ಬೆಂಗಳೂರು : ಹೋಟೆಲ್ ಎದುರಿನ ರಸ್ತೆ ಬದಿ ನಿಲುಗಡೆ ಮಾಡಿದ್ದ ಕಾರೊಂದರ ನಾಲ್ಕು ಚಕ್ರಗಳನ್ನು ದುಷ್ಕರ್ಮಿಗಳು ಬಿಚ್ಚಿ ಪರಾರಿ ಆಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಾ.15ರಂದು ತಡರಾತ್ರಿ ಸುಮಾರು 12ಕ್ಕೆ ಗಾಂಧಿನಗರ 2ನೇ ಮುಖ್ಯರಸ್ತೆಯ ವನುಷ ಹೋಟೆಲ್ ಎದುರು ಈ ಘಟನೆ ನಡೆದಿದೆ. ಹುಬ್ಬಳ್ಳಿ ನವನಗರ ನಿವಾಸಿ ಗೋವಿಂದಪ್ಪ ನೀಡಿದ ದೂರಿನ ಮೇರೆಗೆ ಉಪ್ಪಾರಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ವೈರಲ್ ವಿಡಿಯೋ ಆಧರಿಸಿ ದುಷ್ಕರ್ಮಿಗಳ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ವಿವರ:
ದೂರುದಾರ ಗೋವಿಂದಪ್ಪ ಕಾರ್ಯ ನಿಮಿತ್ತ ಸ್ನೇಹಿತ ರೂಪ್‌ಸಿಂಗ್ ಲೋನಾರಿ ಜತೆಗೆ ಮಾ.14ರ ರಾತ್ರಿ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಬಸ್‌ನಲ್ಲಿ ಬಂದಿದ್ದಾರೆ. ಮಾರನೇ ದಿನ ಬೆಂಗಳೂರಿನಲ್ಲಿ ಕಾರ್ಯ ನಿಮಿತ್ತ ಸುತ್ತಾಡಲು ತಮ್ಮ ಸಂಬಂಧಿಕ ಸಚಿನ್ ಮಂಟನವರ್ ಅವರ ಕ್ರೇಟಾ ಕಾರನ್ನು ಪಡೆದುಕೊಂಡಿದ್ದಾರೆ. ಬಳಿಕ ನಗರದಲ್ಲಿ ಸುತ್ತಾಡಿ ರಾತ್ರಿ ಗಾಂಧಿನಗರದ 2ನೇ ಮುಖ್ಯರಸ್ತೆಯ ವನುಷ ಹೋಟೆಲ್‌ನಲ್ಲಿ ರೂಮ್ ಬಾಡಿಗೆ ಪಡೆದು ತಂಗಿದ್ದಾರೆ.
ಈ ವೇಳೆ ಕಾರನ್ನು ಹೋಟೆಲ್ ಎದುರಿನ ರಸ್ತೆ ಬದಿ ನಿಲುಗಡೆ ಮಾಡಿದ್ದಾರೆ. ಮಾರನೇ ದಿನ ಎದ್ದು ನೋಡಿದಾಗ ದುಷ್ಕರ್ಮಿಗಳು ಕಾರಿನ ನಾಲ್ಕು ಚಕ್ರಗಳನ್ನು ಬಿಚ್ಚಿ ಕಳವು ಮಾಡಿ ಪರಾರಿ ಆಗಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಉಪ್ಪಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾರಿನಲ್ಲಿ ಬಂದು ಚಕ್ರ ಕಳವು!
ಮೂವರು ದುಷ್ಕರ್ಮಿಗಳು ಕಾರೊಂದರಲ್ಲಿ ಗಾಂಧಿನಗರದ 2ನೇ ಮುಖ್ಯರಸ್ತೆಯ ವನುಷ ಹೋಟೆಲ್ ಬಳಿಗೆ ಬಂದಿದ್ದಾರೆ. ಬಳಿಕ ತಮ್ಮ ಕಾರನ್ನು ಸ್ವಲ್ಪ ಮುಂದಕ್ಕೆ ನಿಲುಗಡೆ ಮಾಡಿದ್ದಾರೆ. ನಂತರ ಇಬ್ಬರು ದುಷ್ಕರ್ಮಿಗಳು ಕಾರಿನಿಂದ ಕೆಳಗೆ ಇಳಿದು ಕ್ರೇಟಾ ಕಾರಿನ ಕೆಳ ಭಾಗಕ್ಕೆ ಜಾಕ್ ಹಾಕಿ ಮೇಲಕ್ಕೆ ಎತ್ತಿ ನಾಲ್ಕು ಚಕ್ರಗಳನ್ನು ಕೆಲವೇ ನಿಮಿಷಗಳಲ್ಲಿ ಬಿಚ್ಚಿದ್ದಾರೆ. ತರುವಾಯ ಆ ನಾಲ್ಕು ಚಕ್ರಗಳನ್ನು ತಮ್ಮ ಕಾರಿನಲ್ಲಿ ಹಾಕಿಕೊಂಡು ಪರಾರಿಯಾಗಿದ್ದಾರೆ. ಕಾರಿನ ಚಕ್ರ ಕಳುವಿನ ದೃಶ್ಯಾವಳಿ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.