ಮದ್ದೂರು : ತಾಲೂಕಿನ ಕೆಸ್ತೂರು ಪೊಲೀಸ್ ಠಾಣೆ ವ್ಯಾಪ್ತಿಯ ಮಾಚಹಳ್ಳಿ ಬಳಿ ಶುಕ್ರವಾರ ಸಾರಿಗೆ ಸಂಸ್ಥೆ ಬಸ್ ಹಾಗೂ ಕಾರು ನಡುವೆ ಸಂಭವಿಸಿದ್ದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮತ್ತೊರ್ವ ಮಹಿಳೆ ಮೃತಪಟ್ಟಿದ್ದಾರೆ.
ಅಪಘಾತದಲ್ಲಿ ಬೆಂಗಳೂರು ರಾಜರಾಜೇಶ್ವರಿ ನಗರದ ಧರ್ಮರಾಜ್ ಪುತ್ರ ಡಿ.ಶಿವಕುಮಾರ್ ಸ್ಥಳದಲ್ಲೇ ಮೃತಪಟ್ಟಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಈತನ ಅತ್ತಿಗೆ ಮಮತಾ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಸಂಜೆ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯ ಕೊನೆ ಉಸಿರೆಳೆದಿದ್ದಾರೆ.
ಮದ್ದೂರು ಆಸ್ಪತ್ರೆಯಲ್ಲಿ ಶಿವಕುಮಾರ್ ಶವದ ಮರಣೋತ್ತರ ಪರೀಕ್ಷೆ ನಂತರ ಅಂತ್ಯಕ್ರಿಯೆ ನಡೆಸಲಾಗಿತ್ತು . ಮಮತಾ ಅವರ ಶವವನ್ನು ಬೆಂಗಳೂರಿನಿಂದ ಮದ್ದೂರು ಆಸ್ಪತ್ರೆಗೆ ತಂದು ಶನಿವಾರ ಶವ ಪರೀಕ್ಷೆ ನಡೆಸಿದ ನಂತರ ಬೆಂಗಳೂರಿಗೆ ಕೊಂಡೊಯ್ದು ಸಂಜೆ ಅಂತ್ಯಕ್ರಿಯೆ ನಡೆಸಿದರು.
ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮದ್ದೂರು ಸಾರಿಗೆ ಸಂಸ್ಥೆ ಬಸ್ ಡಿಪೋ ಚಾಲಕ ಲೋಕೇಶ್ ಹಾಗೂ ನಿರ್ವಾಹಕಿ ಯಶೋಧ ಸೇರಿದಂತೆ ಎಲ್ಲಾ 18 ಮಂದಿ ಪ್ರಯಾಣಿಕರು ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಡಿಪೋ ವ್ಯವಸ್ಥಾಪಕರು ತಿಳಿಸಿದ್ದಾರೆ.
ಅಪಘಾತ ಸ್ಥಳಕ್ಕೆ ಮಳವಳ್ಳಿ ಉಪ ವಿಭಾಗದ ಡಿವೈಎಸ್ಪಿ ಯಶವಂತ ಕುಮಾರ್ ಹಾಗೂ ಗ್ರಾಮಾಂತರ ವೃತ್ತ ನಿರೀಕ್ಷಕ ನಾರಾಯಣಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮದ್ದೂರು : ತಾಲೂಕಿನ ಮಾಚಹಳ್ಳಿ ಸಮೀಪ ಸಾರಿಗೆ ಸಂಸ್ಥೆ ಬಸ್ ಹಾಗೂ ಕಾರಿನ ನಡುವೆ ಶುಕ್ರವಾರ ಸಂಭವಿಸಿದ ಅಪಘಾತದಲ್ಲಿ ಮೃತರಾದವಪ ಮೈ ಮೇಲಿದ್ದ ಲಕ್ಷಾಂತರ ರು. ಮೌಲ್ಯದ ಚಿನ್ನಾಭರಣಗಳನ್ನು ರಕ್ಷಣೆಗೆ ಬಂದಿದ್ದ ಕೆಲ ಕಿಡಿಗೇಡಿಗಳು ದೋಚಿರುವ ಘಟನೆ ಜರುಗಿದೆ.
ಅಪಘಾತದಲ್ಲಿ ಡಿ.ಶಿವಕುಮಾರ್ ಸ್ಥಳದಲ್ಲೇ ಮೃತಪಟ್ಟರೆ. ತೀವ್ರವಾಗಿ ಗಾಯಗೊಂಡಿದ್ದ ಈತನ ಅತ್ತಿಗೆ ಎಸ್.ಮಮತಾ ಕೂಡ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದರು. ಅಪಘಾತ ಸ್ಥಳದಲ್ಲಿ ರಕ್ಷಣೆ ಸೋಗಿನಲ್ಲಿ ಬಂದಿದ್ದ ಕೆಲವರು ಮೃತ ಶಿವಕುಮಾರ್ ಕೈಯಲ್ಲಿದ್ದ ಚಿನ್ನದ ಕಡಗ, ಎರಡು ಉಂಗುರ ಹಾಗೂ ಗಾಯಾಳು ಮಮತಾ ಕತ್ತಿನಲ್ಲಿದ್ದ ಎರಡು ಚಿನ್ನದ ಬಳೆ ಮತ್ತು ನಾಲ್ಕು ಉಂಗುರ ಸೇರಿದಂತೆ 75 ಗ್ರಾಂ ತೂಕವುಳ್ಳ 8.25 ಲಕ್ಷ ರು. ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ ಎಂದು ಮೃತರ ಕುಟುಂಬದವರು ಆರೋಪಿಸಿದ್ದಾರೆ.
ಕುಟುಂಬದವರು ಮೃತರ ಪಾರ್ಥಿವ ಶರೀರಗಳನ್ನು ಕೊಂಡೊಯ್ಯಲು ಬಂದಿದ್ದ ವೇಳೆ ಚಿನ್ನಾಭರಣ ಕಳವು ಪ್ರಕರಣ ಬೆಳಕಿಗೆ ಬಂದಿದೆ. ಮೃತರ ಅಂತ್ಯಕ್ರಿಯೆ ನೆರವೇರಿಸಿದ ಬಳಿಕ ಕೆಸ್ತೂರು ಪೊಲೀಸ್ ಠಾಣೆಗೆ ಚಿನ್ನಾಭರಣ ಕಳುವಿನ ಬಗ್ಗೆ ದೂರು ದಾಖಲಿಸುವುದಾಗಿ ಕುಟುಂಬದವರು ತಿಳಿಸಿದ್ದಾರೆ.