ಮಹಿಳೆ ಕೊಂದು ಸಿನಿಮಾ ಶೈಲಿನಲ್ಲಿ ಶವ ವಿಲೇವಾರಿ

KannadaprabhaNewsNetwork |  
Published : Mar 12, 2025, 01:47 AM IST
Lakshman | Kannada Prabha

ಸಾರಾಂಶ

ನಾಲ್ಕು ತಿಂಗಳ ಹಿಂದೆ ಒಂಟಿ ಮಹಿಳೆ ನಾಪತ್ತೆ ಸಂಬಂಧ ದಾಖಲಾಗಿದ್ದ ಪ್ರಕರಣ ಭೇದಿಸಿರುವ ಕೊತ್ತನೂರು ಠಾಣೆ ಪೊಲೀಸರು, ಆ ಮಹಿಳೆಯನ್ನು ಕೊಲೆ ಮಾಡಿ ಸಿನಿಮಾ ಶೈಲಿನಲ್ಲಿ ಮೃತದೇಹವನ್ನು ವಿಲೇವಾರಿ ಮಾಡಿದ್ದ ಹಂತಕನನ್ನು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಾಲ್ಕು ತಿಂಗಳ ಹಿಂದೆ ಒಂಟಿ ಮಹಿಳೆ ನಾಪತ್ತೆ ಸಂಬಂಧ ದಾಖಲಾಗಿದ್ದ ಪ್ರಕರಣ ಭೇದಿಸಿರುವ ಕೊತ್ತನೂರು ಠಾಣೆ ಪೊಲೀಸರು, ಆ ಮಹಿಳೆಯನ್ನು ಕೊಲೆ ಮಾಡಿ ಸಿನಿಮಾ ಶೈಲಿನಲ್ಲಿ ಮೃತದೇಹವನ್ನು ವಿಲೇವಾರಿ ಮಾಡಿದ್ದ ಹಂತಕನನ್ನು ಬಂಧಿಸಿದ್ದಾರೆ.

ಕೊತ್ತನೂರಿನ ನಗರೇಶ್ವರ ನಾಗೇನಹಳ್ಳಿ ಕರ್ನಾಟಕ ಕೊಳಗೇರಿ ಮಂಡಳಿ (ಕೆಎಸ್‌ಬಿ) ಕಾಲೋನಿ ನಿವಾಸಿ ಲಕ್ಷ್ಮಣ್‌ (30) ಬಂಧಿತ. 2024ರ ನ.26ರಂದು ಕೆಎಸ್‌ಬಿ ಕಾಲೋನಿ ನಿವಾಸಿ ಡಿ.ಮೇರಿ (59) ನಾಪತ್ತೆಯಾಗಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ಕೊಲೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಪ್ರಕರಣ?:

ಕೊಲೆಯಾದ ಮೇರಿಯ ಪತಿ ಹಾಗೂ ಆಕೆಯ ಏಕೈಕ ಮಗಳು ಕೆಲ ವರ್ಷಗಳ ಹಿಂದೆ ಅಕಾಲಿಕ ಮೃತಪಟ್ಟಿದ್ದು, ಮೇರಿ ಕೊತ್ತನೂರಿನ ನಗರೇಶ್ವರ ನಾಗೇನಹಳ್ಳಿ ಕೆಎಸ್‌ಬಿ ಕಾಲೋನಿಯಲ್ಲಿ ಒಂಟಿಯಾಗಿ ನೆಲೆಸಿದ್ದರು. ಹೆಣ್ಣೂರು ಕ್ರಾಸ್‌ನಲ್ಲಿರುವ ಈಕೆಯ ಸಂಬಂಧಿ ಜೆನಿಫರ್‌ ಪ್ರತಿದಿನ ಮೇರಿಗೆ ಕರೆ ಮಾಡಿ ಆರೋಗ್ಯ ವಿಚಾರಿಸುತ್ತಿದ್ದರು. 2024ರ ನ.26ರಂದು ಬೆಳಗ್ಗೆ 11.30ಕ್ಕೆ ಮೇರಿ ಮೊಬೈಲ್‌ಗೆ ಕರೆ ಮಾಡಿದಾಗ ಸ್ವಿಚ್ಡ್‌ ಆಫ್‌ ಬಂದಿದೆ. ಅನುಮಾನಗೊಂಡು ಮನೆಗೆ ಬಂದು ನೋಡಿದಾಗ ಮೇರಿ ನಾಪತ್ತೆಯಾಗಿದ್ದರು. ಹೀಗಾಗಿ ಕೊತ್ತನೂರು ಪೊಲೀಸ್‌ ಠಾಣೆಗೆ ತೆರಳಿ ಮೇರಿ ನಾಪತ್ತೆ ಸಂಬಂಧ ದೂರು ನೀಡಿದ್ದರು. ಪ್ರಕರಣ ದಾಖಲಿಸಿದ ಪೊಲೀಸರು ಮೇರಿ ಪತ್ತೆಗೆ ಹುಡುಕಾಟ ನಡೆಸಿ, ಎಲ್ಲಿಯೂ ಸಿಗದ ಹಿನ್ನೆಲೆ ಸುಮ್ಮನಾಗಿದ್ದರು.

ಆರೋಪಿ ಸಹ ನಾಪತ್ತೆಯಾಗಿದ್ದ:

ಅದೇ ಕೆಎಸ್‌ಬಿ ಕಾಲೋನಿ ನಿವಾಸಿಯಾಗಿರುವ ಲಕ್ಷ್ಮಣ್‌ ಮದುವೆಯಾಗಿದ್ದು, 3 ಮಕ್ಕಳಿವೆ. ಈತ ಕೊಳಾಯಿ ರಿಪೇರಿ ಜತೆಗೆ ಆಟೋ ಓಡಿಸಿಕೊಂಡಿದ್ದ. ಮೇರಿ ನಾಪತ್ತೆಯಾದ ಬೆನ್ನಲ್ಲೇ ಲಕ್ಷ್ಮಣ್‌ ಸಹ ನಾಪತ್ತೆಯಾಗಿದ್ದ. ಹೀಗಾಗಿ ಆತನ ಪತ್ನಿ 2024ರ ನ.29ರಂದು ಪತಿ ಲಕ್ಷ್ಮಣ್‌ ನಾಪತ್ತೆ ಸಂಬಂಧ ಡಿ.ಜೆ.ಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿದ್ದ ಡಿ.ಜೆ.ಹಳ್ಳಿ ಪೊಲೀಸರು ಆತನ ಪತ್ತೆ ಕಾರ್ಯಕ್ಕೆ ಮುಂದಾಗಿದ್ದರು. ಜೆನಿಫರ್‌, ಮೇರಿಯನ್ನು ಲಕ್ಷ್ಮಣ್‌ ಕೊಲೆ ಮಾಡಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ಕೊತ್ತನೂರು ಪೊಲೀಸರು, ಹೆಣ್ಣೂರಿನಲ್ಲಿ ತಲೆಮರೆಸಿಕೊಂಡಿದ್ದ ಲಕ್ಷ್ಮಣ್‌ನನ್ನು ಪತ್ತೆಹಚ್ಚಿ ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಮೇರಿ ಕೊಲೆ ರಹಸ್ಯ ಬಯಲಾಗಿದೆ. ಹೆಚ್ಚಿನ ವಿಚಾರಣೆಗಾಗಿ ಆರೋಪಿಯನ್ನು 5 ದಿನ ಕಸ್ಟಡಿಗೆ ಪಡೆದಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

-ಬಾಕ್ಸ್‌)ಸಾಲ ತೀರಿಸಲು ಒಂಟಿ ಮಹಿಳೆ ಕೊಲೆ

ಲಕ್ಷ್ಮಣ್‌ ಹಲವರಿಂದ ನಾಲ್ಕೈದು ಲಕ್ಷ ರು. ಸಾಲ ಪಡೆದಿದ್ದ. ಈ ಸಾಲ ತೀರಿಸಲು ಸಾಧ್ಯವಾಗದೆ ಪರದಾಡುತ್ತಿದ್ದ. ಈ ನಡುವೆ ತನ್ನದೇ ಕಾಲೋನಿಯಲ್ಲಿ ಒಂಟಿಯಾಗಿ ನೆಲೆಸಿದ್ದ ಮೇರಿ ಬಳಿ ಚಿನ್ನಾಭರಣ ಇರುವ ಬಗ್ಗೆ ತಿಳಿದುಕೊಂಡಿದ್ದ. ಹೀಗಾಗಿ ಆಕೆಯ ಕೊಲೆಗೆ ಸಂಚು ರೂಪಿಸಿದ್ದ. ಅದರಂತೆ ನ.26ರಂದು ಮೇರಿ ಮನೆಗೆ ನುಗ್ಗಿ ಕೊಲೆ ಮಾಡಿ ಮೃತದೇಹದ ಮೇಲಿದ್ದ ಸುಮಾರು 50 ಗ್ರಾಂ ಚಿನ್ನಾಭರಣ ದೋಚಿದ್ದ. ಬಳಿಕ ಮೃತದೇಹಕ್ಕೆ ಬೆಡ್‌ ಶೀಟ್‌ ಸುತ್ತಿ ತನ್ನ ಆಟೋಕ್ಕೆ ಹಾಕಿಕೊಂಡು ಬಾಗಲೂರಿನ ಹೊಸೂರು ಬಂಡೆ ಬಳಿಯ ಕಸದ ರಾಶಿಯೊಳಗೆ ಎಸೆದು ಪರಾರಿಯಾಗಿದ್ದ. -ಬಾಕ್ಸ್‌)

ಪೊಲೀಸರ ದಾರಿ ತಪ್ಪಿಸಲು ಪ್ಲ್ಯಾನ್‌

ಲಕ್ಷ್ಮಣ್‌ ಪೊಲೀಸರ ದಾರಿ ತಪ್ಪಿಸಲು ಯೋಜನೆ ರೂಪಿಸಿದ್ದು, ಯಾರಿಗಾದರೂ ಕರೆ ಮಾಡಿದರೆ ಸಿಕ್ಕಿಬೀಳುವ ಭೀತಿಯಲ್ಲಿ ಮೊಬೈಲ್‌ ಸ್ವಿಚ್ಡ್‌ ಆಫ್‌ ಮಾಡಿಕೊಂಡಿದ್ದ. ಆತನ ಮೊಬೈನ ಟವರ್‌ ಲೊಕೇಶನ್‌ ಪರಿಶೀಲಿಸಿದಾಗ ಡಿ.ಜೆ.ಹಳ್ಳಿ ತೋರಿಸಿತ್ತು. ಆರೋಪಿ 4ನೇ ಸಿಮ್‌ ಕಾರ್ಡ್‌ ಬಳಸುತ್ತಿರುವ ಬಗ್ಗೆ ಪೊಲೀಸರು ನಿಗಾವಹಿಸಿದ್ದರು. ಹೆಣ್ಣೂರಿನ ಪರಿಚಿತ ಮಹಿಳೆಯೊಬ್ಬರಿಗೆ ಆರೋಪಿ ಕರೆ ಮಾಡಿದ್ದಾಗ ಟವರ್‌ ಲೊಕೇಶನ್‌ ಆಧರಿಸಿ ಪೊಲೀಸರು ಲಕ್ಷ್ಮಣ್‌ನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ತಾನೇ ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ.-ಬಾಕ್ಸ್‌-

ಮಹಿಳೆಯ ಮೊಬೈಲ್‌ ಕಸದ ರಾಶಿಗೆ ಎಸೆದ:

ಮೇರಿ ಕೊಲೆ ಬಳಿಕ ಆಕೆಯ ಮೊಬೈಲ್‌ ಸ್ವಿಚ್ಡ್‌ ಆಫ್‌ ಮಾಡಿದ್ದ ಆರೋಪಿ ಲಕ್ಷ್ಮಣ್‌ ಬಳಿಕ ಮೃತದೇಹ ಸಾಗಿಸುವಾಗ ಮಾರ್ಗ ಮಧ್ಯೆ ಆ ಮೊಬೈಲ್‌ ಸ್ವಿಚ್‌ ಆನ್‌ ಮಾಡಿ ಕಸದ ರಾಶಿಯೊಂದಕ್ಕೆ ಎಸೆದಿದ್ದ. ಬಳಿಕ ಆ ಮೊಬೈಲ್‌ ಬ್ಯಾಟರಿ ಡೌನ್‌ ಆಗಿ ಸ್ವಿಚ್ಡ್‌ ಆಫ್‌ ಆಗಿತ್ತು. ಬಳಿಕ ಪೊಲೀಸರ ತನಿಖೆ ವೇಳೆ ಆ ಮೊಬೈಲ್‌ ಕಸದ ರಾಶಿಯಲ್ಲಿ ಪತ್ತೆಯಾಗಿತ್ತು.-ಕೋಟ್‌-

ನಾಲ್ಕು ತಿಂಗಳ ಹಿಂದೆ ದಾಖಲಾಗಿದ್ದ ಮಹಿಳೆ ನಾಪತ್ತೆ ಪ್ರಕರಣ ಪತ್ತೆಯಾಗಿದೆ. ಪರಿಚಿತ ವ್ಯಕ್ತಿಯೇ ಆಕೆಯನ್ನು ಕೊಲೆ ಮಾಡಿದ್ದು, ಸದ್ಯ ಆತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ನಿರ್ಜನಪ್ರದೇಶದಲ್ಲಿ ಮಹಿಳೆಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆಕೆಯ ಬಳಿಯಿದ್ದ ಚಿನ್ನಾಭರಣಕ್ಕಾಗಿ ಆರೋಪಿ ಕೊಲೆ ಮಾಡಿರುವುದು ಗೊತ್ತಾಗಿದ್ದು, ತನಿಖೆ ಮುಂದುವರೆದಿದೆ.

- ರಮೇಶ್‌ ಬಾನೋತ್‌, ನಗರ ಪೂರ್ವ ವಲಯ ಜಂಟಿ ಪೊಲೀಸ್‌ ಆಯುಕ್ತ

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಅಕ್ರಮ ಕೃತ್ಯಗಳಿಗೆ ‘ದಂಡ’ ವಿಧಿಸಿ ಮುಚ್ಚು ಹಾಕುತ್ತಿದ್ದ ಅಪಾರ್ಟ್ಮೆಂಟ್ ವಿರುದ್ಧ ಕೇಸು
ವಿವಾಹ ಪವಿತ್ರವಾದ ಶಾಶ್ವತ ಸಮ್ಮಿಲನ : ಹೈಕೋರ್ಟ್‌