರಿನ ಆಸ್ಪತ್ರೆಗೆ ಕಳಿಸಲಾಗಿದೆ ಎಂದು ವೈದ್ಯರು ತಿಳಿಸಿದರು.

ಕಟ್ಟಡದ ಅವಶೇಷಗಳ ತೆರವು ಕಾರ್ಯಾಚರಣೆ ಮುಂದುವರಿದಿದ್ದು, ಮೃತರು ಹಾಗೂ ಗಾಯಾಳುಗಳ ಕುಟುಂಬದವರ ರೋಧನೆ ಮುಗಿಲು ಮುಟ್ಟಿತ್ತು. ಶವಗಳನ್ನ ಪೊಸ್ಟ್‌ಮಾರ್ಟಂಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಎಸ್ ಪಿ ಮಲ್ಲಿಕಾರ್ಜುನ್ ಬಾಲದಂಡಿ ಮಾಹಿತಿ ನೀಡಿ, ಕ್ರಿಶ್ಚಿಯನ್ ಕಾಂಗ್ರಿಗೇಶನ್ ಎಂಬ ಸಂಸ್ಥೆಗೆ ಸೇರಿದ ಶಾಲಾ ಕಟ್ಟಡ ಕಾಮಗಾರಿಯನ್ನ ಹೊಸಪೇಟೆ ಮೂಲದ ಪ್ರತಾಪ್ ಬಿಲ್ಡರ್ ನಡೆಸುತ್ತಿದ್ದರು. ಕಬ್ಬಿಣದ ಸರಳುಗಳ ಸೆಂಟ್ರಿಂಗ್ ಹಾಕುವಾಗ ಇನ್ನಷ್ಟು ಎಚ್ಚರಿಕೆ ವಹಿಸಬಹುದಾಗಿತ್ತು ಎಂದರು.

ಕಟ್ಟಡ ಮಾಲೀಕ, ಗುತ್ತಿಗೆದಾರ, ಉಸ್ತುವಾರಿ ವ್ಯಕ್ತಿ ಇನ್ನೂ ಕೆಲವರನ್ನು ವಶಕ್ಕೆ ಪಡೆದಿದ್ದು ವಿಚಾರಣೆ ಮಾಡಲಾಗುತ್ತಿದೆ ಎಂದು ಅಡಿಷನಲ್ ಎಸ್ಪಿ ಪುರುಷೋತ್ತಮ್ ತಿಳಿಸಿದರು.

ಘಟನಾ ಸ್ಥಳಕ್ಕೆ ಸಂಸದ ಡಿ.ಕೆ. ಸುರೇಶ್ ಹಾಗೂ ಶಾಸಕ ಬಿ. ಶಿವಣ್ಣ ಧಾವಿಸಿ ಬಂದು ಕಾರ್ಮಿಕರ ಕಷ್ಟಕ್ಕೆ ಸ್ಪಂದಿಸಿದರು. ಆಸ್ಪತ್ರೆಗೆ ದಾಖಲಿಸಲು ನೆರವು ನೀಡಿದ ಅವರು ಮೃತರ ಕುಟುಂಬಕ್ಕೆ ಸಾಂತ್ವಾನ ತಿಳಿಸಿದರು.

Share this article