ತನ್ನ ಆಟೋ ಡಿಕ್ಕಿಯಿಂದ ಗಾಯಗೊಂಡ ಮಹಿಳೆ ಚಿಕಿತ್ಸೆ ಫಲಿಸದೆ ಸಾವನ್ನಪಿದ ಬಳಿಕ ಭೀತಿಗೊಂಡು ಮೃತದೇಹವನ್ನು ಕಸದ ರಾಶಿಗೆ ಬಿಸಾಡಿ ಚಾಲಕನೊಬ್ಬ ಪರಾರಿಯಾಗಿರುವ ಘಟನೆ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ತನ್ನ ಆಟೋ ಡಿಕ್ಕಿಯಿಂದ ಗಾಯಗೊಂಡ ಮಹಿಳೆ ಚಿಕಿತ್ಸೆ ಫಲಿಸದೆ ಸಾವನ್ನಪಿದ ಬಳಿಕ ಭೀತಿಗೊಂಡು ಮೃತದೇಹವನ್ನು ಕಸದ ರಾಶಿಗೆ ಬಿಸಾಡಿ ಚಾಲಕನೊಬ್ಬ ಪರಾರಿಯಾಗಿರುವ ಘಟನೆ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕೆಂಗೇರಿ ಉಪನಗರ ನಿವಾಸಿ ಕೆಂಪಮ್ಮ (50) ಮೃತ ದುರ್ದೈವಿ. ಈ ಕೃತ್ಯ ಎಸಗಿ ಪರಾರಿಯಾಗಿರುವ ಆರೋಪಿ ಪತ್ತೆಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಕೆಂಗೇರಿ ಉಪನಗರದ ಮುಖ್ಯರಸ್ತೆಯಲ್ಲಿ ಭಾನುವಾರ ರಾತ್ರಿ ಮೃತ ಕೆಂಪಮ್ಮ ಅವರು ರಸ್ತೆ ದಾಟುವಾಗ ಈ ಘಟನೆ ನಡೆದಿದೆ.
ಕಸದ ರಾಶಿಯಲ್ಲಿ ಮೃತದೇಹವನ್ನು ಸೋಮವಾರ ನೋಡಿ ಪೊಲೀಸ್ ನಿಯಂತ್ರಣ ಕೊಠಡಿಗೆ ಸಾರ್ವಜನಿಕರು ಕರೆ ಮಾಡಿದ್ದರು. ಆರಂಭದಲ್ಲಿ ಮಹಿಳೆ ಕೊಲೆಯಾಗಿದೆ ಎಂಬ ಶಂಕೆ ವ್ಯಕ್ತವಾಯಿತು. ಆದರೆ ಅಪರಿಚಿತ ಮಹಿಳೆಯ ಸಾವಿನ ಹಿಂದಿನ ಕಾರಣ ಪತ್ತೆಗೆ ಇನ್ಸ್‌ಪೆಕ್ಟರ್ ಜಗದೀಶ್ ನೇತೃತ್ವದ ತಂಡವು ತನಿಖೆಗಿಳಿದಿದೆ. ಕೊನೆಗೆ ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಮಹಿಳೆ ಸಾವಿನ ರಹಸ್ಯ ಬಯಲಾಗಿದೆ. ಇದು ಕೊಲೆಯಲ್ಲ ಅಪಘಾತ ಎಂಬುದು ಖಚಿತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗುದ್ದಿಸಿ ಚಿಕಿತ್ಸೆಗೆ ಕರೆದೊಯ್ದಿದ್ದ ಚಾಲಕ
ತಮ್ಮ ಕುಟುಂಬದ ಜತೆ ಕೆಂಗೇರಿ ಉಪನಗರದ ವಿನಾಯಕ ಲೇಔಟ್‌ನಲ್ಲಿ ಮಂಡ್ಯ ಜಿಲ್ಲೆಯ ಕೆಂಪಮ್ಮ ನೆಲೆಸಿದ್ದರು. ಕೆಲಸದ ನಿಮಿತ್ತ ಹೊರ ಹೋಗಿ ರಾತ್ರಿ ಮನೆಗೆ ಮರಳಲು ರಸ್ತೆ ದಾಟುತ್ತಿದ್ದಾಗ ಅವರಿಗೆ ಆಟೋ ಡಿಕ್ಕಿಯಾಗಿದೆ. ಕೂಡಲೇ ತನ್ನ ಆಟೋದಲ್ಲೇ ಗಾಯಾಳುವನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಚಾಲಕ ಕರೆದೊಯ್ದಿದ್ದಾನೆ. ಆದರೆ ಚಿಕಿತ್ಸೆ ಫಲಿಸದೆ ತೀವ್ರ ರಕ್ತಸ್ರಾವದಿಂದ ಕೆಂಪಮ್ಮ ಮೃತಪಟ್ಟಿದ್ದಾರೆ. ಬಳಿಕ ಮೃತದೇಹವನ್ನು ತನ್ನ ಆಟೋದಲ್ಲಿ ತೆಗೆದುಕೊಂಡು ಬಂದ ಚಾಲಕ, ಭಯಗೊಂಡು ರಸ್ತೆ ಬದಿಯ ಕಸದ ರಾಶಿಗೆ ಎಸೆದು ಪರಾರಿಯಾಗಿದ್ದಾನೆ. ಆ ಕಸದ ರಾಶಿಯಲ್ಲಿ ಅಪರಿಚಿತ ಮಹಿಳೆ ಮೃತದೇಹ ನೋಡಿ ಪೊಲೀಸ್ ನಿಯಂತ್ರಣ ಕೊಠಡಿ (ನಮ್ಮ-112)ಗೆ ಸಾರ್ವಜನಿಕರು ಕರೆ ಮಾಡಿ ತಿಳಿಸಿದರು. ಆರಂಭದಲ್ಲಿ ಇದೊಂದು ಹತ್ಯೆ ಎಂದು ಪೊಲೀಸರಿಗೆ ಗುಮಾನಿ ಬಂದಿದೆ. ಆದರೆ ತನಿಖೆ ಮುಂದುವರಿದಂತೆ ಕೆಂಪಮ್ಮ ಅವರ ಸಾವಿನ ಕಾರಣ ಪತ್ತೆಯಾಗಿದೆ. ಈಗ ಚಾಲಕನ ಪತ್ತೆಗೆ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದಾರೆ.
ಅಪಘಾತ ಎಂಬುದು ಖಚಿತವಾದ ಹಿನ್ನೆಲೆಯಲ್ಲಿ ಪ್ರಕರಣವನ್ನು ಕಾನೂನು ಮತ್ತು ಸುವ್ಯವಸ್ಥೆ ಠಾಣೆಯಿಂದ ಕೆಂಗೇರಿ ಸಂಚಾರ ಠಾಣೆಗೆ ಮುಂದಿನ ತನಿಖೆಗೆ ವರ್ಗಾವಣೆಯಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
-ಮಹಿಳೆ ಭಾನುವಾರ ರಾತ್ರಿ ಮನೆಗೆ ಮರಳಲು ರಸ್ತೆ ದಾಟುತ್ತಿದ್ದಾಗ ಆಟೋ ಡಿಕ್ಕಿಯಾಗಿದೆ -ಚಾಲಕ ಕೂಡಲೇ ತನ್ನ ಆಟೋದಲ್ಲೇ ಗಾಯಾಳುವನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾನೆ- ಆದರೆ ಚಿಕಿತ್ಸೆ ಫಲಿಸದೆ ತೀವ್ರ ರಕ್ತಸ್ರಾವದಿಂದ ಆ ಮಹಿಳೆ ಮೃತಪಟ್ಟಿದ್ದಾಳೆ- ಬಳಿಕ ಶವ ಆಟೋದಲ್ಲಿ ತಂದ ಚಾಲಕ ಹೆದರಿ ರಸ್ತೆ ಬದಿ ಕಸದ ರಾಶಿಗೆ ಎಸೆದು ಎಸ್ಕೇಪ್
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.