ಮೇಲ್ಸೇತುವೆಯಲ್ಲಿ ವೋಲ್ವೋ ಬಸ್‌ ಸರಣಿ ಅಪಘಾತ

KannadaprabhaNewsNetwork |  
Published : Aug 14, 2024, 12:50 AM IST
BMTC 4 | Kannada Prabha

ಸಾರಾಂಶ

ನಿಯಂತ್ರಣ ತಪ್ಪಿದ ಬಿಎಂಟಿಸಿ ವೋಲ್ವೋ ಬಸ್‌ 3 ಬೈಕ್‌, 3 ಕಾರುಗಳಿಗೆ ಗುದ್ದಿದೆ. ಓರ್ವ ಬೈಕ್ ಸವಾರ ಗಾಯಗೊಂಡಿರುವ ಘಟನೆ ಹೆಬ್ಬಾಳ ಫ್ಲೈಓವರ್‌ನಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದ ಹೆಬ್ಬಾಳ ಮೇಲ್ಸೇತುವೆಯಲ್ಲಿ ಬಿಎಂಟಿಸಿ ವೋಲ್ವೋ ಬಸ್‌ ಚಾಲಕನ ನಿಯಂತ್ರಣ ತಪ್ಪಿ ಅಡ್ಡಾದಿಡ್ಡಿ ಚಲಿಸಿದ ಪರಿಣಾಮ ಸಂಭವಿಸಿದ ಸರಣಿ ಅಪಘಾತದಲ್ಲಿ ಓರ್ವ ಗಾಯಗೊಂಡ ಘಟನೆ ನಡೆದಿದೆ.

ಎಚ್‌ಎಸ್‌ಆರ್‌ ಲೇಔಟ್‌ ಕಡೆಗೆ ಸಾಗುತ್ತಿದ್ದ ಬಸ್‌ ಅಪಘಾತಕ್ಕೀಡಾಗಿದ್ದು, ಘಟನೆಯಲ್ಲಿ ಗಾಯಗೊಂಡ ಬೈಕ್ ಸವಾರ ಅಕಾಶ್ ಪಾಟೀಲ್‌ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಈ ಅವಘಡದಲ್ಲಿ ಮೂರು ಬೈಕ್ ಹಾಗೂ ಮೂರು ಕಾರುಗಳು ಜಖಂಗೊಂಡಿವೆ ಎಂದು ಪೊಲೀಸರು ಹೇಳಿದ್ದಾರೆ.

ಹೆಬ್ಬಾಳ ಮೇಲ್ಸೇತುವೆ ಮೂಲಕ ಎಚ್‌ಎಸ್‌ಆರ್‌ ಲೇಔಟ್‌ ಕಡೆಗೆ ವೋಲ್ವೋ ಬಸ್ ಸಾಗುತ್ತಿತ್ತು. ಆಗ ಎಸ್‌.ಟಿ.ಮಾಲ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಮೊದಲು ಬೈಕ್‌ಗೆ ಬಸ್ ಡಿಕ್ಕಿಯಾಗಿದೆ. ಆನಂತರ ಮೂರು ಕಾರುಗಳಿಗೆ ಅಪ್ಪಳಿಸಿ ಕೊನೆ ಬಸ್ ನಿಂತಿದೆ. ಯಲಹಂಕ ಕಡೆಯಿಂದ ಆರ್‌.ಟಿ.ನಗರಕ್ಕೆ ಬೈಕ್‌ನಲ್ಲಿ ಅಕಾಶ್ ತೆರಳುತ್ತಿದ್ದರು. ಅಪಘಾತದಲ್ಲಿ ಗಾಯಗೊಂಡ ಆವರನ್ನು ಕೂಡಲೇ ರಕ್ಷಿಸಿ ಸಮೀಪದ ಖಾಸಗಿ ಆಸ್ಪತ್ರೆಗೆ ಸಾರ್ವಜನಿಕರು ದಾಖಲಿಸಿದ್ದಾರೆ. ಚಿಕಿತ್ಸೆಗೆ ಅವರು ಸ್ಪಂದಿಸುತ್ತಿದ್ದು, ಗಾಯಾಳು ಪ್ರಾಣಪಾಯದಿಂದ ಸುರಕ್ಷಿತವಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹೆಬ್ಬಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಾಲಕ ಅಮಾನತು

ಬೆಂಗಳೂರು: ಹೆಬ್ಬಾಳದ ಎಸ್ಟೀಮ್‌ ಮಾಲ್‌ ಎದುರಿನಲ್ಲಿ ಬಿಎಂಟಿಸಿ ವೋಲ್ವೋ ಬಸ್‌ನಿಂದ ಉಂಟಾದ ಸರಣಿ ಅಪಘಾತಕ್ಕೆ ಸಂಬಂಧಿಸಿದಂತೆ ಚಾಲಕನನ್ನು ಅಮಾನತು ಮಾಡಿರುವ ನಿಗಮ, ಪ್ರಕರಣಕ್ಕೆ ಸಂಬಂಧಿಸಿದಂತೆ ಇಲಾಖಾ ಪರಿಶೀಲನೆಗೆ ಆದೇಶಿಸಿದೆ.

ಆ.12ರಂದು ಬೆಳಗ್ಗೆ 9.25ಕ್ಕೆ ಎಸ್ಟೀಮ್‌ ಮಾಲ್‌ ಬಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಿಂದ ಎಚ್‌ಎಸ್‌ಆರ್‌ ಲೇಔಟ್‌ ಕಡೆಗೆ ಸಾಗುತ್ತಿದ್ದ ವೋಲ್ವೋ ಬಸ್‌ ಏಕಾಏಕಿ ಬಸ್‌ ಹಾಗೂ ಕಾರುಗಳಿಗೆ ಡಿಕ್ಕಿ ಹೊಡೆದಿದೆ. ಸರಣಿ ಅಪಘಾತದಿಂದ ಬೈಕ್‌ ಸವಾರರೊಬ್ಬರಿಗೆ ಗಂಭೀರ ಗಾಯಗಳಾಗಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವೋಲ್ವೋ ಬಸ್‌ ಚಲಾಯಿಸುತ್ತಿದ್ದ ಚಾಲಕ ರಾಜಕುಮಾರ್‌ ಅವರನ್ನು ಅಮಾನತು ಮಾಡಲಾಗಿದೆ. ಅಪಘಾತಕ್ಕೆ ಸೂಕ್ತ ಕಾರಣ ತಿಳಿಯಲು ಇಲಾಖಾ ತನಿಖೆಗೆ ಆದೇಶಿಸಲಾಗಿದೆ.

PREV

Recommended Stories

ಡ್ರಗ್ಸ್ ನಂಟು: ಇನ್ಸ್‌ಪೆಕ್ಟರ್ ಸೇರಿ 11 ಪೊಲೀಸ್‌ ಸಸ್ಪೆಂಡ್‌
ದುಷ್ಕರ್ಮಿಗಳಿಂದ ಯುವಕನ ಕೊಲೆ; ಪೊಲೀಸರಿಂದ ಸಹೋದರನ ವಿಚಾರಣೆ