ಅನಾರೋಗ್ಯ ಪೀಡಿತ ವೃದ್ಧರ ಆರೈಕೆಗಿದ್ದ ಮನೆಯಲ್ಲೇ ಚಿನ್ನಾಭರಣ ಕದ್ದ ಕಳ್ಳಿ, ಪತಿ ಸೆರೆ

KannadaprabhaNewsNetwork | Updated : Mar 22 2025, 04:27 AM IST

ಸಾರಾಂಶ

ಅನಾರೋಗ್ಯ ಪೀಡಿತ ವೃದ್ಧೆಯ ಆರೈಕೆಗೆ ನೇಮಕಗೊಂಡಿದ್ದ ಮನೆಯಲ್ಲೇ ಚಿನ್ನಾಭರಣ ಹಾಗೂ ನಗದು ಕಳವು ಮಾಡಿ ಪರಾರಿಯಾಗಿದ್ದ ಕೆಲಸದ ಮಹಿಳೆ ಹಾಗೂ ಕೃತ್ಯಕ್ಕೆ ಕೈಜೋಡಿಸಿದ್ದ ಆಕೆಯ ಪತಿ ಸೇರಿ ಇಬ್ಬರನ್ನು ಹೆಣ್ಣೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

 ಬೆಂಗಳೂರು : ಅನಾರೋಗ್ಯ ಪೀಡಿತ ವೃದ್ಧೆಯ ಆರೈಕೆಗೆ ನೇಮಕಗೊಂಡಿದ್ದ ಮನೆಯಲ್ಲೇ ಚಿನ್ನಾಭರಣ ಹಾಗೂ ನಗದು ಕಳವು ಮಾಡಿ ಪರಾರಿಯಾಗಿದ್ದ ಕೆಲಸದ ಮಹಿಳೆ ಹಾಗೂ ಕೃತ್ಯಕ್ಕೆ ಕೈಜೋಡಿಸಿದ್ದ ಆಕೆಯ ಪತಿ ಸೇರಿ ಇಬ್ಬರನ್ನು ಹೆಣ್ಣೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬನ್ನೇರುಘಟ್ಟ ರಸ್ತೆ ನಿವಾಸಿ ಸೋನಿಯಾ (25) ಮತ್ತು ಪ್ರದೀಪ್‌ (26) ಬಂಧಿತ ದಂಪತಿ. ಆರೋಪಿಗಳಿಂದ ₹20.24 ಲಕ್ಷ ಮೌಲ್ಯದ 253 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಹೆಣ್ಣೂರಿನ ಅಪಾರ್ಟ್‌ಮೆಂಟ್‌ವೊಂದರಲ್ಲಿ ಅನಾರೋಗ್ಯಪೀಡಿತ ವೃದ್ಧೆಯ ಆರೈಕೆ ಮಾಡಲು ಡಿ.31ರಂದು ಸೋನಿಯಾಳನ್ನು ಕೆಲಸಕ್ಕೆ ನೇಮಿಸಿಕೊಳ್ಳಲಾಗಿತ್ತು. ಜ.11ರಂದು ಕೆಲಸ ಮುಗಿಸಿ ಹೋಗಿದ್ದ ಸೋನಿಯಾ ಮತ್ತೆ ಬಂದಿರಲಿಲ್ಲ. 

ಏಕಾಏಕಿ ಮೊಬೈಲ್‌ ಸ್ವಿಚ್ಡ್‌ ಆಫ್‌ ಆಗಿತ್ತು. ಆಗ ಅನುಮಾನಗೊಂಡ ಮನೆ ಮಾಲೀಕರು ಬೀರು ತೆರೆದು ಪರಿಶೀಲಿಸಿದಾಗ ಚಿನ್ನಾಭರಣ ಹಾಗೂ ನಗದು ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿದ್ದರು. ತನಿಖೆ ವೇಳೆ ವಿವಿಧ ಮೂಲಗಳಿಂದ ಮಾಹಿತಿ ಕಲೆ ಹಾಕಿ ಎಚ್‌ಬಿಆರ್‌ ಲೇಔಟ್‌ನ 4ನೇ ಬ್ಲಾಕ್‌ ಬಳಿ ಸೋನಿಯಾ ಮತ್ತು ಆಕೆಯ ಪತಿ ಪ್ರದೀಪ್‌ನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಅಪಾರ್ಟ್‌ಮೆಂಟ್‌ನಲ್ಲಿ ಕಳ್ಳತನ ಮಾಡಿದ್ದು ತಾನೇ ಎಂದು ಸೋನಿಯಾ ತಪ್ಪೊಪ್ಪಿಕೊಂಡಿದ್ದಾಳೆ. ಸದ್ಯ ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಜಾಮೀನು ಪಡೆದಿದ್ದ ಹಳೇ ಕಳ್ಳಿ:

ಹೆಚ್ಚಿನ ವಿಚಾರಣೆ ವೇಳೆ ಆರೋಪಿಗಳು ವಿಲಾಸಿ ಜೀವನ ನಡೆಸುವ ಸಲುವಾಗಿ ಕಳ್ಳತನ ಮಾಡುತ್ತಿದ್ದಾಗಿ ಹೇಳಿದ್ದಾರೆ. ಈ ಹಿಂದೆ ಬೈಯಪ್ಪನಹಳ್ಳಿ ಮತ್ತು ಕೋಣನಕುಂಟೆಯಲ್ಲಿ ಮನೆಗಳವು ಮಾಡಿ ಜೈಲು ಸೇರಿದ್ದರು. ಜಾಮೀನು ಪಡೆದು ಹೊರಬಂದ ಬಳಿಕವೂ ಕಳ್ಳತನ ಮಾಡುತ್ತಿದ್ದರು. ಕದ್ದ ಚಿನ್ನಾಭರಣಗಳನ್ನು ಆಂಧ್ರಪ್ರದೇಶದ ನೆಲ್ಲೂರಿನ ಜುವೆಲರಿ ಅಂಗಡಿಯಲ್ಲಿ ಮಾರುತ್ತಿದ್ದರು. ಅಂತೆಯೆ ಕೆಲ ಅಭರಣಗಳನ್ನು ಕೊತ್ತನೂರು ದಿಣ್ಣೆಯ ಸ್ನೇಹಿತನಿಗೆ ನೀಡಿದ್ದರು. ಈ ಬಗ್ಗೆ ಮಾಹಿತಿ ಪಡೆದು ಒಟ್ಟು 253 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಆರೋಪಿಗಳ ಬಂಧನದಿಂದ ಹೆಣ್ಣೂರು ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದ ಮನೆಗಳವು ಪ್ರಕರಣ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Share this article