ವಾಲ್ಮೀಕಿ : ಚಂದ್ರಶೇಖರ್‌ ಆತ್ಮಹತ್ಯೆಗೆ ಎಂಡಿ ಕಾರಣ! ಕೇಸಲ್ಲಿ ಚಾರ್ಜ್‌ಶೀಟ್‌ ಸಲ್ಲಿಕೆ । ಲೆಕ್ಕಾಧಿಕಾರಿ ಪರಶುರಾಮ್‌ ಕೂಡ ತಪ್ಪಿತಸ್ಥ

ಸಾರಾಂಶ

ವಾಲ್ಮೀಕಿ ನಿಗಮದ ಅಧಿಕಾರಿ ಚಂದ್ರಶೇಖರ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಗುರುವಾರ ಇಲ್ಲಿನ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಿದ್ದಾರೆ.

ಶಿವಮೊಗ್ಗ :  ವಾಲ್ಮೀಕಿ ನಿಗಮದ ಅಧಿಕಾರಿ ಚಂದ್ರಶೇಖರ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಗುರುವಾರ ಇಲ್ಲಿನ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಿದ್ದಾರೆ.

ಶಿವಮೊಗ್ಗದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಸಿಐಡಿ ಡಿವೈಎಸ್ಪಿ ಮೊಹಮ್ಮದ್ ರಫೀಕ್ ಚಾರ್ಜ್ ಶೀಟ್ ಸಲ್ಲಿಸಿದರು. 300 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದ ಸಿಐಡಿ ಅಧಿಕಾರಿಗಳು, ಚಂದ್ರಶೇಖರ ಅವರ ಹೆಂಡತಿ ಮತ್ತು ನಿಗಮದ ಅಧಿಕಾರಿಗಳನ್ನು ಸಾಕ್ಷ್ಯ ಮಾಡಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡ ಚಂದ್ರಶೇಖರ್ ಅವರು ಡೆತ್ ನೋಟ್‌ನಲ್ಲಿ ಬರೆದಿದ್ದ ನಿಗಮದ ವ್ಯವಸ್ಥಾಪಕ ನಿರ್ದೇಶಕ ಹಾಗೂ ಎ1 ಆರೋಪಿ ಜೆ.ಜಿ.ಪದ್ಮನಾಭ ಹಾಗೂ ನಿಗಮದ ಲೆಕ್ಕಾಧಿಕಾರಿಯಾಗಿರುವ ಎ2 ಆರೋಪಿ, ಪರಶುರಾಮ್‌ ತಪ್ಪಿತಸ್ಥರೆಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ. ಜೊತೆಗೆ, ಚಂದ್ರಶೇಖರ್‌ ಕೂಡ ನಿಗಮದ ಹಗರಣದಲ್ಲಿ ಪಾಲು ಪಡೆದಿದ್ದಾರೆ ಎಂದು ತಿಳಿಸಿದ್ದಾರೆ.

ಚಂದ್ರಶೇಖರ್ ಆತ್ಮಹತ್ಯೆಗೆ ನಿಗಮದ ಎಂ.ಡಿ.ಪದ್ಮನಾಭ ಮತ್ತು ಪರಶುರಾಮ್‌ ಕಾರಣ. ಜೊತೆಗೆ ಆತ್ಮಹತ್ಯೆ ಮಾಡಿಕೊಂಡ ಚಂದ್ರಶೇಖರ್‌ ಕೂಡ ನಿಗಮದ ಹಗರಣದಲ್ಲಿ ಒಂದಿಷ್ಟು ಹಣವನ್ನು ಪಡೆದಿದ್ದರು. ಚಂದ್ರಶೇಖರ್ ಅವರನ್ನು ಗೋವಾ ಮತ್ತು ಹೈದ್ರಾಬಾದ್‌ ಗೆ ಕರೆದುಕೊಂಡು ಹೋದ ಪದ್ಮನಾಭ ಮತ್ತು ಪರಶುರಾಮ್‌, ಒತ್ತಡ ಹಾಕಿದ್ದರು. ‘ನೀನು ಹಣ ಪಡೆದಿದ್ದೀಯ.. ಪ್ರಕರಣ ಬೆಳಕಿಗೆ ಬಂದ್ರೆ ನೀನೊಬ್ಬನೇ ಜೈಲಿಗೆ ಹೋಗ್ತಿಯ’ ಎಂದು ಬೆದರಿಕೆ ಹಾಕಿದ್ದರು. ‘ನಿನ್ನ ವಿರುದ್ಧ ನಾವೇ ದೂರು ಕೊಡ್ತೀವಿ’ ಎಂದು ಭಯ ಬೀಳಿಸಿದ್ದರು. ಹೀಗಾಗಿ ಪ್ರಕರಣ ಬೆಳಕಿಗೆ ಬಂದು ಸಿಕ್ಕಿಬೀಳುವ ಭಯಕ್ಕೆ ಒಳಗಾದ ಚಂದ್ರಶೇಖರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಚಾರ್ಜ್‌ಶೀಟ್‌ ನಲ್ಲಿ ಉಲ್ಲೇಖಿಸಲಾಗಿದೆ.

ಚಾರ್ಜ್‌ಶೀಟ್‌ ಸಲ್ಲಿಕೆ ಬೆನ್ನಲ್ಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ತನಿಖೆ ಮಾಡಬೇಕಾಗಿದ್ದು, ಇನ್ನಷ್ಟು ಮಾಹಿತಿ ಕ್ರೋಢೀಕರಣಕ್ಕೆ ಕಾಲಾವಕಾಶ ಕೋರಿದ್ದಾರೆ.

ಇಲ್ಲಿನ ವಿನೋಬನಗರದ ತಮ್ಮ ಮನೆಯಲ್ಲಿ 2024ರ ಮೇ 26 ರಂದು ಚಂದ್ರಶೇಖರ್‌ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಪ್ರಾಥಮಿಕ ಹಂತದ ಚಾರ್ಜ್‌ಶೀಟ್‌ ಸಲ್ಲಿಸಿದ್ದಾರೆ. ಚಂದ್ರಶೇಖರ್ ಆತ್ಮಹತ್ಯೆ ಮಾಡಿಕೊಂಡು 60 ದಿನಗಳು ಮುಗಿಯುತ್ತಿದ್ದ ಹಿನ್ನೆಲೆಯಲ್ಲಿ ಈ ಚಾರ್ಜ್‌ಶೀಟ್‌ ನ್ನು ಗುರುವಾರ ಸಲ್ಲಿಸಲಾಯಿತು.

Share this article