ನಟ ದರ್ಶನ್ ಗ್ಯಾಂಗ್‌ನಿಂದ ಹಲ್ಲೆಗೆ ಒಳಗಾಗಿದ್ದ ಚಿತ್ರದುರ್ಗದ ರೇಣುಕಾಸ್ವಾಮಿ ತಲೆಗೆ ಗಂಭೀರ ಸ್ವರೂಪದ ಪೆಟ್ಟು ಬಿದ್ದ ಪರಿಣಾಮ ಸಾವನ್ನಪ್ಪಿದ್ದಾನೆ ಎಂದು ಮರಣೋತ್ತರ ಪರೀಕ್ಷಾ ವರದಿಯಲ್ಲಿ ವಿಕ್ಟೋರಿಯಾ ಆಸ್ಪತ್ರೆ ವೈದ್ಯರು ಉಲ್ಲೇಖಿಸಿದ್ದಾರೆ ಎಂದು ತಿಳಿದು ಬಂದಿದೆ.
ಬೆಂಗಳೂರು : ನಟ ದರ್ಶನ್ ಗ್ಯಾಂಗ್‌ನಿಂದ ಹಲ್ಲೆಗೆ ಒಳಗಾಗಿದ್ದ ಚಿತ್ರದುರ್ಗದ ರೇಣುಕಾಸ್ವಾಮಿ ತಲೆಗೆ ಗಂಭೀರ ಸ್ವರೂಪದ ಪೆಟ್ಟು ಬಿದ್ದ ಪರಿಣಾಮ ಸಾವನ್ನಪ್ಪಿದ್ದಾನೆ ಎಂದು ಮರಣೋತ್ತರ ಪರೀಕ್ಷಾ ವರದಿಯಲ್ಲಿ ವಿಕ್ಟೋರಿಯಾ ಆಸ್ಪತ್ರೆ ವೈದ್ಯರು ಉಲ್ಲೇಖಿಸಿದ್ದಾರೆ ಎಂದು ತಿಳಿದು ಬಂದಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರಿಗೆ ಮರಣೋತ್ತರ ಪರೀಕ್ಷೆ ಕುರಿತು ವೈದ್ಯರು ಮೌಖಿಕ ವರದಿ ಸಲ್ಲಿಸಿದ್ದು, ಇದರಲ್ಲಿ ಆತನ ಸಾವಿಗೆ ತಲೆಗೆ ಬಿದ್ದು ಕಾರಣವಾಗಿದೆ ಎಂದು ಹೇಳಿದ್ದಾರೆ ಎನ್ನಲಾಗಿದೆ. ರೇಣುಕಾಸ್ವಾಮಿ ಮೃತದೇಹದ ಮೇಲೆ ಗಾಯದ ಗುರುತುಗಳು ಪತ್ತೆಯಾಗಿವೆ. ಆತನ ಮರ್ಮಾಂಗ, ಎದೆ, ಕೈ-ಕಾಲು, ಕುತ್ತಿಗೆ ಹಾಗೂ ತಲೆಗೆ ಪೆಟ್ಟಾಗಿದೆ. ಮರ್ಮಾಂಗಕ್ಕೆ ಪ್ರಾಣಾಂತಿಕ ಪೆಟ್ಟು ಬಿದ್ದರೆ ನೋವಿನಿಂದ ಹೃದಯಾಘಾತವಾಗಿ ಸಾವನ್ನಪುತ್ತಾರೆ. ಆದರೆ ರೇಣುಕಾಸ್ವಾಮಿ ತಲೆಗೆ ಬಿದ್ದ ಪೆಟ್ಟು ಸಾವಿಗೆ ಕಾರಣವಾಗಿದೆ ಎಂದು ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.
ಬೆಂಗಳೂರಿನ ರಾಜರಾಜೇಶ್ವರಿ ನಗರದ ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿ ಮೇಲೆ ನಟ ದರ್ಶನ್ ಗ್ಯಾಂಗ್ ಹಲ್ಲೆ ನಡೆಸಿದ್ದರು. ಆ ವೇಳೆ ಆತನ ತಲೆಗೆ ಬಲವಾಗಿ ಹೊಡೆದ ಕಾರಣ ಪೆಟ್ಟು ಬಿದ್ದಿದೆ. ಆದರೆ ತಲೆಗೆ ಗಾಯವಾದರೂ ರಕ್ತಸ್ರಾವವಾಗಿಲ್ಲ. ಹೀಗಾಗಿ ತಲೆಯೊಳಗೆ ರಕ್ತ ಹೆಪ್ಪುಗಟ್ಟಿ ರೇಣುಕಾಸ್ವಾಮಿ ಮೃತಪಟ್ಟಿದ್ದಾನೆ. ಅಲ್ಲದೆ ಹಲ್ಲೆ ವೇಳೆ ಆರೋಪಿಗಳು ಬಲವಾಗಿ ತಳ್ಳಿದಾಗ ಹಿಂಭಾಗಕ್ಕೆ ಬಿದ್ದು ಆತ ಮೃತಟ್ಟಿರುವ ಸಾಧ್ಯತೆಗಳಿವೆ. ಇನ್ನು ಮರಣೋತ್ತರ ಪರೀಕ್ಷೆಯ ಅಂತಿಮ ವರದಿ ಸಲ್ಲಿಕೆಯಾದ ಬಳಿಕ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತದೆ. ಎಫ್‌ಎಸ್‌ಎಲ್ ತಜ್ಞರು ಪರಿಶೀಲಿಸಿದ ಸಾವಿಗೆ ನಿಖರ ಕಾರಣ ಸ್ಪಷ್ಟಪಡಿಸಲಿದ್ದಾರೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.